ಸೋಮವಾರ, ಏಪ್ರಿಲ್ 12, 2021
31 °C
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಪರುಲ್ಲಾ ಖಾನ್ ಪ್ರಶ್ನೆ

ಮುಸ್ಲಿಮರು ಚುನಾವಣೆಗೆ ಸ್ಪರ್ಧಿಸಬಾರದೇ? - ಝಪರುಲ್ಲಾ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ (ಬೀದರ್‌ ಜಿಲ್ಲೆ): `ಬಿಜೆಪಿ ಗೆಲ್ಲಿಸಲು ಇಲ್ಲಿ ಜೆಡಿಎಸ್ ನಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಹಾಗಾದರೆ, ಮುಸ್ಲಿಮರು ಚುನಾವಣೆಗೆ ಸ್ಪರ್ಧಿಸಬಾರದೇ' ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಪರುಲ್ಲಾ ಖಾನ್ ಪ್ರಶ್ನಿಸಿದರು.

ನಗರದಲ್ಲಿ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

`ಜೆಡಿಎಸ್ ಮುಸ್ಲಿಂ ಸಮುದಾಯದ ಅನೇಕರನ್ನು ಬೆಳೆಸಿದೆ. ಸಿ.ಎಂ.ಇಬ್ರಾಹಿಂ ಕೇಂದ್ರ ಸಚಿವರಾಗಿದ್ದರು. ಮೇರಾಜುದ್ದೀನ್ ಪಟೇಲ್, ಜಮೀರ್ ಅಹ್ಮದ ಒಳಗೊಂಡು ಅನೇಕರು ಈ ಪಕ್ಷದಿಂದಲೇ ಗುರುತಿಸಿಕೊಂಡರು. ಜಮೀರ್ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಶಾಸಕರಾದರು. ಅದರಂತೆ ಇಲ್ಲಿಯೂ ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಯಸ್ರಬ್ ಅಲಿ ಖಾದ್ರಿ ಅವರಿಗೆ ಟಿಕೆಟ್ ನೀಡಲಾಗಿದೆ' ಎಂದರು.

`ಜಮೀರ್ ಅವರು ₹10 ಕೋಟಿ ಪಡೆದು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಲ್ಲಗಳೆದಿದ್ದು ತಾಲ್ಲೂಕಿನ ಪಹಾಡನ ಜಿಂದಾಶಾ ಮದಾರಸಾಹೇಬ್ ದರ್ಗಾದಲ್ಲಿ ಪ್ರಮಾಣ ಮಾಡಿದ್ದಾರೆ. ಜಮೀರ್ ಕೂಡ ತಾಕತ್ತಿದ್ದರೆ ಇದೇ ದರ್ಗಾದಲ್ಲಿ ಬಂದು ಪ್ರಮಾಣಮಾಡಿ ಆರೋಪ ಸಾಬೀತುಪಡಿಸಬೇಕು’ ಎಂದು ಸವಾಲು ಹಾಕಿದರು.

’ಕುಮಾರಸ್ವಾಮಿ ಅವರು ಅಸಂಬದ್ಧ ಪದಗಳನ್ನು ಬಳಸುವುದು ಸರಿಯಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ನಮಗೆ ಎಲ್ಲರೊಂದಿಗೆ ಗೌರವದಿಂದ ವರ್ತಿಸುವ ಪಾಠ ಹೇಳಿದ್ದರಿಂದ ನಾವು ಅಪಶಬ್ದ ಬಳಸುವುದಿಲ್ಲ' ಎಂದರು.

`ಮುಸ್ಲಿಮರು ಕಾಂಗ್ರೆಸ್ ಮತದಾರರು ಎಂಬ ಹಣೆಪಟ್ಟಿಯೂ ಕಟ್ಟಲಾಗುತ್ತದೆ. ಯಾರೂ ಯಾವುದೇ
ಪಕ್ಷಕ್ಕೆ ಕಟ್ಟಿಹಾಕಿದವರಲ್ಲ. ಇದುವರೆಗೆ ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿ ಇರಲಿಲ್ಲ. ಇವರು ಇಲ್ಲಿ ಬಹುಸಂಖ್ಯಾತ ಆಗಿರುವ ಕಾರಣ ಈ ಸಲ ಗೆಲುವು ನಿಶ್ಚಿತ. ಇಲ್ಲಿ ಎಐಎಐಎಂ ಪಕ್ಷದ ಅಭ್ಯರ್ಥಿ ಇದ್ದರೂ ಆ ಪಕ್ಷ ಒಂದು ಸಮುದಾಯದ ಪಕ್ಷವಾಗಿದೆ. ಈ ಕಾರಣ ಜನರ ಒಲವು ಆ ಕಡೆ ಇಲ್ಲ. ನಮ್ಮದು ಜಾತ್ಯತೀತ ಪಕ್ಷವಾದ ಕಾರಣ ಎಲ್ಲ ಸಮುದಾಯಗಳ ಮತಗಳು ದೊರಕುವ ವಿಶ್ವಾಸವಿದೆ' ಎಂದರು. ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಮಹ್ಮದ್

ಅಸದುದ್ದೀನ್, ಶಾಹೀನ್ ಕೌಸರ್, ಮಿರ್ಜಾ ಕಾಸಿಂ ಬೇಗ ಮೊದಲಾದವರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು