ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ಬೀಜ ವಿತರಣೆ ಆರೋಪ: ಗದ್ದಲ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
Last Updated 20 ಜೂನ್ 2019, 14:03 IST
ಅಕ್ಷರ ಗಾತ್ರ

ಬೀದರ್‌: ಸೋಯಾಬೀನ್ ಮತ್ತು ತೊಗರಿ ಬೀಜಕ್ಕೆ ಜಿಲ್ಲೆಯಲ್ಲಿ ಅಧಿಕ ಬೇಡಿಕೆ ಇದೆ. ಕೃಷಿ ಇಲಾಖೆ ಅಧಿಕಾರಿಗಳು ಎಕರೆಗೆ ನಾಲ್ಕು ಪಾಕೇಟ್‌ ಬದಲು ಎರಡು ಪಾಕೇಟ್ ಬೀಜಗಳನ್ನು ಮಾತ್ರ ವಿತರಿಸುತ್ತಿದ್ದಾರೆ. ಮೊದಲೇ ಬರದಿಂದ ತತ್ತರಿಸಿರುವ ರೈತರು ಅಗತ್ಯವಿರುವಷ್ಟು ಬೀಜ ದೊರೆಯದೆ ಪರದಾಡುತ್ತಿದ್ದಾರೆ.

ಕೃಷಿ ಅಧಿಕಾರಿಗಳೇ ಜಿಲ್ಲೆಯಲ್ಲಿ ಬೀಜದ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದರಿಂದ ಗುರುವಾರ ಇಲ್ಲಿಯ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗದ್ದಲ ಉಂಟಾಯಿತು.
ಗೀತಾ ಚಿದ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೀಜ ವಿತರಣೆಯ ಬಗೆಗೆ ಪ್ರಸ್ತಾಪಿಸಿ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ತಡವಾಗಿರುವ ಕಾರಣ ರೈತರು ಸೋಯಾ ಬಿತ್ತನೆಗೆ ಮುಂದಾಗಿದ್ದಾರೆ. ಅಧಿಕಾರಿಗಳು ಪ್ರತಿ ಎಕರೆಗೆ ಎರಡೇ ಪಾಕೇಟ್‌ ಬೀಜ ವಿತರಿಸುತ್ತಿದ್ದಾರೆ. ಅದಕ್ಕೂ ನಾಲ್ಕೈದು ದಾಖಲೆಗಳನ್ನು ಕೇಳುತ್ತಿದ್ದಾರೆ. ರೈತರು ದಾಖಲೆಗಳನ್ನು ಸಹ ಪಡೆಯಲು ಅಲೆದಾಡಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಯಾ ಬಿತ್ತನೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಆಗಲಿದೆ. ರಾಜೇಶ್ವರದಲ್ಲಿ ಬೀಜ ಇಲ್ಲ. ರೈತರಿಗೆ ಬೀಜವನ್ನು ಅಸಮರ್ಪಕವಾಗಿ ವಿತರಿಸಲಾಗುತ್ತಿದೆ. ಬರೀ ಎರಡೇ ಪಾಕೇಟ್ ನೀಡುತ್ತಿದ್ದಾರೆ ಎಂದು ಕೆಲ ಸದಸ್ಯರು ಸಭೆಯ ಗಮನ ಸೆಳೆದರು.

‘ಹವಾಮಾನ ತಜ್ಞರ ಪ್ರಕಾರ ಜೂನ್‌ 21 ರಂದು ಜಿಲ್ಲೆಗೆ ಮುಂಗಾರು ಪ್ರವೇಶ ಮಾಡುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿದಿಲ್ಲ. ಅಷ್ಟೇ ಅಲ್ಲ ಮುಂಗಾರು 20 ದಿನ ತಡವಾಗಿದೆ. ಇನ್ನೂ ಬಿತ್ತನೆ ಆರಂಭವಾಗಿಲ್ಲ. ರೈತರು ಅನಿವಾರ್ಯವಾಗಿ ಸೋಯಾ ಬೆಳೆಸಲು ಮುಂದಾಗಿದ್ದಾರೆ. ಹೀಗಾಗಿ ಪ್ರಸಕ್ತ ವರ್ಷ ಸೋಯಾ 1.74 ಲಕ್ಷ ಹೆಕ್ಟೇರ್‌ ಪ್ರದೇಶ ವರೆಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಮಾಹಿತಿ ನೀಡಿದರು.

‘ಈಗಾಗಲೇ 35,000 ಕ್ವಿಂಟಲ್ ಸೋಯಾ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ 73 ಬೀಜ ವಿತರಣೆಯ ಕೇಂದ್ರಗಳಿವೆ. ಸೋಯಾ ಹಾಗೂ ತೊಗರಿ ಬೀಜ ಹೆಚ್ಚಿನ ಪ್ರಮಾಣದಲ್ಲಿ ಬೇಕು. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಮತ್ತೆ ಹೆಚ್ಚುವರಿ ಸೋಯಾ ಅಗತ್ಯವಿದ್ದರೂ ತರಿಸಿಕೊಳ್ಳಲಾಗುವುದು’ ಎಂದು ಹೇಳಿದರು.

ಈಗ ಮಳೆ ಇಲ್ಲ ನಿಜ. ಆದರೆ ಮಳೆಯಾದ ತಕ್ಷಣ ರೈತರು ಬೀಜಕ್ಕಾಗಿ ದುಂಬಾಲು ಬೀಳುತ್ತಾರೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ
ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಬೀಜ ದಾಸ್ತಾನು ಮಾಡಿಕೊಳ್ಳಬೇಕು ಎಂದು ಸದಸ್ಯರು ಅಧಿಕಾರಿಗಳಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ ತೊಗರಿ ಬಿತ್ತನೆ ಕೂಡ ಕಡಿಮೆ ಆಗಿದೆ. ತೊಗರಿ ಬೀಜ ಕೂಡ ಸಿಗುತ್ತಿಲ್ಲ. ಅಧಿಕಾರಿಗಳು ಹೇಳುವುದೇ ಬೇರೆ, ವಾಸ್ತವ ಸ್ತಿತಿಯೇ ಬೇರೆ ಇದೆ. ರಾಜ್ಯದಲ್ಲಿ ಬೀದರ್ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಸೋಯಾ ಬೆಳೆಯಲಾಗುತ್ತಿದೆ. ರೈತರು ಪರದಾಡುವ ಮೊದಲು ಸೋಯಾ ಬೀಜ ವಿತರಣೆ ಮಾಡಬೇಕು’ ಎಂದು ಭಾರತಬಾಯಿ ಶೇರಿಕಾರ ಹಾಗೂ ಪ್ರಕಾಶ ಪಾಟೀಲ ಒತ್ತಾಯಿಸಿದರು.

‘ಬಿತ್ತನೆ ಬೀಜ ಸಿಕ್ಕಿಲ್ಲ ಎಂದು ರೈತರು ದೂರುವಂತಾಗಬಾರದು. ರೈತರಿಗೆ ಸಮರ್ಪಕವಾಗಿ ಬೀಜ ವಿತರಿಸಲು ಕ್ರಮಕೈಗೊಳ್ಳಬೇಕು’ ಎಂದು ಅಧ್ಯಕ್ಷೆ ಗೀತಾ ಚಿದ್ರಿ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ರೈತರ ಬೇಡಿಕೆಯ ಅನುಸಾರ ಬೀಜ ಪೂರೈಕೆಗೆ ಆದ್ಯತೆ ಕೊಡಿ. ರೈತ ಸಂಪರ್ಕ ಕೇಂದ್ರದಲ್ಲಿ ಪಹಣಿ, ಜಾತಿ, ಆಧಾರ್ ಕಾರ್ಡ್‌ದಂತಹ ಒಂದೆರಡು ದಾಖಲೆಗಳನ್ನು ಮಾತ್ರ ನೋಡಿ. ಇನ್ನುಳಿದ ದಾಖಲೆಗಳಿಗಾಗಿ ರೈತರಿಗೆ ಸತಾಯಿಸಬೇಡಿ’ ಎಂದು ಉಪಾಧ್ಯಕ್ಷ ಲಕ್ಷ್ಮಣ ಬುಳ್ಳಾ ಹೇಳಿದರು.

‘ಬೀದರ್ ಜಿಲ್ಲೆಗೆ 60 ಸಾವಿರ ಕ್ವಿಂಟಲ್ ಸೋಯಾ ಬೀಜದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಅವರು ನಡೆಸಿದ ಸಭೆಯಲ್ಲಿ ತಿಳಿಸಲಾಗಿದೆ’ ಎಂದು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

‘ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಜಂಟಿ ನಿರ್ದೇಶಕರ ನಿಯಂತ್ರಣದಲ್ಲಿ ಇಲ್ಲ. ಕೆಲ ಅಧಿಕಾರಿಗಳು ಬಹಳ ವರ್ಷಗಳಿಂದ ಒಂದೇ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಹೀಗಾಗಿ ವ್ಯವಸ್ಥೆ ಹದಗೆಟ್ಟಿದೆ’ ಎಂದು ಸದಸ್ಯ ಫಿರೋಜ್‌ಖಾನ್‌ ಗಂಭೀರ ಆರೋಪ ಮಾಡಿದರು.

ಘೋಟಾಳಾ ಗ್ರಾಮವು ಬಸವಕಲ್ಯಾಣ ತಾಲ್ಲೂಕು ಕೇಂದ್ರದಿಂದ 40 ಕಿ.ಮೀ ಅಂತರದಲ್ಲಿದೆ. ಹೀಗಾಗಿ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಗುಂಡೂ ರೆಡ್ಡಿ, ಬಾಬುರಾವ್‌ ಮಲ್ಕಾಪುರೆ, ಶಕುಂತಲಾ ಬೆಲ್ದಾಳೆ, ಅನಿಲ ಗುಂಡಪ್ಪ ಹಾಗೂ ಆಮ್ರಪಾಲಿ ಅವರು ಸಮರ್ಪಕ ಬೀಜ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು, ಹೆಚ್ಚುವರಿ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.


ಬೀದರ್‌: ಕೃಷಿ ಹೊಂಡ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಉಪ ಸಮಿತಿ ರಚಿಸಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಗೊತ್ತುವಳಿ ಸ್ವೀಕರಿಸಿತು.

‘ಜಿಲ್ಲೆಯಲ್ಲಿ 700 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಕೃಷಿ ಅಧಿಕಾರಿಗಳು ಕೃಷಿ ಹೊಂಡ ನಿರ್ಮಾಣದ ನೆಪದಲ್ಲಿ ಲಕ್ಷಾಂತರ ರೂಪಾಯಿ ಎತ್ತಿದ್ದಾರೆ. ನೀರೇ ಇಲ್ಲದಿದ್ದಾಗ ನಾಲ್ಕು ಮೀಟರ್‌ ಹೊಂಡದಲ್ಲಿ ನೀರು ನಿಲ್ಲಲು ಸಾಧ್ಯವೆ? ಇದಕ್ಕೆಲ್ಲ ಜಂಟಿ ನಿರ್ದೇಶಕರೇ ಕಾರಣ. ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಲೋಪ ಕಂಡು ಬಂದರೆ ಕೆಲಸದಿಂದ ವಜಾಗೊಳಿಸಲು ಶಿಫಾರಸು ಮಾಡಬೇಕು’ ಎಂದು ಸದಸ್ಯ ಫಿರೋಜ್‌ ಖಾನ್‌ ಒತ್ತಾಯಿಸಿದರು.

ಫಿರೋಜ್‌ ಖಾನ್‌ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಂಟಿ ನಿರ್ದೇಶಕ ವಿದ್ಯಾನಂದ, ‘ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಿದರೂ ಅದಕ್ಕೆ ನನ್ನ ಸ್ವಾಗತ ಇದೆ. ಅನಗತ್ಯವಾಗಿ ನನ್ನ ವಿರುದ್ಧ ಆರೋಪ ಮಾಡುವುದು ಸರಿಯಲ್ಲ’ ಎಂದು ಹೇಳಿದರು. ಆಗ ಮಾತು ಬದಲಿಸಿದ ಫಿರೋಜ್‌ ಖಾನ್‌, ‘ನಾನು ವೈಯಕ್ತಿಕವಾಗಿ ಯಾರನ್ನೂ ಗುರಿ ಮಾಡುತ್ತಿಲ್ಲ. ಕೃಷಿ ಇಲಾಖೆಯಲ್ಲಿನ ಅವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದ್ದೇನೆ’ ಎಂದು ಸಮಜಾಯಿಸಿ ನೀಡಿದರು.

ಕೃಷಿ ಅಧಿಕಾರಿಗಳ ಮೇಲೆ ಆರೋಪಗಳು ಕೇಳಿ ಬರುತ್ತಿರುವ ಕಾರಣ ನಿಯೋಜನೆ ಮೇಲೆ ಬೇರೆ ತಾಲ್ಲೂಕುಗಳಿಗೆ ಕಳಿಸಲು ಹಾಗೂ ನಾಲ್ಕು ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿರುವ ಕೃಷಿ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲು ಕ್ರಮಕೈಗೊಳ್ಳಬೇಕು ಎನ್ನುವ ಗೊತ್ತುವಳಿಯನ್ನು ಸ್ವೀಕರಿಸಲಾಯಿತು.

ಬೆಳೆ ವಿಮೆ ಹಣ ಬಂದಿಲ್ಲ
ಬೀದರ್‌: ‘ಬೀದರ್ ಜಿಲ್ಲೆಯ 1.81 ಲಕ್ಷ ರೈತರು ₹ 9 ಕೋಟಿ ಬೆಳೆ ವಿಮೆ ಪಾವತಿಸಿದ್ದಾರೆ. ವರ್ಷ ಕಳೆದರೂ ರೈತರಿಗೆ ಬೆಳೆ ವಿಮೆ ಪರಿಹಾರ ಬಂದಿಲ್ಲ. ಯಾವ ಅಧಿಕಾರದ ಮೇಲೆ ಜಿಲ್ಲೆಯಲ್ಲಿ ಸಾಮಾನ್ಯ ಬರ ಇದೆ ಎನ್ನುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಪ್ರಕಾಶ ಪಾಟೀಲ ಪ್ರಶ್ನಿಸಿದರು.

‘ಬೆಳೆ ವಿಮೆ ಪರಿಹಾರ ಹಾಗೂ ಬರ ಘೋಷಣೆಗೆ ಅನುಸರಿಸಿರುವ ವಿಧಾನಗಳೇ ಸರಿ ಇಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.

‘ಕೆಎಸ್‌ಎನ್‌ಡಿಎಂಸಿ ನಿಯಮಾವಳಿ ಪ್ರಕಾರ ವಾತಾವರಣದಲ್ಲಿ ಶೇಕಡ 30 ರಷ್ಟು ತೇವಾಂಶ ಕಡಿಮೆಯಾಗಿರಬೇಕು. ಮಣ್ಣಿನಲ್ಲೂ ತೇವಾಂಶ ಇಳಿದಿರಬೇಕು. ಅಂತರ್ಜಲಮಟ್ಟ ಕುಸಿದಿರಬೇಕು. ಅಂದಾಗ ಮಾತ್ರ ಬರ ಗಂಭೀರವಾಗಿದೆ ಎಂದು ಪರಿಗಣಿಸಲಾಗುತ್ತದೆ. ಬರ ಘೋಷಣೆಯಲ್ಲಿ ಕೃಷಿ ಇಲಾಖೆಯ ಪಾತ್ರ ಇಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಸ್ಪಷ್ಟಪಡಿಸಿದರು.

‘ಕಳೆದ ವರ್ಷದ ಮುಂಗಾರಿನ ₹ 95 ಕೋಟಿ ಹಾಗೂ ಹಿಂಗಾರಿನ ₹ 55 ಕೋಟಿ ಬೆಳೆ ಪರಿಹಾರ ಹಣ ಬರಬೇಕಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT