ಬೀದರ್‌ಗೆ ಖಂಡ್ರೆ ಪರಿವಾರದ ಕೊಡುಗೆ ಏನು?: ಸಂಸದ ಭಗವಂತ ಖೂಬಾ ಆರೋಪಗಳ ಸುರಿಮಳೆ

ಮಂಗಳವಾರ, ಏಪ್ರಿಲ್ 23, 2019
32 °C

ಬೀದರ್‌ಗೆ ಖಂಡ್ರೆ ಪರಿವಾರದ ಕೊಡುಗೆ ಏನು?: ಸಂಸದ ಭಗವಂತ ಖೂಬಾ ಆರೋಪಗಳ ಸುರಿಮಳೆ

Published:
Updated:
Prajavani

ಬೀದರ್‌: ‘ಆರವತ್ತು ವರ್ಷಗಳಿಂದ ರಾಜಕೀಯದಲ್ಲಿರುವ ಖಂಡ್ರೆ ಪರಿವಾರ ಬೀದರ್‌ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಏನು ಎನ್ನುವುದನ್ನು ಬಹಿರಂಗ ಪಡಿಸಬೇಕು’ ಎಂದು ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಭಗವಂತ ಖೂಬಾ ಆಗ್ರಹಿಸಿದರು.

‘ಭಾಲ್ಕಿಯ ಚನ್ನಬಸವ ಪಟ್ಟದ್ದೇವರಿಗೆ ವಂಚನೆ ಮಾಡಿ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡ ಹಾಗೂ ದಲಿತ ಮುಖಂಡರೊಬ್ಬರ ಕೊಲೆಯಲ್ಲಿ ಕೈವಾಡವಿರುವ ಆರೋಪ ಖಂಡ್ರೆ ಪರಿವಾರದ ಮೇಲಿದೆ. ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಜಿಲ್ಲೆಯ ಜನರಿಗೆ ಈ ಕುರಿತು ಸ್ಪಷ್ಟೀಕರಣ ನೀಡಬೇಕು’ ಎಂದು ನಗರದಲ್ಲಿ ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಒಳ್ಳೆಯ ಯೋಜನೆಗಳಿಗೆ ಸಹಕರಿಸುವ ಮನಸ್ಥಿತಿ ಈಶ್ವರ ಖಂಡ್ರೆ ಅವರಿಗೆ ಇಲ್ಲ. ಕೌಠಾ ಸಮೀಪದ ಬ್ಯಾರೇಜ್‌ ದುರಸ್ತಿಗೆ ಸರ್ಕಾರ ಬಿಡುಗಡೆ ಮಾಡಿದ್ದ ₹ 40 ಕೋಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬೇರೆ ಕಡೆಗೆ ವರ್ಗಾವಣೆ ಮಾಡಿ ರೈತರಿಗೆ ಅನ್ಯಾಯ ಮಾಡಿದರು. ಗಡಿ ಭದ್ರತಾ ಪಡೆಯ ಘಟಕ ಸ್ಥಾಪನೆಗೆ ಔರಾದ್‌ನಲ್ಲಿ ಜಾಗ ಕೊಡುವಂತೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಸ್ವಂತ ಲಾಭಕ್ಕಾಗಿ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣವನ್ನು ಮಾಮನಕೇರಿಗೆ ಒಯ್ಯಲು ಪ್ರಯತ್ನಿಸಿದ್ದರು. ಇಂದಿಗೂ ಜಿಲ್ಲಾ ಆಡಳಿತ ಕಚೇರಿಗಳ ಸಂಕೀರ್ಣ ನಿರ್ಮಾಣವಾಗಿಲ್ಲ’ ಎಂದು ಖಂಡ್ರೆ ವಿರುದ್ಧ ಆರೋಪಗಳ ಸುರಿಮಳೆ ಗೈದರು.

‘ಬೀದರ್‌ಗೆ ದೇವಣಿ ತಳಿ ಅಭಿವೃದ್ಧಿ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿ ಕೇಂದ್ರ ಸರ್ಕಾರ ₹ 7 ಕೋಟಿ ಬಿಡುಗಡೆ ಮಾಡಿದರೂ ಅದನ್ನು ಬಳಸಿಕೊಳ್ಳಲಿಲ್ಲ. ಎಟಿಐ ಸ್ಥಾಪನೆಗೆ ಪ್ರಯತ್ನಿಸಿದರೂ ಖಂಡ್ರೆ ಅವರು ಅದಕ್ಕೆ ಸ್ಪಂದಿಸಲಿಲ್ಲ. ಇವೆರಡೂ ಬಳ್ಳಾರಿಗೆ ಹೋದವು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತರಿಗೆ ಕಬ್ಬಿನ ಬಾಕಿ ಹಣ ಕೊಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬ್ರಿಮ್ಸ್‌ನಲ್ಲಿ ನಡೆದ ಭ್ರಷ್ಟಾಚಾರದಲ್ಲೂ ಭಾಗಿಯಾಗಿದ್ದಾರೆಂದು ಜನ ಆಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಖಂಡ್ರೆ ಅವರು ತಮ್ಮ ನಿಕಟವರ್ತಿಗಳು ಹಾಗೂ ಸಂಬಂಧಿಗಳಿಗೆ ಆಸ್ಪತ್ರೆಗೆ ಸಾಮಗ್ರಿಗಳ ಪೂರೈಕೆಯ ಗುತ್ತಿಗೆ ಕೊಡಿಸಿದ್ದಾರೆ. ₹ 10 ಬೆಲೆಯ ಸಾಮಗ್ರಿಗಳಿಗೆ ₹ 100 ಬಿಲ್‌ ತೋರಿಸಲಾಗಿದೆ’ ಎಂದು ಆರೋಪ ಮಾಡಿದರು.

‘ಸರ್ಕಾರದಿಂದ 5,600 ಮನೆಗಳು ಮಂಜೂರಾದಾರೂ ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 30 ಸಾವಿರ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಭಾಲ್ಕಿ ತಾಲ್ಲೂಕಿನಲ್ಲಿ ನಾಲ್ಕು ಬ್ಯಾರೇಜ್‌ಗಳಿದ್ದರೂ ಒಂದು ಬ್ಯಾರೇಜ್‌ನಲ್ಲೂ ನೀರು ನಿಲುಗಡೆಯಾಗುತ್ತಿಲ್ಲ. ಮಹಿಳೆಯರು ಕುಡಿಯುವ ನೀರಿಗಾಗಿ ಮಧ್ಯರಾತ್ರಿ ಕೊಡಗಳನ್ನು ಹಿಡಿದು ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಪಿಸಿದರು.

ಲಿಂಗಾಯತ ಎನ್ನುವುದಕ್ಕೆ ಟಿಕೆಟ್
‘ಲಿಂಗಾಯತ ಎನ್ನುವ ಒಂದೇ ಕಾರಣಕ್ಕೆ ಈಶ್ವರ ಖಂಡ್ರೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ’ ಎಂದು ಸಂಸದ ಭಗವಂತ ಖೂಬಾ ಕುಟುಕಿದರು.

‘ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿಯಾಗಿರುವ ಖಂಡ್ರೆ ಅವರು ಬಸವಣ್ಣನ ಕರ್ಮಭೂಮಿಯ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಜೆ.ಎಚ್‌. ಪಟೇಲ್‌ ಬರಬೇಕಾಯಿತು. ವಿಧಾನಸಭಾ ಚುನಾವಣೆಯಲ್ಲಿ ಅನುಭವ ಮಂಟಪಕ್ಕೆ ₹ 650 ಕೋಟಿ ಕೊಡುವ ಘೋಷಣೆ ಮಾಡಿದರು. ಆದರೆ ಸರ್ಕಾರದಿಂದ ಎಷ್ಟು ಹಣ ಬಿಡುಗಡೆ ಮಾಡಿಸಿದ್ದಾರೆ’ ಎಂದು ಪ್ರಶ್ನಿಸಿದರು.

‘ತಾಂತ್ರಿಕ ಕಾರಣದಿಂದ ನಾಗರಿಕ ವಿಮಾನ ಸಂಚಾರ ಹಾಗೂ ಎಫ್‌ಎಂ ರೇಡಿಯೊ ಕಾರ್ಯಾರಂಭ ಮಾಡಿಲ್ಲ. ಆಗಸ್ಟ್‌ 15ರ ವೇಳೆಗೆ ವಿಮಾನ ಸೇವೆ ಆರಂಭವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ’ ಎಂದರು.

‘ಧರ್ಮಸಿಂಗ್‌ ಕುಟುಂಬದವರು ಬಿಜೆಪಿಗೆ ಬರಲು ಇಚ್ಛಿಸಿದರೆ ಅದ್ದೂರಿ ಸ್ವಾಗತ ನೀಡಿ ಬರ ಮಾಡಿಕೊಳ್ಳುತ್ತೇವೆ’ ಎಂದು ಹೇಳಿದರು.

‘2014ರಿಂದ 2019ರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ಮೋದಿ ಸರ್ಕಾರದ ಅಭಿವೃದ್ಧಿಯನ್ನು ನೋಡಿ ಶಾಮನೂರು ಶಿವಶಂಕರಪ್ಪ ಕುಟುಂಬದವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ನನ್ನ ಅಭಿವೃದ್ಧಿ ಕಾರ್ಯಗಳು ಚುನಾವಣೆಯಲ್ಲಿ ಗೆಲುವಿಗೆ ನೆರವಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !