ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಚುನಾವಣಾ ಕಣಕ್ಕೆ ರಂಗು ತುಂಬಿದ ಹೆಂಡತಿಯರು

ಆರತಿ ಬೆಳಗಿ ಸ್ವಾಗತಿಸುತ್ತಿರುವ ಗ್ರಾಮದ ಮಹಿಳೆಯರು
Last Updated 30 ಏಪ್ರಿಲ್ 2019, 15:28 IST
ಅಕ್ಷರ ಗಾತ್ರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದಲ್ಲಿ 8,43,077 ಮಹಿಳಾ ಮತದಾರರು ಇದ್ದರೂ ಕ್ಷೇತ್ರದ ಇತಿಹಾಸದಲ್ಲಿ ಮಹಿಳೆಯರು ಒಮ್ಮೆಯೂ ಸೀಟು ಗೆಲ್ಲುವ ಅವಕಾಶ ಸೃಷ್ಟಿಸಿಕೊಂಡಿಲ್ಲ. ವಿಧಾನಸಭಾ ಚುನಾವಣೆಗಳಲ್ಲಿ ಪತಿಯರ ಗೆಲುವಿಗಾಗಿ ಶ್ರಮಿಸಿದ್ದಾರೆ. ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹೆಂಡತಿಯರು ಗಂಡಂದಿರ ಗೆಲುವಿಗಾಗಿ ಪ್ರಚಾರಕ್ಕೆ ಇಳಿದಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಪತ್ನಿ ಗೀತಾ ಹಾಗೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಡದಿ ಶೀಲಾ ಪ್ರತಿಷ್ಠಿತ ಮನೆತನದವರೇ ಆಗಿದ್ದಾರೆ. ಈ ಚುನಾವಣೆ ಖಂಡ್ರೆ ಹಾಗೂ ಖೂಬಾ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಯಾಗಿದೆ. ಹೀಗಾಗಿ ಹೆಚ್ಚುತ್ತಿರುವ ಬಿಸಿಲಿನಂತೆ ಪತ್ನಿಯರು ಬೆಳಗಾಗುತ್ತಲೇ ಚುನಾವಣಾ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

ಅಭ್ಯರ್ಥಿಗಳ ಹೆಂಡತಿಯರೇ ಪ್ರಚಾರಕ್ಕೆ ಬರುತ್ತಿರುವ ಕಾರಣ ಗ್ರಾಮೀಣ ಮಹಿಳೆಯರು ಕುತೂಹಲದಿಂದ ಮನೆಗಳಿಂದ ಹೊರಗೆ ಬಂದು ಇವರನ್ನು ನೋಡುತ್ತಿದ್ದಾರೆ. ಬಿಸಿಲಲ್ಲಿ ಬೆವರುತ್ತ ತಲೆಯ ಮೇಲೆ ಸೆರಗು, ಟೊಪ್ಪಿಗೆ ಹಾಗೂ ಬಟ್ಟೆ ಹಾಕಿಕೊಂಡು ಮತ ಕೇಳುತ್ತಿರುವುದನ್ನು ಆಸಕ್ತಿಯಿಂದ ಆಲಿಸುತ್ತಿದ್ದಾರೆ. ಇವರನ್ನು ನೋಡಲು ಮಹಿಳೆಯರು ಗುಂಪುಗೂಡಿ ಸೇರುತ್ತಿರುವುದು ಕಂಡು ಬರುತ್ತಿದೆ.

ಕಾರ್ಯಕರ್ತರು ಗುಂಪು ಕಟ್ಟಿಕೊಂಡು ಪ್ರಚಾರಕ್ಕೆ ಹೋದಾಗ ನೀಡುವ ಪ್ರತಿಕ್ರಿಯೆಗಿಂತಲೂ ಭಿನ್ನವಾದ ಪ್ರತಿಕ್ರಿಯೆಯನ್ನು ಮಹಿಳಾ ಮತದಾರರು ಅಭ್ಯರ್ಥಿಗಳ ಹೆಂಡತಿಯರು ಮನೆ ಬಾಗಿಲಿಗೆ ಬಂದಾಗ ನೀಡುತ್ತಿದ್ದಾರೆ.

‘ಭಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ 2008ರ ಚುನಾವಣೆಯ ಸಂದರ್ಭದಲ್ಲಿ 90 ಹಳ್ಳಿಗಳಿಗೆ ಭೇಟಿ ಕೊಟ್ಟು ಪ್ರಚಾರ ಮಾಡಿದ್ದೆ. ಲೋಕಸಭಾ ಚುನಾವಣೆಯಲ್ಲಿ ಇದು ಮೊದಲ ಪ್ರಚಾರ. ಈಗಾಗಲೇ ಭಾಲ್ಕಿ, ಔರಾದ್‌ ಹಾಗೂ ಬೀದರ್‌ ತಾಲ್ಲೂಕಿನ ಹೋಬಳಿ ಹಾಗೂ ಪ್ರಮುಖ ಹಳ್ಳಿಗಳಿಗೆ ತೆರಳಿ ಪತಿಯ ಪರವಾಗಿ ಮತ ಯಾಚಿಸಿದ್ದೇನೆ’ ಎಂದು ಗೀತಾ ಖಂಡ್ರೆ ಹೇಳುತ್ತಾರೆ.

‘ಅಭ್ಯರ್ಥಿಯ ಪತ್ನಿಯೇ ಮಹಿಳೆಯರೊಂದಿಗೆ ಪ್ರಚಾರಕ್ಕೆ ಬಂದಿರುವುದನ್ನು ನೋಡಿ ಮಹಿಳೆಯರು ಬಿಸಿಲಲ್ಲಿ ಮಜ್ಜಿಗೆ, ಹಾಲು ಹಾಗೂ ತಂಪಾದ ನೀರು ಕೊಟ್ಟು ಶುಭ ಹಾರೈಸುತ್ತಿದ್ದಾರೆ. ಕೆಲವರು ಗ್ರಾಮದ ಅಗಸಿಯಿಂದ ಬಾಜಾ ಭಜಂತ್ರಿಯೊಂದಿಗೆ ಊರಿನೊಳಗೆ ಬರಮಾಡಿಕೊಂಡು ಶಾಲು ಹೊದಿಸಿ ಸನ್ಮಾನಿಸುತ್ತಿದ್ದಾರೆ’ ಎನ್ನುತ್ತಾರೆ ಕಾಂಗ್ರೆಸ್‌ ರಾಜ್ಯ ಕಾರ್ಮಿಕ ಘಟಕದ ಉಪಾಧ್ಯಕ್ಷ ಪಪ್ಪು ಪಾಟೀಲ.

‘ನನ್ನ ಪತಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವುದರಿಂದ ಕೇಂದ್ರದ ಹಿರಿಯ ನಾಯಕರು ಬಂದಾಗ ಅವರು ಇರುವಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಪ್ರಚಾರಕ್ಕೆ ಅವರಿಗೆ ಸಮಯ ದೊರೆಯುತ್ತಿಲ್ಲ. ಹೀಗಾಗಿ ನಾನೇ ನಮ್ಮ ಮನೆಯವರ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಗೀತಾ ಖಂಡ್ರೆ.

‘ಕ್ಷೇತ್ರದ ಮಹಿಳೆಯರು ಆರತಿ ಎತ್ತಿ ಸ್ವಾಗತ ನೀಡುತ್ತಿದ್ದಾರೆ. ಮನೆಯ ಮಗಳಂತೆ, ಸೊಸೆಯಂತೆ ಗೌರವದಿಂದ ಬರಮಾಡಿಕೊಂಡು ಪ್ರೀತಿ ತೋರುತ್ತಿದ್ದಾರೆ. ಇದರಿಂದ ನಮಗೆ ಬಿಸಿಲಿನ ಝಳ ಅರಿವಿಗೆ ಬರುತ್ತಿಲ್ಲ’ ಎಂದು ಶೀಲಾ ಖೂಬಾ ಹೇಳುತ್ತಾರೆ.

‘ಮಹಿಳೆಯರು ಅಡುಗೆ ಮಾಡುವುದನ್ನು ಬಿಟ್ಟು ನಮ್ಮನ್ನು ಭೇಟಿಯಾಗಲು ಬರುತ್ತಾರೆ. ಅಷ್ಟೇ ಅಲ್ಲ ತಂಪು ಪಾನೀಯ ಕೊಡುತ್ತಿದ್ದಾರೆ. ಬಿಸಿಲಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆಗಳನ್ನೂ ನೀಡುತ್ತಿದ್ದಾರೆ’ ಎಂದು ಅನುಭವ ಹಂಚಿಕೊಳ್ಳುತ್ತಾರೆ.

ಒಮ್ಮೆಯೂ ಮಹಿಳೆಯನ್ನು ಚುನಾಯಿಸಿಲ್ಲ

ಬೀದರ್‌: ಕಲ್ಯಾಣ ನಾಡಿನ ಜನತೆ ಬೀದರ್‌ ಲೋಕಸಭಾ ಕ್ಷೇತ್ರದಿಂದ ಒಮ್ಮೆಯೂ ಮಹಿಳೆಯನ್ನು ಚುನಾಯಿಸಿಲ್ಲ. 1980ರ ದಶಕದ ವರೆಗೂ ಸ್ಪರ್ಧಾ ಕಣದಲ್ಲಿ ಇಳಿಯಲು ಮಹಿಳೆಯರು ಹಿಂಜರಿಯುತ್ತಿದ್ದರು.
1989ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಶಿವಕಾಂತಾ ಚತುರೆ ಸ್ಪರ್ಧಿಸಿದ್ದರು.
1991 ಹಾಗೂ 2014ರಲ್ಲಿ ತಲಾ ಒಬ್ಬರು ಸ್ಪರ್ಧಿಸಿದ್ದರು. 1996ರಲ್ಲಿ ಆರು ಜನ ಮಹಿಳೆಯರು ಚುನಾವಣಾ ಕಣಕ್ಕೆ ಇಳಿದಿದ್ದು ವಿಶೇಷ. ಎಲ್ಲರೂ ಸೇರಿ 20,936 ಮತಗಳನ್ನು ಪಡೆದುಕೊಂಡಿದ್ದರು. ಮಹಿಳೆ ಎನ್ನುವ ಕಾರಣಕ್ಕೆ ಜಿಲ್ಲೆಯ ಮತದಾರರು ಬೆಂಬಲ ನೀಡಿಲ್ಲ ಎನ್ನುತ್ತಾರೆ ರಾಜಕೀಯ ಪಕ್ಷಗಳ ಕಾರ್ಯಕರ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT