ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಟ್ಟಿ ಸಾಹಿತ್ಯ ಹೊರಬರಲಿ

ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಸಲಹೆ
Last Updated 21 ನವೆಂಬರ್ 2018, 19:59 IST
ಅಕ್ಷರ ಗಾತ್ರ

ಬೀದರ್‌: ‘ಇಂದಿನ ಯುವ ಸಾಹಿತಿಗಳು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂಥ ಗಟ್ಟಿ ಸಾಹಿತ್ಯ ರಚಿಸುವ ಅಗತ್ಯವಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ನಗರದ ಹಾರೂರಗೇರಿ ಕಮಾನ್‌ ಸಮೀಪದ ಜೈಭವಾನಿ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಕಾರ್ಯಚಟುವಟಿಕೆ ಹಾಗೂ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಹಿತ್ಯ ಅನುಭಾವದ ಅಂತರಾಳದಿಂದ ಹೊರಹೊಮ್ಮಬೇಕು ಹಾಗೂ ಕಾವ್ಯ ಭಾವನೆಗಳನ್ನು ವ್ಯಕ್ತಪಡಿಸುವಂತಿರಬೇಕು. ಒಬ್ಬ ಸಾಹಿತಿ ಯಾವುದೇ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡಾಗ ಅವನ ದೃಷ್ಟಿಕೋನದಲ್ಲೇ ಸಾಹಿತ್ಯ ರಚಿಸುತ್ತಾನೆ. ವಿಷಯ ಒಂದೇ ಆಗಿದ್ದರೂ ಬೇರೆ ಬೇರೆ ಸಾಹಿತಿಗಳ ಸಾಹಿತ್ಯ ರಚನೆಯಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ’ ಎಂದು ಹೇಳಿದರು.

‘ಮಹಿಳೆಯರು ತಮ್ಮ ಹವ್ಯಾಸಗಳನ್ನು ಬರಹ ರೂಪದಲ್ಲಿ ಇಳಿಸಬೇಕು. ಸಾಹಿತ್ಯದ ಮೂಲಕ ಪ್ರತಿಭೆ ಮೆರೆಯಬೇಕು. ಆ ಮೂಲಕ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘ಹೆಣ್ಣು ಯಾರದೋ ಮಗಳು, ಸಹೋದರಿ, ಹೆಂಡತಿ, ತಾಯಿ ಹಾಗೂ ಅಜ್ಜಿ ಎಂದು ಗುರುತಿಸಿಕೊಳ್ಳುತ್ತಾಳೆ. ಕಾಲಕ್ಕೆ ಅನುಗುಣವಾಗಿ ಅನುಭವಗಳನ್ನೂ ಪಡೆಯುತ್ತಾಳೆ. ಇನ್ನೊಬ್ಬರಿಗಾಗಿ ಸಮರ್ಪಣಾ ಭಾವದಿಂದ ಬದುಕು ಸವೆಸಿದರೂ ಅವಳಿಗೆ ತನ್ನತನ ಎನ್ನುವುದು ಇರುವುದಿಲ್ಲ. ಪ್ರತಿಯೊಬ್ಬ ಮಹಿಳೆ ಜಗತ್ತು ಗುರುತಿಸುವ ರೀತಿಯಲ್ಲಿ ಬೆಳೆಯಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಕಾವ್ಯ ಜನಪದ ಗೀತೆಗಳಿಂದ ಹುಟ್ಟಿದೆ. ಹಿಂದೆ ಮಹಿಳೆಯರು ಜಾನಪದ ಗೀತೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಇಂದು ಬರಹದ ಮೂಲಕ ಭಾವನೆಗಳನ್ನು ಅಭಿವ್ಯಕ್ತಗೊಳಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ದೇಶಕ್ಕೆ ಇಂಗ್ಲಿಷ್‌ ಭಾಷೆ ಪ್ರವೇಶ ಮಾಡುವ ಮೊದಲೇ ಕನ್ನಡ ಹುಟ್ಟಿಕೊಂಡಿದೆ. ಆದರೆ ಇಂದು ಮಾತೃಭಾಷೆಗಿಂತಲೂ ಇಂಗ್ಲಿಷ್‌ ಬಳಕೆ ಹೆಚ್ಚಾಗುತ್ತಿದೆ. ಆಡಳಿತದಲ್ಲಿ ಕನ್ನಡ ಅನುಷ್ಠಾನ ಕಡಿಮೆಯಾಗುತ್ತ ನಡೆದಿದೆ. ಕನಿಷ್ಠ ಕನ್ನಡ ಮೂಲದ ಅಧಿಕಾರಿಗಳಾದರೂ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಲು ಆಸ್ಥೆ ವಹಿಸಬೇಕು’ ಎಂದು ಮನವಿ ಮಾಡಿದರು.

‘ಕನ್ನಡ ಸಾಹಿತ್ಯ ಪರಿಷತ್ತಿಗೆ ಮೊದಲು ಮಹಿಳಾ ಪ್ರತಿನಿಧಿಯನ್ನು ನೇಮಕ ಮಾಡಲಾಗುತ್ತಿತ್ತು. ಬೀದರ್‌ ಜಿಲ್ಲೆಯಲ್ಲಿ ಮಹಿಳಾ ಘಟಕವನ್ನೇ ಸ್ಥಾಪನೆ ಮಾಡಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗಿದೆ’ ಎಂದು ತಿಳಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಕಸ್ತೂರಿ ಪಟಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷೆ ಲೀಲಾವತಿ ನಿಂಬೂರೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಎಂ.ಜಿ. ದೇಶಪಾಂಡೆ, ಯಶೋಧಾ ಕಟಕೆ, ಬಿಆರ್‌ಸಿ ವಿಜಯಕುಮಾರ ಬೆಳಮಗಿ ಉಪಸ್ಥಿತರಿದ್ದರು.


ಭಾಗೀರಥಿ ಕೊಂಡಾ ಸ್ವಾಗತಿಸಿದರು. ವಿದ್ಯಾವತಿ ಬಲ್ಲೂರ ಹಾಗೂ ಸುನೀತಾ ಕೂಡ್ಲಿಕರ್ ನಿರೂಪಿಸಿದರು. ಜಗದೇವಿ ತಿಬಶೆಟ್ಟಿ ವಂದಿಸಿದರು.

ಕವನ ವಾಚನ

ರಜಿಯಾ ಬಳಬಟ್ಟಿ, ಅರುಣಾ ಬಿರಾದಾರ, ಶಾಂತಾ ಬಿರಾದಾರ, ಕೀರ್ತಿಲತಾ ಬಿರಾದಾರ, ಉಮಾದೇವಿ ಬಾಪೂರೆ, ಕೌಟಗೆ ವಿಜಯಲಕ್ಷ್ಮಿ , ಜಗದೇವಿ ತಿಬಟ್ಟಿ, ಜಗದೇವಿ ಭೋಸ್ಲೆ, ಪಾರ್ವತಿ ಸೋನಾರೆ, ಮಂಗಲಾ ಗಡಮಿ, ಮಹಾನಂದಾ ಮಡಕಿ, ರಾಜಮ್ಮ ಚಿಕ್ಕಪೇಟೆ, ವೀಣಾ ಜಲಾದೆ, ವೀರೇಶ್ವರಿ ಮೂಲಗೆ, ವೇದಾವತಿ ಮಠಪತಿ, ಶಾಂತಮ್ಮ ಬಲ್ಲೂರ, ಶಿಲ್ಪಾ ಕಲಬುರ್ಗಿ, ಧನಲಕ್ಷ್ಮಿ ಪಾಟೀಲ, ಲಕ್ಷ್ಮಿ ಪಾಟೀಲ, ಶ್ರೀದೇವಿ ವಿ. ಪಾಟೀಲ, ಮೇನಕಾ ಪಾಟೀಲ, ಸಾಧನಾ ರಂಜೋಳಕರ್, ಸುನೀತಾ ಕೂಡ್ಲಿಕರ್, ಸುನೀತಾ ದಾಡಗಿ, ದೇಶಾಂಶ ಹುಡಗಿ, ಮೋಹನ ಪಾಟೀಲ ಸ್ವರಚಿತ ಕವನ ವಾಚನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT