ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್- ಕೋಟಿ ಪಾವತಿಸಿದರೂ ಪೂರ್ಣಗೊಳ್ಳದ ಕಾಮಗಾರಿ: ಹಾಳು ಬಿದ್ದ ಕ್ರೀಡಾಂಗಣ

ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿಲ್ಲ ಮೈದಾನ, ಸಿಬ್ಬಂದಿ ಕೊರತೆಯಿಂದ ಸೊರಗಿದ ಕ್ರೀಡಾ ಇಲಾಖೆ: ಚಟುವಟಿಕೆಗಳು ಸ
Last Updated 25 ಸೆಪ್ಟೆಂಬರ್ 2022, 15:42 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ನಾಲ್ಕು ವರ್ಷಗಳಿಂದ ಕ್ರೀಡಾ ಚಟುವಟಿಕೆಗಳು ನೆಲಕಚ್ಚಿವೆ. ಭಾಲ್ಕಿ ಹಾಗೂ ಮೂರು ಹೊಸ ತಾಲ್ಲೂಕು ಸೇರಿ ನಾಲ್ಕು ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳೇ ಇಲ್ಲ. ಬೀದರ್‌ ನಗರದಲ್ಲಿರುವ ನೆಹರೂ ಕ್ರೀಡಾಂಗಣ ಕಾಮಗಾರಿ ಪೂರ್ಣಗೊಂಡಿಲ್ಲ. ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.

ಹಳೆಯ ತಾಲ್ಲೂಕು ಕೇಂದ್ರಗಳಲ್ಲಿರುವ ಕ್ರೀಡಾಂಗಣಗಳ ಸ್ಥಿತಿಯೂ ಶೋಚನೀಯವಾಗಿದೆ. ಹೊಸ ತಾಲ್ಲೂಕುಗಳಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಜಾಗ ಕೊಡಲು ಸಿದ್ಧವಿಲ್ಲ. ನೆಪಗಳನ್ನು ಹೇಳಿ ಕಾಲ ಹರಣ ಮಾಡುತ್ತಿದ್ದಾರೆ.

ಜಿಲ್ಲಾಧಿಕಾರಿಯಾಗಿದ್ದ ದಿ.ಅನುರಾಗ ತಿವಾರಿ ಪರಿಶ್ರಮದ ಫಲವಾಗಿ ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಬೀದರ್‌ನಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣವಾಗಿದೆ. 2019ರಲ್ಲೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಈಗಲೂ ತೆವಳುತ್ತ ಸಾಗಿದೆ. ಮೊದಲಿದ್ದ ಗ್ಯಾಲರಿಗಿಂತ ಈಗಿನ ಗ್ಯಾಲರಿ ವಿಸ್ತಾರವನ್ನೂ ಕಡಿಮೆ ಮಾಡಲಾಗಿದೆ.

ಬೀದರ್ ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿ ಅವರ ಹೆಸರು ಹೇಳಿ ಕ್ರೀಡಾ ಇಲಾಖೆಯ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಿ ಟ್ರ್ಯಾಕ್‌ ಮೇಲೆಯೇ ಧ್ವಜ ಕಂಬದ ಬೇಲಿ ನಿರ್ಮಿಸಿದ್ದಾರೆ. ಹೀಗಾಗಿ ಮೊದಲಿದ್ದ ಎಂಟು ಟ್ರ್ಯಾಕ್‌ಗಳು ಈಗ ಆರಕ್ಕೆ ಸೀಮಿತಗೊಂಡಿದೆ. ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಮಾಡುವ ಅರ್ಹತೆಯನ್ನೂ ಕಳೆದುಕೊಂಡಿದೆ. ನಗರಸಭೆಯ ಕೆಲ ಬೇಜವಾಬ್ದಾರಿ ಅಧಿಕಾರಿಗಳ ಕ್ರಮದಿಂದ ಅ‌ಥ್ಲೀಟ್‌ಗಳು ಹೆಚ್ಚು ತೊಂದರೆ ಅನುಭವಿಸಬೇಕಾಗಿದೆ ಎಂದು ಕ್ರೀಡಾಪಟುಗಳು ಅಸಮಾಧಾನ ಹೊರ ಹಾಕಿದ್ದಾರೆ.

ಹಿಂದಿನ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಕಳಪೆ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿದ್ದ ಸುಬೋಧ್ ಯಾದವ್ ನಗರದಲ್ಲಿ ಸಭೆ ನಡೆಸಿ ನೆಹರೂ ಕ್ರೀಡಾಂಗಣ ನಿರ್ಮಾಣಕ್ಕೆ ₹ 6 ಕೋಟಿ ಖರ್ಚಾದರೂ ಕಾಮಗಾರಿ ತೃಪ್ತಿಕರವಾಗಿಲ್ಲ. ಟ್ರ್ಯಾಕ್ ಸರಿಯಾಗಿ ನಿರ್ಮಾಣವಾಗಿಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದರು. ಆದರೆ, ವರದಿ ಬಹಿರಂಗವಾಗಲಿಲ್ಲ. ಲೋಪವೂ ಸರಿಯಾಗಲಿಲ್ಲ.

‘ಕ್ರೀಡಾಂಗಣ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲ ಕಾಮಗಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿ ಹಿಂದಿನ ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ಅವರು ಪೊಲೀಸ್‌ ಹೌಸಿಂಗ್‌ ಕಾರ್ಪೋರೇಷನ್‌ಗೆ ಪತ್ರ ಬರೆದಿದ್ದರು. ಜಿಲ್ಲಾಡಳಿತ ಗುತ್ತಿಗೆದಾರರಿಗೆ ಸಂಪೂರ್ಣ ಹಣ ಪಾವತಿಸಿರುವುದು ಕ್ರೀಡಾ‍ಪಟುಗಳಲ್ಲಿ ಅಚ್ಚರಿ ಮೂಡಿಸಿದೆ.

ಬೀದರ್‌ ಶಾಸಕ ರಹೀಂ ಖಾನ್‌ ಹಿಂದೆ ಕ್ರೀಡಾ ಸಚಿವರಾಗಿದ್ದರೂ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ನಿರೀಕ್ಷೆಯಷ್ಟು ಅನುಕೂಲವಾಗಲಿಲ್ಲ’ ಎಂದು ಬೀದರ್‌ ಕ್ರಿಕೆಟ್‌ ಕಂಟ್ರೋಲ್ ಅಸೋಸಿಯೇಷನ್‌ ಕಾರ್ಯದರ್ಶಿ ಅನಿಲ ದೇಶಮುಖ, ವೀಕ್‌ಎಂಡ್‌ ರಿಕ್ರಿಯೇಷನ್‌ ಕ್ಲಬ್‌ನ ಶ್ರೀನಿವಾಸ ಗಾದಗಿ ಹಾಗೂ ವೀರೇಶ ವಡ್ಡೆ ಬೇಸರ ವ್ಯಕ್ತಪಡಿಸುತ್ತಾರೆ.

‘ಇಲಾಖೆಯಲ್ಲಿ ಕಾಯಂ ನೌಕರರ ಸಂಖ್ಯೆ ಬಹಳ ಕಡಿಮೆ ಇದೆ. ಹೊರ ಗುತ್ತಿಗೆ ನೌಕರರನ್ನೇ ಅವಲಂಬಿಸುವಂತಾಗಿದೆ. ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸೇವಕ ಇಲ್ಲ. ಕ್ರೀಡಾಂಗಣಗಳಿಗೆ ಭದ್ರತೆ ಒದಗಿಸಲು ಕಾವಲುಗಾರರು ಇಲ್ಲ. ಕೆಲ ಕಡೆ ಕಾಯಂ ತರಬೇತುದಾರರೂ ಇಲ್ಲ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ ಹಿಂದೆ ಸಭೆಯಲ್ಲೇ ಅಳಲು ತೋಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT