ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ: ಮೊದಲ ಸಂಸತ್ತಿನಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಸಂಕಲ್ಪ

ಅನುಭವ ಮಂಟಪದಲ್ಲಿ ಸಂವಿಧಾನದ ಪೀಠಿಕೆ ಪಠಣ; 35 ಸಾವಿರ ವಿದ್ಯಾರ್ಥಿಗಳಿಂದ 45 ಕಿ.ಮೀ ಮಾನವ ಸರಪಳಿ
Published : 16 ಸೆಪ್ಟೆಂಬರ್ 2024, 4:32 IST
Last Updated : 16 ಸೆಪ್ಟೆಂಬರ್ 2024, 4:32 IST
ಫಾಲೋ ಮಾಡಿ
Comments

ಅನುಭವ ಮಂಟಪ (ಬಸವಕಲ್ಯಾಣ/ಬೀದರ್‌): ಆಗತಾನೇ ಬೆಳಕು ಹರಿದಿತ್ತು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯುದ್ದಕ್ಕೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸಾಲಾಗಿ ನಿಂತಿದ್ದರು. ಎಲ್ಲರ ಕೈಯಲ್ಲೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿದ್ದವು. ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಜೋಶ್‌ನಿಂದ ಭಾರತ್‌ ಮಾತಾ ಕೀ ಜೈ, ಸಂವಿಧಾನಕ್ಕೆ ಜೈ, ಪ್ರಜಾಪ್ರಭುತ್ವಕ್ಕೆ ಜೈ ಎಂದು ಘೋಷಣೆಗಳನ್ನು ಹಾಕುತ್ತಿದ್ದರು. ಏಕಕಾಲಕ್ಕೆ 35 ಸಾವಿರ ವಿದ್ಯಾರ್ಥಿಗಳು ಪರಸ್ಪರ ಕೈಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿ, ಪ್ರಜಾಪ್ರಭುತ್ವ ರಕ್ಷಿಸುವ ಸಂಕಲ್ಪ ಮಾಡಿದರು.

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಇಲ್ಲಿನ ನೂತನ ಅನುಭವ ಮಂಟಪದಿಂದ ಕಲಬುರಗಿ ಜಿಲ್ಲೆಯ ಗಡಿಭಾಗದ ಹಳ್ಳಿಖೇಡ್‌ (ಕೆ) ವರೆಗೆ ಜಿಲ್ಲೆಯಲ್ಲಿ ಇದುವರೆಗಿನ ಅತಿದೊಡ್ಡ ಮಾನವ ಸರಪಳಿ ನಿರ್ಮಿಸಿ ಹೊಸ ದಾಖಲೆ ಸೃಷ್ಟಿಸಿದ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳಿವು.

ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿ ಅದರ ಮಹತ್ವ ಸಾರುವ ಉದ್ದೇಶದಿಂದ ರಾಜ್ಯ ಸರ್ಕಾರವು ಮೊದಲ ಬಾರಿಗೆ ಜಗತ್ತಿನ ಮೊದಲ ಸಂಸತ್ತು ಎಂಬ ಹೆಗ್ಗಳಿಕೆ ಹೊಂದಿರುವ, ಹನ್ನೆರಡನೇ ಶತಮಾನದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಅನುಭವ ಮಂಟಪದಿಂದ ರಾಜ್ಯದ ದಕ್ಷಿಣದ ತುದಿಯಲ್ಲಿರುವ ಚಾಮರಾಜನಗರದ ವರೆಗೆ ಮಾನವ ಸರಪಳಿ ನಿರ್ಮಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವವನ್ನು ಸಾರಿತು. ಬೀದರ್‌ ಜಿಲ್ಲೆಯಲ್ಲಿ 45 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಯಿತು.

ಈ ಅತಿದೊಡ್ಡ ಮಾನವ ಸರಪಳಿಗೆ  ಪೊಲೀಸರು, ಶಾಲಾ–ಕಾಲೇಜಿನ ಶಿಕ್ಷಕರು, ಸರ್ಕಾರಿ ನೌಕರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ರಕ್ಷಾಕವಚವಾಗಿ ಹೆದ್ದಾರಿಯುದ್ದಕ್ಕೂ ಕೆಲಸ ಮಾಡಿದರು. ಇನ್ನೊಂದು ಬದಿಯಲ್ಲಿ ವಾಹನಗಳಲ್ಲಿ ಹೋಗುತ್ತಿದ್ದವರು ಕುತೂಹಲದಿಂದ ವೀಕ್ಷಿಸಿದರು.

ಎಲ್ಲರೂ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಅದರ ಬಗೆಗಿನ ಬದ್ಧತೆಯನ್ನು ಪ್ರದರ್ಶಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಸಂವಿಧಾನದ ಪೀಠಿಕೆ ಓದಿಸಿದರು. ಮಾನವ ಸರಪಳಿಯಲ್ಲಿ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಕ್ಕಳು, ತಾಯಿ ಭುವನೇಶ್ವರಿ ಹಾಗೂ ಭಾರತಾಂಬೆಯ ವೇಷ‌ ಧರಿಸಿ ಗಮನ ಸೆಳೆದರು.

ನಿರ್ಮಾಣ ಹಂತದ ನೂತನ ಅನುಭವ ಮಂಟಪ ಕಟ್ಟಡದಿಂದ ಜಿಲ್ಲೆಯ ಗಡಿ ತನಕ ಸಂಭ್ರಮ ಮನೆ ಮಾಡಿತ್ತು. ಸಚಿವರಾದ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಅವರು ತೆರೆದ ಜೀಪಿನಲ್ಲಿ ಮಾನವ ಸರಪಳಿಯುದ್ದಕ್ಕೂ ಓಡಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಅರಣ್ಯ, ಪರಿಸರ ಸಚಿವರೂ ಆದ ಈಶ್ವರ ಬಿ. ಖಂಡ್ರೆಯವರು ಸಸಿ ನೆಟ್ಟು, ಅದಕ್ಕೆ ನೀರೆರೆದು, ಈ ದಿನದ ಸವಿನೆನಪಿನಲ್ಲಿ ರಾಜ್ಯದಾದ್ಯಂತ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮವನ್ನು ಈಶ್ವರ ಬಿ. ಖಂಡ್ರೆ ಉದ್ಘಾಟಿಸಿದರು. ಆನಂತರ ರಾಜಕಾರಣಿಗಳು, ಸ್ವಾಮೀಜಿಗಳು, ವಿವಿಧ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಪರಸ್ಪರ ಕೈಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಶರಣು ಸಲಗರ್, ವಿಧಾನ ಪರಿಷತ್‌ ಸದಸ್ಯ ಎಂ.ಜಿ. ಮುಳೆ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿ ಪ್ರವೀಣ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಡಿಸಿಎಫ್ ವಾನತಿ ಎಂ.ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮತ್ತಿತರರು ಪಾಲ್ಗೊಂಡಿದ್ದರು.

ಬುದ್ಧ ಬಸವ ಅಂಬೇಡ್ಕರ್‌ ಆಶಯ

ಸ್ಮರಣೆ ಗೌತಮ ಬುದ್ಧ ವಿಶ್ವಗುರು ಬಸವಣ್ಣ ಡಾ.ಬಿ.ಆರ್. ಅಂಬೇಡ್ಕರ್ ಮಹಾತ್ಮ ಗಾಂಧೀಜಿ ಎಲ್ಲ ಸ್ವಾತಂತ್ರ್ಯ ಸೇನಾನಿಗಳು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಸ್ಮರಣೆಯೊಂದಿಗೆ ಮಾತು ಆರಂಭಿಸಿದ ಸಚಿವ ಈಶ್ವರ ಬಿ. ಖಂಡ್ರೆಇಡೀ ಜಗತ್ತಿನಲ್ಲಿ ನಮ್ಮ ಸಂವಿಧಾನ ಬಹಳ ಶ್ರೇಷ್ಠವಾದುದು. ಈ ಸಂವಿಧಾನದ ಆಶಯಗಳು ಮುಂದಿನ ಭವಿಷ್ಯದ ಪೀಳಿಗೆಗೆ ಪರಿಚಯ ಮಾಡಿಕೊಡುವುದು. ಸಮಾನತೆ ಸ್ವಾತಂತ್ರ್ಯ ಭಾತೃತ್ವದ ವಿಚಾರಗಳ ಮೇಲೆ ನಮ್ಮ ಸಮಾಜ ರೂಪುಗೊಳ್ಳಬೇಕೆಂಬುದು ನಮ್ಮ ಸರ್ಕಾರದ ಆಶಯವಾಗಿದೆ ಎಂದರು. ಸಾಮಾಜಿಕ ನ್ಯಾಯದ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕಾರ್ಯಕ್ರಮವನ್ನು ಎಲ್ಲರೊಂದಿಗೆ ಚರ್ಚಿಸಿ ರೂಪಿಸಿದ್ದಾರೆ. ಜಗತ್ತಿನ ಪ್ರಪ್ರಥಮ ಸಂಸತ್ತು ಅನುಭವ ಮಂಟಪದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ಸಮಾಜೋ ಧಾರ್ಮಿಕ ಕ್ರಾಂತಿ ನಡೆದಿತ್ತು. ಸಮ ಸಮಾಜದ ನಿರ್ಮಾಣಕ್ಕೆ ಶರಣರು ಶ್ರಮಿಸಿದ್ದರು. ಅಸ್ಪೃಶ್ಯತೆ ಜಾತೀಯತೆ‌ಕಂದಾಚಾರದ ವಿರುದ್ದ ಹೋರಾಟ ನಡೆಸಿದ್ದರು. ಬಸವಾದಿ ಶರಣರ ಆದರ್ಶಗಳನ್ನು ಬಾಬಾ ಸಾಹೇಬರು ಸಂವಿಧಾನದಲ್ಲಿ ಅಳವಡಿಸಿಕೊಂಡು ಜಾರಿಗೆ ತಂದಿದ್ದಾರೆ. ಅನುಭವ ಮಂಟಪದಿಂದ ಚಾಮರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ 45 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗಿದೆ. ಬ್ರಿಟನ್ ಗಿಂತ ಮೊದಲೇ ಬಸವಕಲ್ಯಾಣದಲ್ಲಿ ಜಗತ್ತಿನ ಮೊದಲ ಸಂಸತ್ತು ನಿರ್ಮಿಸಲಾಗಿತ್ತು ಎಂದು ತಿಳಿಸಿದರು. ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಬಿರುಕು ದ್ವೇಷ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಬಡವರ ಮೇಲೆ ಹೆಚ್ಚಿನ ಶೋಷಣೆಗಳಾಗುತ್ತಿವೆ. ಅದು ತಪ್ಪಬೇಕಾದರೆ ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಈಡೇರುವ ಅಗತ್ಯವಿದೆ ಎಂದು ಹೇಳಿದರು. 2025ರ ಡಿಸೆಂಬರ್ ನೊಳಗೆ ಅನುಭವ ಮಂಟಪದ ಕಾಮಗಾರಿ ಮುಗಿಸಿ ಲೋಕಾರ್ಪಣೆ ಗೊಳಿಸಲಾಗುವುದು. ಈ ರಾಷ್ಟ್ರ ದ ಏಕತೆ ಸಮಗ್ರತೆ ಅಖಂಡತೆಗಾಗಿ ನಮ್ಮ ಹಿರಿಯರು ತ್ಯಾಗ ಬಲಿದಾನ ಮಾಡಿದ್ದಾರೆ. ಶ್ರೇಷ್ಠ ಸಂವಿಧಾನ ಸಿಕ್ಕಿದೆ. ನಾವೆಲ್ಲರೂ ಅದನ್ನು ಅನುಷ್ಠಾನಕ್ಕೆ ತರಲು ಶ್ರಮಿಸೋಣ ಎಂದರು. ರಾಜ್ಯದಾದ್ಯಂತ ಈ ದಿನ ಹತ್ತು ಸಾವಿರ ಸಸಿಗಳನ್ನು ನೆಡಲಾಗುತ್ತಿದೆ. ಹಸಿರು ಹೊದಿಕೆ ಜಾಸ್ತಿ ಮಾಡೋಣ ಪ್ರಕೃತಿ ಸಂರಕ್ಷಿಸುವ ಸಂಕಲ್ಪ ಮಾಡಬೇಕಿದೆ. ಸಂವಿಧಾನ ವಿವಿಧತೆಯಲ್ಲಿ ಏಕತೆ ಸಾಮರಸ್ಯ ಸಹೋದರತ್ವದ ತಳಹದಿ ಮೇಲೆ ಸುಂದರ ಸಮಾಜ ನಿರ್ಮಾಣ ಮಾಡೋಣ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT