ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ನಾಶ ಮುಂದುವರಿದರೆ ಜಲಕ್ಷಾಮ: ಮನಗೂಳಿ ಆತಂಕ

ವಿಶ್ವ ಜಲ ದಿನಾಚರಣೆ
Last Updated 26 ಮಾರ್ಚ್ 2019, 15:12 IST
ಅಕ್ಷರ ಗಾತ್ರ

ಬೀದರ್‌: ‘ಅರಣ್ಯ ನಾಶ ಮುಂದುವರಿದರೆ ಬರುವ ದಿನಗಳಲ್ಲಿ ಜಲಕ್ಷಾಮ ಎದುರಾಗಲಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಲಬುರ್ಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಗರದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಜಲ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಗಿಡಮರಗಳನ್ನು ಕಡಿಯುವುದು ಹೆಚ್ಚಾಗಿರುವ ಕಾರಣ ಪರಿಸರ ಮಾಲಿನ್ಯ ಆಗುತ್ತಿದೆ. ಅಂತರ್ಜಲ ಮಟ್ಟ ಆಳಕ್ಕೆ ಕುಸಿಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ಗಿಡ ಮರಗಳನ್ನು ಬೆಳೆಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಈಗಿನ ಅವಶ್ಯಕತೆಯಾಗಿದೆ. ಈಗಾಗಲೇ ಕೊರೆದಿರುವ ಕೊಳವೆಬಾವಿಗಳ ಸುತ್ತಲೂ ಇಂಗುಗುಂಡಿಗಳನ್ನು ನಿರ್ಮಿಸಬೇಕು. ಮಳೆ ನೀರು ಸಂಗ್ರಹಿಸುವ ವ್ಯವಸ್ಥೆಯಾಗಬೇಕು’ ಎಂದು ಹೇಳಿದರು.

‘ಜೀವಿಗಳು ಬದುಕಲು ಅವಶ್ಯಕವಾಗಿರುವ ಜಲ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ರಾಘವೇಂದ್ರ ಮಾತನಾಡಿ, ‘ಯುವಜನರು ಯಾವುದೇ ದುಶ್ಚಟಗಳ ದಾಸರಾಗದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಕಾಲಹರಣ ಮಾಡಬಾರದು’ ಎಂದು ತಿಳಿಸಿದರು.

ಕಾಲೇಜು ಪ್ರಾಚಾರ್ಯ ಡಾ.ಸಂಜೀವರೆಡ್ಡಿ ಕೆ.ಹುಡಗಿಕರ್ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಶಂಕ್ರೆಪ್ಪ ಜನಕಟ್ಟಿ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT