ಬುಧವಾರ, ಆಗಸ್ಟ್ 10, 2022
25 °C

ಬಿಜೆಪಿಯೊಂದಿಗೆ ಡೀಲ್‌ ಮಾಡಿದ್ದು ನಿಜ: ಮಾಜಿ ಶಾಸಕ ಮಾರುತಿರಾವ್‌ ಮುಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಹೌದು ಬಿಜೆಪಿಯೊಂದಿಗೆ ಡೀಲ್‌ ಮಾಡಿದ್ದು ನಿಜ. ಬಸವಕಲ್ಯಾಣ ಹಾಗೂ ಮರಾಠಾ ಸಮಾಜದ ಅಭಿವೃದ್ಧಿಗೆ ಈ ಡೀಲ್‌ ಮಾಡಿದ್ದೇನೆ’ ಎಂದು ಮಾಜಿ ಶಾಸಕ, ಮರಾಠಾ ಸಮಾಜದ ಮುಖಂಡ ಮಾರುತಿರಾವ್ ಮುಳೆ ಹೇಳಿದರು.

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿ ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮರಾಠಾ ಅಭಿವೃದ್ಧಿ ನಿಗಮ. ಮರಾಠಾ ಸಮಾಜವನ್ನು 2ಎ, ಷಹಾಜಿ ಮಹಾರಾಜರ ಸಮಾಧಿ, ಸಂಭಾಜಿ ಮಹಾರಾಜ ಸಮಾಧಿ, ಬಸವಕಲ್ಯಾಣದಲ್ಲಿ ಶಿವಾಜಿ ಪಾರ್ಕ್‌ ನಿರ್ಮಾಣಕ್ಕಾಗಿ ಬಿಜೆಪಿಯೊಂದಿಗೆ ಡೀಲ್‌ ಮಾಡಿದ್ದೇನೆ. ಅಭಿವೃದ್ಧಿ ವಿಷಯಕ್ಕಾಗಿ ಡೀಲ್‌ ಮಾಡಿದ ಬಗ್ಗೆ ನನಗೆ ಅಭಿಮಾನ ಇದೆ’ ಎಂದು ಮುಳೆ ಎದೆ ತಟ್ಟಿ ಹೇಳಿದರು.

‘ಮರಾಠಾ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರಿಸಲು ಕೆಲವು ತಾಂತ್ರಿಕ ಅಡಚಣೆಗಳಿವೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಮರಾಠಾ ಸಮುದಾಯದವರು ಸಂಯಮ ಕಾಯ್ದು ಕೊಳ್ಳಬೇಕಾಗಿದೆ’ ಎಂದು ತಿಳಿಸಿದರು.

‘ಶರಣು ಸಲಗರ ಈಗ ಹೊರಗಿನವರಲ್ಲ. ಎರಡು ವರ್ಷಗಳಿಂದ ಬಸವಕಲ್ಯಾಣದಲ್ಲೇ ವಾಸವಾಗಿದ್ದಾರೆ. ಅವರ ಮೇಲೆ ವಿಶ್ವಾಸ ಇದೆ. ಮುಖ್ಯಮಂತ್ರಿಗಳು ಬಸವಕಲ್ಯಾಣ ಕ್ಷೇತ್ರವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಿದ್ದಾರೆ ಎನ್ನುವ ವಿಶ್ವಾಸ ಇದೆ’ ಎಂದು ಹೇಳಿದರು.

ಮರಾಠಾ ಸಮಾಜಕ್ಕೆ ಬಿಜೆಪಿ ಬಿಟ್ಟು ಪರ್ಯಾಯ ಇಲ್ಲ. ಒಂದು ಸ್ಥಾನದಿಂದ ಸರ್ಕಾರಕ್ಕೆ ಏನೂ ಆಗದಿರಬಹುದು. ಆದರೆ, ಆದರೆ, ಮರಾಠರು ಬೆಂಬಲಿಸಿದರೆ ಮುಂದೊಂದು ದಿನ ಅನುಕೂಲವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಮರಾಠಾ ಸಮಾಜಕ್ಕೆ ಸಂಬಂಧ ಇಲ್ಲದವರು ನನ್ನ ನಿರ್ಧಾರವನ್ನು ವಿರೋಧಿಸಿ ನನ್ನ ಭಾವಚಿತ್ರಕ್ಕೆ ಅವಮಾನ ಮಾಡಿದರು. ನಿಜವಾದ ಮರಾಠರು ನನ್ನ ಭಾವಚಿತ್ರದ ಅಭಿಷೇಕ ಮಾಡಿದರು’ ಎಂದು ಹೇಳಿದರು.

‘ಮುಖ್ಯಮಂತ್ರಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರು ಮರಾಠಾ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ನಾನು ಬಿಜೆಪಿ ಸೇರಿದ್ದೇನೆ. ಭಾನುವಾರ ಪಕ್ಷದ ರಾಜ್ಯ ಉಸ್ತುವಾರಿ ಅರುಣಸಿಂಗ್‌ ಅವರು ನನ್ನ ಮನೆಗೆ ಬಂದು ಭರವಸೆ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು