ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ವಿದ್ಯಾರ್ಥಿಗೆ ನೆರವಾದ ವಾಟ್ಸ್‍ಆ್ಯಪ್ ಸಂದೇಶ

ಡಾ. ಸುಭಾಷ ಕರ್ಪೂರ್ ಫೌಂಡೇಶನ್, ಸಮಾನ ಮನಸ್ಕರಿಂದ ದೇಣಿಗೆ
Last Updated 26 ಡಿಸೆಂಬರ್ 2020, 8:20 IST
ಅಕ್ಷರ ಗಾತ್ರ

ಬೀದರ್: ವಾಟ್ಸ್‍ಆ್ಯಪ್ ಸಂದೇಶವೊಂದು ಬಡ ವಿದ್ಯಾರ್ಥಿಯೊಬ್ಬರ ಎಂಜಿನಿಯರಿಂಗ್ ಪ್ರವೇಶಕ್ಕೆ ನೆರವಾಗಿದೆ.

ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ ಪೂರೈಸಿದ ಬೀದರ್‍ನ ಭಾರ್ಗವ್ ಭೀಮರಾವ್ ಶೆಂಬೆಳ್ಳಿಕರ್ ಆರ್ಥಿಕ ಸಮಸ್ಯೆ ಕಾರಣ ಎಂಜಿನಿಯರಿಂಗ್ ಪ್ರವೇಶ ಶುಲ್ಕ ಭರಿಸಲಾಗದೆ ತೊಂದರೆಗೆ ಸಿಲುಕಿದ್ದರು.

ಹೈ ಐಡಿಯಲ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಸಚ್ಚಿದಾನಂದ ಚಿದ್ರೆ ಅವರು ಬಡ ವಿದ್ಯಾರ್ಥಿಯ ಸಂಕಷ್ಟದ ಸಂದೇಶ ವಾಟ್ಸ್‍ಆ್ಯಪ್ ಗ್ರೂಪ್‍ಗಳಲ್ಲಿ ಹರಿಯ ಬಿಟ್ಟಿದ್ದರು. ತಕ್ಷಣ ಸ್ಪಂದಿಸಿದ ಡಾ. ಸುಭಾಷ ಕರ್ಪೂರ್ ಫೌಂಡೇಶನ್, ಸಮಾನ ಮನಸ್ಕ ವೈದ್ಯರು, ಎಂಜಿನಿಯರ್‍ಗಳು ಹಾಗೂ ದಾನಿಗಳು ನೆರವು ಕಲ್ಪಿಸಿದ ಪರಿಣಾಮ ಭಾರ್ಗವ್ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ.

ಭಾರ್ಗವ್ ತಂದೆ ಖಾಸಗಿ ಕೋರಿಯರ್‌ನಲ್ಲಿ ತಾತ್ಕಾಲಿಕ ನೌಕರಿಯಲ್ಲಿದ್ದಾರೆ. ತಾಯಿ ಬೇರೆಯವರ ಮನೆಯಲ್ಲಿ ಅಡುಗೆ ಮಾಡುವ ಕೆಲಸ ಮಾಡುತ್ತಾರೆ. ಡಿಪ್ಲೊಮಾ ಮೇಲೆಯೇ ನೌಕರಿ ಮಾಡಿ ಬದುಕು ಕಟ್ಟಿಕೊಳ್ಳಬಹುದಾಗಿತ್ತಾದರೂ, ಉನ್ನತ ಕನಸು ಹೊತ್ತ ಭಾರ್ಗವ್ ಎಂಜಿನಿಯರಿಂಗ್ ಪದವಿ ಪಡೆಯುವ ಸಂಕಲ್ಪ ತೊಟ್ಟಿದ್ದರು. ಶೈಕ್ಷಣಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೂ, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡು ಸಾಲ ಮಂಜೂರಾಗಲು ಸಮಯ ಬೇಕಾಗಿದ್ದರಿಂದ ತಕ್ಷಣ ಪ್ರವೇಶ ಶುಲ್ಕ ಕಟ್ಟಲು ಹೈರಾಣಾಗಿದ್ದರು ಎಂದು ಸಚ್ಚಿದಾನಂದ ಚಿದ್ರೆ ಹೇಳಿದರು.

ವಿದ್ಯಾರ್ಥಿಯ ಪ್ರಾಮಾಣಿಕತೆ ಹಾಗೂ ವಾಸ್ತವ ಸ್ಥಿತಿ ಅರಿತು ವಾಟ್ಸ್‍ಆ್ಯಪ್ ಗ್ರೂಪ್‍ಗಳಲ್ಲಿ ಹರಿಯಬಿಟ್ಟಾಗ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಡಾ. ಸುಭಾಷ್ ಕರ್ಪೂರ್ ಫೌಂಡೇಶನ್ ಹಾಗೂ ಅನೇಕರು ಸ್ವಯಂ ಪ್ರೇರಣೆಯಿಂದ ನೆರವಿಗೆ ಮುಂದೆ ಬಂದರು ಎಂದು ತಿಳಿಸಿದರು.

ಡಾ. ಸುಭಾಷ ಕರ್ಪೂರ್ ಫೌಂಡೇಶನ್ ನಿರ್ದೇಶಕ ನಿತಿನ್ ಕರ್ಪೂರ್ ರೂ. 11 ಸಾವಿರ, ಕೆಲವರ ನೆರವಿನಿಂದ ಎಂಜಿನಿಯರಿಂಗ್ ಪೂರ್ಣಗೊಳಿಸಿ ಒಳ್ಳೆಯ ಕೆಲಸದಲ್ಲಿರುವ ವಿನೋದ ದಾಡಗೆ ₹ 6 ಸಾವಿರ ದೇಣಿಗೆ ನೀಡಿದರು. ಉದ್ಯಮಿ ಶ್ರುತಿ ಕುಲಕರ್ಣಿ, ಡಾ. ಸತೀಶ ಪಾಟೀಲ, ಡಾ. ಶ್ವೇತಾ ಮೇಗೂರ, ಹಣಮಂತ ಭಂಕೂರ್, ರವೀಂದ್ರ ಕುಂಬಾರ ಹಾಗೂ ಇತರರು ಕೂಡಿಕೊಂಡು ಸಹಾಯಹಸ್ತ ಚಾಚಿದೇವು. ಒಟ್ಟು ₹ 25 ಸಾವಿರ ಜಮಾ ಆಯಿತು ಎಂದು ಹೇಳಿದರು.

ದಾನಿಗಳಿಂದ ಸಂಗ್ರಹಿಸಿದ ಹಣ ಭಾರ್ಗವ್‍ಗೆ ನೀಡಿದ್ದು, ಶುಲ್ಕ ಕಟ್ಟಿ ಎಂಜಿನಿಯರಿಂಗ್ ಕೋರ್ಸ್‍ಗೆ ಪ್ರವೇಶ ಪಡೆದಿದ್ದಾರೆ. ವಾಟ್ಸ್‍ಆ್ಯಪ್ ಸಂದೇಶವೊಂದರಿಂದ ಬಡ ವಿದ್ಯಾರ್ಥಿಗೆ ಅನುಕೂಲ ಆಗಿದ್ದಕ್ಕೆ ಸಂತಸವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT