ಮಂಗಳವಾರ, ಆಗಸ್ಟ್ 3, 2021
24 °C
ಪಾಪನಾಶ ಕೆರೆ ಪರಿಸರದಲ್ಲಿ ಸಸಿ ನೆಟ್ಟರು, ಪುಷ್ಕರಣಿ ಶುಚಿಗೊಳಿಸಿದರು

ರೋಟರಿ ಸದಸ್ಯರ ಪರಿಸರ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಸದಸ್ಯರು ಇಲ್ಲಿಯ ಐತಿಹಾಸಿಕ ಪಾಪನಾಶ ಕೆರೆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಪ್ರೀತಿ ತೋರಿದ್ದಾರೆ.

ಕೆರೆ ಸುತ್ತಮುತ್ತ ಶುಕ್ರವಾರ ಗುಂಡಿಗಳನ್ನು ಅಗೆದು ಬೇವು, ನೇರಳೆ ಮೊದಲಾದ ಸಸಿಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದರು.

ಮೊದಲ ಹಂತದಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವು ಮಾಡಿ ಕೆರೆ ಶುದ್ಧಗೊಳಿಸಿದ್ದ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಸದಸ್ಯರು, ಎರಡನೇ ಹಂತದಲ್ಲಿ ಪಾಪನಾಶ ದೇಗುಲ ಮುಂಭಾಗದ ಪುಷ್ಕರಣಿಯನ್ನು ಶುಚಿಗೊಳಿಸಿದ್ದರು. ಇದೀಗ ಕೆರೆ ಪರಿಸರದಲ್ಲಿ ಹಸಿರು ನಳನಳಿಸುವಂತೆ ಮಾಡಲು ಸಂಕಲ್ಪ ತೊಟ್ಟಿದ್ದಾರೆ.

‘ಪಾಪನಾಶ ಕೆರೆ ನಗರದ ಪುರಾತನ ಕೆರೆಗಳಲ್ಲಿ ಒಂದಾಗಿದೆ. ಆದರೆ, ನೈರ್ಮಲ್ಯ ಕಾಪಾಡದ ಕಾರಣ ಕೆರೆ ಮಲೀನಗೊಂಡಿತು. ಇದು, ಪರಿಸರ ಪ್ರೀಯರ ಬೇಸರಕ್ಕೆ ಕಾರಣವಾಗಿತ್ತು. ಹೀಗಾಗಿ ನಿತ್ಯ ವಾಯು ವಿಹಾರಕ್ಕೆ ಬರುತ್ತಿದ್ದ ರೋಟರಿ ಕ್ಲಬ್ ಸದಸ್ಯರೆಲ್ಲರೂ ಸೇರಿಕೊಂಡು ಕೆರೆ ಶುದ್ಧೀಕರಣ ಮಾಡಲು ನಿರ್ಧರಿಸಿದೇವು. ನಾಲ್ಕು ತಿಂಗಳ ಕಾಲ ಶ್ರಮದಾನ ಮಾಡಿ, ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿ ಕೆರೆಯನ್ನು ಸ್ವಚ್ಛಗೊಳಿಸಿದೇವು’ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಕಾರ್ಯದರ್ಶಿ ಡಾ. ನಿತೇಶಕುಮಾರ ಬಿರಾದಾರ ತಿಳಿಸಿದರು.

‘ಕೆರೆಯಲ್ಲಿ ಕಸ, ಅನುಪಯುಕ್ತ ವಸ್ತುಗಳನ್ನು ಎಸೆಯುತ್ತಿದ್ದ ಅನೇಕರಿಗೆ ತಿಳಿವಳಿಕೆ ನೀಡಿದೇವು. ಎರಡು ಡಸ್ಟ್‌ಬೀನ್‍ಗಳು ಇಟ್ಟು ಅದರೊಳಗೆ ಕಸ ಹಾಕುವಂತೆ ಮನವೊಲಿಸಿದೇವು. ಕೆರೆಯೊಳಗೆ ಕಲುಷಿತ ನೀರು ಬಿಡದಂತೆಯೂ ಜಾಗೃತಿ ಮೂಡಿಸಿದವು. ಅದರ ಫಲವಾಗಿ ಈಗ ಕೆರೆ ಸ್ವಚ್ಛಗೊಂಡಿದೆ. ಕೆರೆ ಪ್ರದೇಶದಲ್ಲಿ ಮೊದಲು ಇದ್ದ ಗಿಡಗಳಿಗೆ ನಿತ್ಯ ನೀರುಣಿಸಿ ಬೆಳೆಸುತ್ತಿದ್ದೇವೆ. ಹೊಸದಾಗಿ ಗುಂಡಿಗಳನ್ನು ತೋಡಿ ಬಗೆ ಬಗೆಯ ಸಸಿಗಳನ್ನೂ ನೆಡುತ್ತಿದ್ದೇವೆ’ ಎಂದು ಹೇಳಿದರು.

‘ಬರುವ ದಿನಗಳಲ್ಲಿ ಕೆರೆ ಚಿತ್ರಣವೇ ಬದಲಾಗಲಿದೆ. ಆಹ್ಲಾದಕರ ವಾತಾವರಣ ನಿರ್ಮಾಣಗೊಳ್ಳಲಿದೆ. ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಬರುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಲಿದೆ’ ಹೇಳಿದರು.

‘ಪಾಪನಾಶ ದೇವಸ್ಥಾನ ಮುಂಭಾಗದ ಪುಷ್ಕರಣಿ ಕೆಲ ದಿನಗಳಿಂದ ಸ್ವಚ್ಛಗೊಂಡಿರಲಿಲ್ಲ. ಜೆಸಿಬಿ ಬಳಸಿ ಎರಡು ದಿನಗಳಲ್ಲಿ ಅದನ್ನು ಶುಚಿಗೊಳಿಸಿದ್ದೇವೆ. ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದೇವೆ. ಇನ್ನು ಮುಂದೆ ತಿಳಿ ನೀರು ಸಂಗ್ರಹವಾಗುವುದರಿಂದ ಭಕ್ತರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಕ್ಲಬ್ ಸಹ ಕಾರ್ಯದರ್ಶಿ ಡಾ. ಕಪಿಲ್ ಪಾಟೀಲ, ಸದಸ್ಯರಾದ ಡಾ. ರಘು ಕೃಷ್ಣಮೂರ್ತಿ, ಸೂರ್ಯಕಾಂತ ರಾಮಶೆಟ್ಟಿ, ಡಾ. ಜಗದೀಶ ಪಾಟೀಲ, ಡಾ. ರಿತೇಶ ಸುಲೆಗಾಂವ, ಬಸವರಾಜ ಮಡಕಿ, ಸತೀಶ ಸ್ವಾಮಿ, ಚೇತನ್ ಮೇಗೂರ, ಸಚ್ಚಿದಾನಂದ ಚಿದ್ರೆ, ನಿತಿನ್ ಕರ್ಪೂರ, ಡಾ. ಲೋಕೇಶ, ವಿಜಯ ಗುನ್ನಳ್ಳಿ, ಫರ್ದಿನ್ ಮುಲ್ತಾನಿ, ಶಿವಕುಮಾರ ಪಾಖಲ್, ಪ್ರಭು, ಡಾ. ನಾಗೇಶ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.