ಚಿಟಗುಪ್ಪ: ’ವೃಷ್ಠಿ ಜಪ ಯಜ್ಞ ಮಾಡುವುದರಿಂದ ಭೂಮಿಗೆ ಮಳೆ ಸುರಿಯುತ್ತದೆ, ಯಜ್ಞದಿಂದ ಬರುವ ಹೊಗೆಯಿಂದ ಮೋಡ ಚದುರುತ್ತವೆʼ ಎಂದು ಅರ್ಚಕ ವಿವೇಕಾನಂದ ಹೇಳಿದರು.
ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದ ಹೊರವಲಯದಲ್ಲಿರುವ ಹನುಮಾನ ಲಂಕಾದಲ್ಲಿ ಭಾನುವಾರ ವೃಷ್ಠಿ ಜಪ ಯಜ್ಞ ಆರಂಭಿಸಿ ಅವರು ಮಾತನಾಡಿದರು.
ಐದು ದಿನಗಳವರೆಗೆ ನಿರಂತರವಾಗಿ ಜಪ ಯಜ್ಞ ಮಾಡುವುದರಿಂದ ಮಳೆ ಬಂದು ಧರೆ ತಂಪಾಗಿಸುತ್ತದೆ. ರೈತರು ಬಿತ್ತನೆ ಕಾರ್ಯ ಆರಂಭಿಸಲು ಸಹಕಾರಿಯಾಗುತ್ತದೆ, ಜಾನುವಾರುಗಳಿಗೆ ಹುಲ್ಲು ಬೆಳೆದು ಅನುಕೂಲವಾಗುತ್ತದೆ, ಕುಡಿಯಲು ನೀರು ಲಭ್ಯವಾಗುತ್ತದೆ. ಹೀಗಾಗಿ ಎಲ್ಲರೂ ಯಜ್ಞಪೂಜೆಯಲ್ಲಿ ಭಕ್ತಿಯಿಂದ ಪಾಲ್ಗೊಂಡು ಸೇವೆ ಸಲ್ಲಿಸಬೇಕು ಎಂದರು.
ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು. ನಂತರ ಪುಷ್ಪಾರ್ಚನೆ ಮಾಡಿ ಮಂಗಳಾರತಿ ಮುಗಿಸಿ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಜಗನ್ನಾಥ ಪಂಡಿತಜಿ, ಸಂಜುಕುಮಾರ್ ಪಂಚಾಳ, ಸಂದೀಪ, ವಿಜಯಕುಮಾರ್, ಜಗನ್ನಾಥ ಉಪ್ಪಾರ, ಶಿವಕುಮಾರ್ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.