ಬುಧವಾರ, ಆಗಸ್ಟ್ 10, 2022
21 °C
ಎರಡನೇ ಮಗುವಿನ ಮುಖ ನೋಡುವ ಮೊದಲೇ ಕೊನೆಯುಸಿರೆಳೆದ ತಂದೆ

ಔರಾದ್: ಕೋವಿಡ್‍ ಆಘಾತ: ಪತ್ನಿ, ಮಕ್ಕಳು ಅನಾಥ

ಮನ್ಮಥ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್ (ಬೀದರ್‌ ಜಿಲ್ಲೆ): ಸಾಲ ಪಡೆದು ಜೀಪ್‌ ಖರೀದಿಸಿ ಬಾಳ ನೌಕೆ ಸಾಗಿಸಿದ್ದ ಔರಾದ್‌ ತಾಲ್ಲೂಕಿನ ನಾಗೂರ (ಬಿ) ಗ್ರಾಮದ ಯುವಕರೊಬ್ಬರು ತನ್ನ ಎರಡನೇ ಮಗುವಿನ ಮುಖ ನೋಡುವ ಮೊದಲೇ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಇದರಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿದೆ.

ಕೋವಿಡ್‌ನಿಂದ ಮೃತಪಟ್ಟ ಓಂಕಾರ ಸ್ವಾಮಿ (30) ಅವರ ವೃದ್ಧ ತಂದೆ ಹಾಗೂ ತಾಯಿ ಮಗನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಮೂರು ವರ್ಷದ ಹಿಂದೆಯಷ್ಟೇ ಮದುವೆಯಾದ ಓಂಕಾರಗೆ ಎರಡು ವರ್ಷದ ಒಬ್ಬ ಮಗ ಇದ್ದಾನೆ.

ಓಂಕಾರ ಸ್ವಾಮಿ ಕೊನೆಯುಸಿರೆಳೆದ ಎರಡು ವಾರದಲ್ಲೇ ಅವರ ಪತ್ನಿ ಆಶಾ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆ ಮುಖ ನೋಡಲು ಸಾಧ್ಯವಾಗದ ಹಸುಗೂಸು ಹಾಗೂ ಗಂಡನನ್ನು ನೆನೆದು ಹಸಿ ಬಾಣಂತಿಯ ಆಕ್ರಂದನ ಕೇಳಿ ಇಡೀ ಊರು ಮಮ್ಮಲ ಮರಗುತ್ತಿದೆ.

ಸಾಲ ಮಾಡಿ ಜೀಪ್ ಖರೀದಿಸಿ ಚಾಲಕ ವೃತ್ತಿಯಲ್ಲಿದ್ದ ಓಂಕಾರ ಸ್ವಾಮಿ ಅದರ ಸಾಲ ತೀರಿಸುವ ಮೊದಲೇ ಇಹ ಲೋಕ ತ್ಯಜಿಸಿದ್ದು ವೃದ್ಧ ತಂದೆ ತಾಯಿಗಳಿಗೆ ಮತ್ತಷ್ಟು ಸಂಕಟ ತಂದಿದೆ.

‘ಮೃತಪಟ್ಟ ಕೋವಿಡ್ ರೋಗಿಯೊಬ್ಬರ ಅಂತ್ಯ ಸಂಸ್ಕಾರಕ್ಕೆ ಅವರ ಕುಟುಂಬದವರನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದೇ ನನ್ನ ತಮ್ಮನ ಸಾವಿಗೆ ಕಾರಣವಾಯಿತು’ ಎಂದು ಅಣ್ಣ ಸೋಮನಾಥ ಸ್ವಾಮಿ ಹೇಳುತ್ತಾರೆ.

‘ಏಪ್ರಿಲ್ 28ರಂದು ನನ್ನ ಸಹೋದರ ಓಂಕಾರ್‌ಗೆ ಜ್ವರ ಕಾಣಿಸಿಕೊಂಡಿತ್ತು. ಸಂತಪುರ, ಔರಾದ್‍ನ ಆಸ್ಪತ್ರೆಯ ವೈದ್ಯರಿಗೆ ತೋರಿಸಿದರೂ ಕಡಿಮೆಯಾಗಲಿಲ್ಲ. ಹೈದರಾಬಾದ್‍ಗೆ ಹೋದಾಗ ಇವರಿಗೆ ಕೋವಿಡ್ ಇದೆ ಎಂದು ತಿಳಿಯಿತು. ಅಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೂರು ದಿನ ಚಿಕಿತ್ಸೆ ಕೊಡಿಸಿದರೂ ಸುಧಾರಣೆ ಕಂಡು ಬರಲಿಲ್ಲ. ಇತರೆ ಆಸ್ಪತ್ರೆಯವರು ಸೇರಿಸಿಕೊಳ್ಳಲು ತಯಾರಿರಲಿಲ್ಲ. ಹೀಗಾಗಿ ತಿರುಗಿ ಏಪ್ರಿಲ್ 29ರಂದು ಬೀದರ್ ಆಸ್ಪತ್ರೆಗೆ ತಂದು ಸೇರಿಸಿದ್ದೆವು’ ಎಂದು ತಿಳಿಸಿದರು.

‘ಬ್ರಿಮ್ಸ್ ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದರೂ ಫಲಕಾರಿಯಾಗದೆ ಮೇ 6ರಂದು ಓಂಕಾರ್ ಮೃತಪಟ್ಟರು. ₹ 3 ಲಕ್ಷ ಖರ್ಚು ಮಾಡಿ ತಮ್ಮನನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ಇಂತಹ ಸಂಕಷ್ಟ ನಮ್ಮ ವೈರಿಗಳಿಗೂ ಬರಬಾರದು’ ಎಂದು ಹೇಳುತ್ತಲೇ ಅಣ್ಣ ಸೋಮನಾಥ ಸ್ವಾಮಿ ಕಣ್ಣೀರಿಟ್ಟರು.

ಸಚಿವರಿಂದ ಸಾಂತ್ವನ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಕೋವಿಡ್‍ನಿಂದ ಮೃತಪಟ್ಟ ಓಂಕಾರ ಸ್ವಾಮಿ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ₹ 25 ಸಾವಿರ ವೈಯಕ್ತಿಕ ನೆರವು ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು