ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಎಳ್ಳು ಅಮಾವಾಸ್ಯೆ

ಕುಟುಂಬದ ಸದಸ್ಯರಿಂದ ಸಾಮೂಹಿಕ ಭೋಜನ; ತೋಟದಲ್ಲಿ ಹಣ್ಣು, ಹಸಿ ಕಡಲೆ ಸೇವಿಸಿದ ಮಕ್ಕಳು
Last Updated 5 ಜನವರಿ 2019, 12:07 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ವಿವಿಧೆಡೆ ಶನಿವಾರ ಎಳ್ಳು ಅಮಾವಾಸ್ಯೆಯ ಪ್ರಯುಕ್ತ ರೈತರು ಕುಟುಂಬದ ಸದಸ್ಯರೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಪಾಂಡವರ ಪ್ರತಿಮೆ ಹಾಗೂ ಭೂದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ರೈತರು ಹೊಲದಲ್ಲಿ ಜೋಳದ ಕನಿಕೆಯಿಂದ ಕೊಂಪೆ ಕಟ್ಟಿ ಅದಕ್ಕೆ ಹೊಸ ಸೀರೆಯನ್ನು ಸುತ್ತಿ ಕೊಂಪೆಯೊಳಗೆ ಪಾಂಡವರ ಪ್ರತಿಮೆಗಳ ರೂಪದಲ್ಲಿ ಐದು ಕಲ್ಲುಗಳನ್ನು ಇಟ್ಟು ಅರಿಷಿಣ ಕುಂಕುಮ ಹಾಗೂ ವಿಭೂತಿ ಬಳಿದು ಆರತಿ ಬೆಳಗಿದರು.

ಮನೆಯಿಂದ ತಂದಿದ್ದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ರುಚಿಕಟ್ಟಾದ ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆ, ಜೋಳದ ಅನ್ನ, ನವಣೆ ಅನ್ನ ಹಾಗೂ ಕಡುಬು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ ಭಕ್ತಿಭಾವದಿಂದ ಸಮರ್ಪಿಸಿದರು.

ಹಿಂಗಾರು ಹಂಗಾಮಿನಲ್ಲಿ ಮಳೆ, ಬೆಳೆ ಎರಡೂ ಕೈಕೊಟ್ಟಿದ್ದನ್ನು ಸ್ಮರಿಸುತ್ತ ಬರುವ ದಿನಗಳಲ್ಲಾದರೂ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಬೆಳೆಯುವಂತೆ ಕರುಣಿಸು ಎಂದು ದೇವರಲ್ಲಿ ಕೈಮುಗಿದು ಪ್ರಾರ್ಥಿಸಿಕೊಂಡರು.

ಗ್ರಾಮದ ಮಹಿಳೆಯರು ಆರತಿ ಬೆಳಗುವ ಮೂಲಕ ಜನಪದ ಹಾಡುಗಳನ್ನು ಹಾಡಿ ಜನಮನ ರಂಜಿಸಿದರು.

ಹೊಲದ ಅಂಚಿನಲ್ಲಿದ್ದ ಬೇವು ಹಾಗೂ ಮಾವಿನ ಮರಗಳ ಕೆಳಗೆ ಕುಳಿತು ಕುಟುಂಬದ ಸದಸ್ಯರೊಂದಿಗೆ ಭೋಜನ ಮಾಡಿದರು. ನಂತರ ಮರದ ಕೆಳಗೆ ಚಾಪೆ ಹಾಸಿಕೊಂಡು ಹಿರಿಯರು ವಿಶ್ರಾಂತಿ ಪಡೆದರೆ, ಮಕ್ಕಳು ಮರಕ್ಕೆ ಕಟ್ಟಲಾಗಿದ್ದ ಹಗ್ಗದ ಮೇಲೆ ಜೋಕಾಲಿ ಆಡಿ ಸಂಭ್ರಮಿಸಿದರು. ಯುವಕರು ಅಲ್ಲಲ್ಲಿ ಬೆಳೆದಿದ್ದ ಹಸಿ ಕಡಲೆ ಗಿಡಗಳನ್ನು ಕಿತ್ತುಕೊಂಡು ಬಂದು ಗುಂಪಿನಲ್ಲಿ ಕುಳಿತು ಕಡಲೆ ಸವಿ ಸವಿದರು.

ಬೀದರ್ ತಾಲ್ಲೂಕಿನ ಚಿಟ್ಟಾ, ಕಮಠಾಣಾ, ಫತೇಪುರದಲ್ಲಿ ಮುಸ್ಲಿಮರು ಸಹ ಎಳ್ಳ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿ ತೋಟದಲ್ಲೇ ಸಾಮೂಹಿಕ ಭೋಜನ ಮಾಡಿದರು. ಕೆಲವರು ಚಕ್ಕಡಿಗಳಲ್ಲೇ ತೋಟಕ್ಕೆ ಬಂದು ಮನೆಗೆ ಮರಳಿದರು.

ನಗರಪ್ರದೇಶದಲ್ಲಿ ವಾಸವಾಗಿರುವ ಕೆಲ ಕುಟುಂಬಗಳು ರೊಟ್ಟಿ ಅಂಗಡಿಗಳಲ್ಲಿ ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ ಚಟ್ನಿ, ಮೊಸರು, ಶೇಂಗಾ-ಎಳ್ಳಿನ ಹೋಳಿಗೆ ಖರೀದಿಸಿಕೊಂಡು ಕಾರಿನಲ್ಲಿ ಹೊಲಗಳಿಗೆ ತೆರಳಿ ದೇಸಿ ಊಟ ಮಾಡಿ ಮಕ್ಕಳೊಂದಿಗೆ ಸಮಯ ಕಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT