ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಗಂಪೂರ: ಕುಡಿಯಲು ಯೋಗ್ಯವಲ್ಲದ ಕೆರೆಯ ಬಾವಿ ನೀರು

ಬಿಂದಿಗೆ ಹೊತ್ತುಕೊಂಡು ಹೊಲಕ್ಕೆ ಅಲೆಯುವುದೇ ಗತಿ; ಫಿಲ್ಟರ್‌ ನೀರೇ ಅನಿವಾರ್ಯ
Last Updated 11 ಮೇ 2021, 7:58 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕು ಕೇಂದ್ರದಿಂದ 16 ಕಿ.ಮೀ ದೂರದ ತೇಗಂಪೂರ ಗ್ರಾಮದ ಕೆರೆಯಲ್ಲಿರುವ ಬಾವಿಯಲ್ಲಿ ನೀರು ಸಾಕಷ್ಟಿದ್ದರೂ ಹಸಿರು ಬಣ್ಣಕ್ಕೆ ತಿರುಗಿದೆ. ಇದರಿಂದ ಬಾವಿಯಲ್ಲಿನ ನೀರು ಉಪಯೋಗಕ್ಕೆ ಬಾರದಂತಾಗಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ಅವರಿವರ ಹೊಲದಲ್ಲಿನ ಬೋರ್‌ವೆಲ್‌, ಫಿಲ್ಟರ್‌ ನೀರನ್ನು ಅವಲಂಬಿಸಬೇಕಾಗಿದೆ.

ಗ್ರಾಮದ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಸುಮಾರು ಒಂಬತ್ತು ವರ್ಷಗಳ ಹಿಂದೆ ಗ್ರಾಮದ ಮಹಾದೇವ ಮಂದಿರದ ಹಿಂಭಾಗದಲ್ಲಿರುವ ಊರಿನ ಕೆರೆಯಲ್ಲಿ ಬಾವಿಯನ್ನು ತೆಗೆಯಲಾಗಿದೆ.

‘ಕಳೆದ ವರ್ಷ ಉತ್ತಮ ಮಳೆ ಆಗಿರುವುದರಿಂದ ಬಾವಿಯಲ್ಲಿ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಆದರೆ, ನೀರು ಹಸಿರು ಬಣ್ಣಕ್ಕೆ ತಿರುಗಿದ ಕಾರಣ ಜನ ಕುಡಿಯಲು ಯೋಗ್ಯವಾಗಿಲ್ಲ’ ಎಂದು ಗ್ರಾಮಸ್ಥರಾದ ಬಸಪ್ಪಾ ಮೇತ್ರೆ, ಶಾಂತಕುಮಾರ ಮೆಟಾರೆ, ಅಮರ ಕುಪ್ಪೆ, ಅರುಣ ಕಾಂಬಳೆ ಅವರು ತಿಳಿಸುತ್ತಾರೆ.

ಕೆರೆಯಲ್ಲಿನ ಹೊಳೆತ್ತಿ, ಕೆರೆಯನ್ನು ಕಸಕಡ್ಡಿಗಳಿಂದ ಸ್ವಚ್ಛಗೊಳಿಸಬೇಕು ಎಂದು ಸುಮಾರು ವರ್ಷಗಳಿಂದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ, ಪಂಚಾಯತ್‌ ರಾಜ್‌ ಇಲಾಖೆ ಎಇಇ ಸೇರಿದಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಗ್ರಾಮಸ್ಥರು ಬಾವಿಯಲ್ಲಿನ ನೀರು ಮನೆಗಳ ನಳ, ಸಣ್ಣ ನೀರಿನ ಟ್ಯಾಂಕರ್‌ಗೆ ಬಂದರೂ ಬಳಕೆಗೆ ಮಾತ್ರ ಎಂಬಂತಾಗಿದೆ. ಕುಡಿಯುವ ನೀರಿಗಾಗಿ ಅವರಿವರ ಹೊಲ, ತೋಟಗಳಿಗೆ ತೆರಳಬೇಕಾಗಿದೆ. ಹಣ ಉಳ್ಳವರು ಫಿಲ್ಟರ್‌ ನೀರು ತಂದು ಕುಡಿಯುತ್ತಾರೆ. ಬಡವರ ಕಷ್ಟ ಹೇಳತೀರದಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಜೈನಾಪೂರ ರಸ್ತೆಯಲ್ಲಿ ಎರಡು, ತೇಗಂಪೂರ ತಾಂಡಾ ರಸ್ತೆ, ಅಹಮದಾಬಾದ್‌ ರಸ್ತೆಯಲ್ಲಿ ಒಂದು ಸೇರಿದಂತೆ ಒಟ್ಟು ನಾಲ್ಕು ಕೊಳವೆಬಾವಿಗಳು ಇದ್ದರೂ ಅವು ನಿಷ್ಕ್ರಿಯವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮದ ಬಾವಿಗೆ ಭೇಟಿ ನೀಡಿ ನೀರು ಶುದ್ಧೀಕರಣಕ್ಕೆ ಯೋಜನೆ ರೂಪಿಸಿ ಗ್ರಾಮಸ್ಥರಿಗೆ ಕುಡಿಯಲು ಯೋಗ್ಯ ನೀರು ಸಿಗುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT