ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಳಾಯಿತು ಟರ್ಮಿನಲ್, ಹಾರಲಿಲ್ಲ ವಿಮಾನ

ದಶಕದಿಂದ ಪಾಳು ಬಿದ್ದಿರುವ ವಿಮಾನ ನಿಲ್ದಾಣ
Last Updated 6 ಜುಲೈ 2019, 19:45 IST
ಅಕ್ಷರ ಗಾತ್ರ

ಬೀದರ್‌: ಕೇಂದ್ರ ಸರ್ಕಾರ ‘ಉಡಾನ್’ ಯೋಜನೆ ಅಡಿಯಲ್ಲಿ ಬೀದರ್ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಾಗ ಜಿಲ್ಲೆಯ ಜನ ಒಳ್ಳೆಯ ದಿನಗಳು ಹತ್ತಿರಕ್ಕೆ ಬಂದವು ಎಂದು ಭಾವಿಸಿದ್ದರು. ಉಡಾನ್‌ ಯೋಜನೆಯಲ್ಲಿ ಬೀದರ್‌ ಸೇರಿಕೊಂಡು ಮೂರು ವರ್ಷಗಳಾದರೂ ಇನ್ನೂ ವಿಮಾನ ಹಾರಾಟದ ಲಕ್ಷಣಗಳು ಕಂಡು ಬರುತ್ತಿಲ್ಲ. 2009ರಲ್ಲಿ ಬೀದರ್–ಕಮಠಾಣ ರಸ್ತೆಯಲ್ಲಿ ಚಿದ್ರಿ ಸಮೀಪ ₹ 3.54 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಟರ್ಮಿನಲ್ ವಿಮಾನ ಹಾರಾಟದ ಮೊದಲೇ ಹಾಳಾಗಿರುವ ಕಾರಣ ಜಿಲ್ಲೆಯ ಜನತೆಗೆ ವಿಮಾನ ಸೇವೆ ಕನಸಿನ ಮಾತಾಗಿ ಉಳಿದಿದೆ.

ಹತ್ತು ವರ್ಷಗಳ ಹಿಂದೆ ಟರ್ಮಿನಲ್‌ನಲ್ಲಿ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಸುರಕ್ಷತಾ ಘಟಕ, ನಾಗರಿಕರ ಲಗೇಜ್‌ ಸ್ಕ್ಯಾನಿಂಗ್‌ಗೂ ಟಿಕೆಟ್‌ ಕೌಂಟರ್‌ನನ್ನು ನಿರ್ಮಿಸಲಾಗಿತ್ತು. ಇನ್ನೇನು ವಿಮಾನ ಹಾರಾಟ ಆರಂಭಿಸುವುದು ಒಂದೇ ಬಾಕಿ ಇತ್ತು. ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವು ಜಿ.ಎಂ.ಆರ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವೇ ಮುಳುವಾಗಿ ಇಂದಿಗೂ ವಿಮಾನ ಹಾರಾಟ ಆರಂಭವಾಗಿಲ್ಲ.

ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವು ಹೈದರಾಬಾದ್ ವಿಮಾನ ನಿಲ್ದಾಣದ ರೂವಾರಿ ಜಿ.ಎಂ.ಆರ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 150 ಕಿ.ಮೀ ವ್ಯಾಪ್ತಿಯೊಳಗೆ ಹೊಸ ವಿಮಾನ ನಿಲ್ದಾಣ ಆರಂಭಿಸುವಂತಿಲ್ಲ. ಹೈದರಾಬಾದ್ ಹಾಗೂ ಬೀದರ್ ವಿಮಾನ ನಿಲ್ದಾಣಗಳ ಅಂತರ 150 ಕಿ.ಮೀ ವ್ಯಾಪ್ತಿಯೊಳಗೆ ಬರುತ್ತದೆ. ಇದು ಬೀದರ್ ನಾಗರಿಕ ವಿಮಾನ ನಿಲ್ದಾಣ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ.

ನಿರ್ವಹಣೆಯ ಸಮಸ್ಯೆಯಿಂದ ಕಟ್ಟಡದಲ್ಲಿನ ಫಾಲ್ಸ್‌ ಸೀಲಿಂಗ್‌ ಕಳಚಿ ಕೆಳಗೆ ಬಿದ್ದಿದೆ. ಟರ್ಮಿನಲ್‌ಗೆ ಕಾವಲುಗಾರರನ್ನು ನಿಯೋಜಿಸದ ಕಾರಣ ಕಳ್ಳರು ಶೌಚಾಲಯದ ಬಾಗಿಲುಗಳು, ಫ್ಯಾನ್‌, ವಿದ್ಯುತ್‌ ಸ್ವಿಚ್‌ ಬೋರ್ಡ್‌ ಹಾಗೂ ವೈರ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಕಿಡಿಗೇಡಿಗಳು ಕಟ್ಟಡದ ಗಾಜುಗಳನ್ನು ಒಡೆದು ಹಾಕಿದ್ದಾರೆ. ಒಳಗೆ ಹಾವು, ಮುಂಗುಸಿಗಳು ನೆಲೆಸಿವೆ. ಒಟ್ಟಾರೆ ಟರ್ಮಿನಲ್‌ ಹಾಳು ಕೊಂಪೆಯಾಗಿದೆ.

ಬೀದರ್‌ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ವಿಮಾನ ಸಂಪರ್ಕಕ್ಕೆ ಇರುವ ಅಡ್ಡಿಗಳನ್ನು ನಿವಾರಿಸುವಂತೆ 2015ರ ಫೆಬ್ರುವರಿಯಲ್ಲಿ ಅಂದಿನ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ರೋಷನ್‌ ಬೇಗ್‌ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ನಂತರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಜಿಎಂಆರ್ ಸಂಸ್ಥೆ ಅಧಿಕಾರಿಗಳು ರಾಜ್ಯ ಸರ್ಕಾರದ ಪ್ರತಿನಿಧಿಗಳೊಂದಿಗೆ ವಿಮಾನ ನಿಲ್ದಾಣದ ಜಂಟಿ ಪರಿವೀಕ್ಷಣೆ ಮಾಡಿದ್ದರು. ನಂತರ ಉನ್ನತ ಅಧಿಕಾರಿಗಳ ಮಟ್ಟದ ಸಭೆಯೂ ನಡೆದಿತ್ತು. ಆದರೆ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ.

‘ಟರ್ಮಿನಲ್‌ ನಿರ್ವಹಣೆ ಹಾಗೂ ಕಾರ್ಯಾಚರಣೆಯ ಹೊಣೆಯನ್ನು ಜಿಎಂಆರ್ ಸಂಸ್ಥೆಯು ಬೇರೆ ಸಂಸ್ಥೆಗೆ ಕೊಡಲು ಸಿದ್ಧ ಇಲ್ಲ. ಹೀಗಾಗಿ ಬೀದರ್‌ ನಾಗರಿಕ ವಿಮಾನ ನಿಲ್ದಾಣದ ಹೊಣೆಯನ್ನೂ ವಹಿಸಿಕೊಳ್ಳುವಂತೆ ಜೆಎಂಆರ್‌ಗೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರ ಮೂಲಸೌಕರ್ಯ ಒದಗಿಸುವ ಕಾರ್ಯವನ್ನು ಎಷ್ಟು ಬೇಗ ಪೂರ್ಣಗೊಳಿಸುವುದೋ ಅಷ್ಟು ಬೇಗ ವಿಮಾನ ಹಾರಾಟ ಆರಂಭವಾಗಲಿದೆ’ ಎಂದು ಸಂಸದ ಭಗವಂತ ಖೂಬಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT