ಮಂಗಳವಾರ, ಜನವರಿ 25, 2022
25 °C
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ

ಬಿಜೆಪಿ ಸಚಿವರ ಶೂನ್ಯ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜಿಲ್ಲೆಯವರೇ ಆದ ಬಿಜೆಪಿ ಸಂಸದರು ಸಚಿವರಾದ ಮೇಲೆ ಸಾಧನೆ ಶೂನ್ಯವಾಗಿದೆ. ಏರ್‌ಪೋರ್ಟ್, ಫ್ಯಾಕ್ಟರಿ, ಗೊಬ್ಬರ ಪೂರೈಕೆ ಬಂದ್ ಆಗಿದೆ, ಹೆದ್ದಾರಿ ಕಾಮಗಾರಿಯೂ ನಿಂತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

ಇಲ್ಲಿಯ ಚಿದ್ರಿಯಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಭೀಮರಾವ್‌ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

’ಬಿಜೆಪಿಯವರು ಇದ್ದ ಹೆದ್ದಾರಿ ಕಿತ್ತು ಹಾಕಿ ಐದು ವರ್ಷಗಳಿಂದ ಜನರಿಗೆ ದೂಳು ತಿನ್ನಿಸುತ್ತಿದ್ದಾರೆ. ಹೆದ್ದಾರಿ ನಿರ್ವಹಣೆ ಸಮಸ್ಯೆಯಿಂದಾಗಿ ಅನೇಕ ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೀದರ್‌–ಹುಮನಾಬಾದ್, ಬೀದರ್‌–ಭಾಲ್ಕಿ ಹೆದ್ದಾರಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಬೀದರ್‌–ಔರಾದ್‌ ಹೆದ್ದಾರಿ ಕಾಮಗಾರಿ ಆರಂಭವಾಗಿಲ್ಲ’ ಎಂದು ಭಗತವಂತ ಖೂಬಾ ಹೆಸರು ಪ್ರಸ್ತಾಪಿಸದೇ ಆಕ್ರೋಶ ವ್ಯಕ್ತಪಡಿಸಿದರು.

‘ಟೋಲ್‌ ಕಲೆಕ್ಟ್‌ ಮಾಡಿ ಗುತ್ತಿಗೆದಾರರಿಗೆ ದುಡ್ಡು ಹೊಡೆಯಲು ಹೆದ್ದಾರಿ ಮಾಡುತ್ತಿದ್ದಾರೆಯೇ? ಅಥವಾ ಜನರಿಗೆ ಚಿತ್ರಹಿಂಸೆ ಕೊಡಲು ಮಾಡುತ್ತಿದ್ದಾರೆಯೇ? ಇಬ್ಬರು ಸಚಿವರು ದಿನಕ್ಕೆ ನಾಲ್ಕು ಬಾರಿ ಔರಾದ್–ಬೀದರ್‌ ನಡುವೆ ಪ್ರವಾಸ ಮಾಡಲಿ ಮೂಳೆ ಉಳಿಯುತ್ತವೆಯೇ ನೋಡೋಣ’ ಎಂದು ಸವಾಲು ಹಾಕಿದರು.

‘ಮಂತ್ರಿಗಳನ್ನು ಭೇಟಿ ಮಾಡಿ ಫೇಸ್‌ಬುಕ್‌ನಲ್ಲಿ ಅಪಲೋಡ್‌ ಮಾಡುತ್ತಿರುವುದೇ ಅವರ ಸಾಧನೆಯಾಗಿದೆ. ಮತದಾರರ ಬಳಿ ಹೋಗಲು ನಾಯಕರಿಗೆ ನೈತಿಕತೆ ಉಳಿದಿಲ್ಲ. ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರಿಗೆ ಉತ್ತರಕೊಡಬೇಕು’ ಎಂದು ಆಗ್ರಹಿಸಿದರು.

ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು, ಪಂಚಾಯಿತಿ ಸದಸ್ಯರಿಗೆ ಮನೆ ಮಂಜೂರು ಮಾಡುವ ಆಮಿಷ ಒಡ್ಡಿದ್ದಾರೆ. 28 ತಿಂಗಳಲ್ಲಿ ರಾಜ್ಯದಲ್ಲಿ ಒಂದು ಮನೆಯನ್ನೂ ಹಂಚಿಲ್ಲ. ಪಂಚಾಯಿತಿ ಸದಸ್ಯರಿಗೆ ₹ ಸಾವಿರ ಗೌರವಧನ ಕೊಡುವ ಭರವಸೆ ಕೊಡುತ್ತಿದ್ದಾರೆ. ಆದರೆ, ಹತ್ತು ತಿಂಗಳ ಅವಧಿಯಲ್ಲಿ ಸದಸ್ಯರಿಗೆ ಗೌರವಧನವಾಗಿ ಹತ್ತು ಪೈಸೆಯನ್ನೂ ಕೊಟ್ಟಿಲ್ಲ’ ಎಂದರು.

‘ಮತದಾರರು ಬಿಜೆಪಿ ಮುಖಂಡರ ಸುಳ್ಳು ಭರವಸೆಗಳಿಗೆ ಮರುಳಾಗದೇ ಉತ್ತಮ ಸೇವೆ ಒದಗಿಸಲು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕು’ ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹೀಂ ಖಾನ್, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್, ಅರವಿಂದಕುಮಾರ ಅರಳಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಮೀನಾಕ್ಷಿ ಸಂಗ್ರಾಮ್, ಇರ್ಷಾದ್‌ ಪೈಲ್ವಾನ್‌, ಅಮೃತ ಚಿಮಕೋಡ, ಡಿ.ಕೆ.ಸಂಜುಕುಮಾರ, ಮುರಳೀಧರ ಏಕಲಾರಕರ್, ಶಂಕರಾವ್‌ ದೊಡ್ಡಿ, ಬಸಿರೋದ್ದಿನ್‌ ಹಾಲಹಿಪ್ಪರಗಾ, ರೋಹಿದಾಸ ಘೋಡೆ, ಶಂಕರ ರೆಡ್ಡಿ, ಫರೀದ್‌ ಖಾನ್‌, ಮಾರುತಿ ಶಾಕಾ, ನಿಸಾರ್‌ಅಹಮ್ಮದ್‌ ಇದ್ದರು.

ಸಂಗೋಳಗಿಯಲ್ಲಿ ಪ್ರಚಾರ:

ಬೀದರ್‌ ತಾಲ್ಲೂಕಿನ ಸಂಗೋಳಗಿಯಲ್ಲಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ ಅವರು ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಭೀಮರಾವ್‌ ಪಾಟೀಲ ಪರ ಮತಯಾಚಿಸಿದರು.

ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಚಂದ್ರಶೇಖರ ಚನಶಟ್ಟಿ, ಕರೀಂಸಾಬ, ಅಶೋಕ ಪಾಟೀಲ ಕಂದಗೂಳ, ಅಶೋಕ ಪಾಟೀಲ ಸಂಗೋಳಗಿ, ರೇವಣಪ್ಪ ಮಂಡಗಿ, ಚಂದ್ರಕಾಂತ ಜಮಾದರ, ಭೀಮರಾವ್ ಗುತ್ತಿ, ಸಂದೀಪ ಉದಗಿರೆ, ಬಸವರಾಜ ವಡ್ಠೆ , ಪ್ರಕಾಶ ರಾಠೋಡ, ಶ್ರೀನಿವಾಸ ಸೋನಿ, ಲೋಕೇಶ ಕನಶಟ್ಟಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.