ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗಳಿಂದ ₹2.58 ಕೋಟಿ ಪರಿಹಾರ

ಸೋಯಾ ಅವರೆ ಬೀಜ ಮೊಳಕೆಯೊಡೆಯದೆ ರೈತರಿಗೆ ನಷ್ಟ
Last Updated 9 ಜನವರಿ 2021, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ 8,600 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಸೋಯಾ ಅವರೆ ಬೀಜ ಸರಿಯಾಗಿ ಮೊಳಕೆಯೊಡೆಯದೆ ನಷ್ಟ ಅನುಭವಿಸಿದ 3,216 ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು 21 ಬೀಜ ಕಂಪನಿಗಳಿಂದ ₹2.58 ಕೋಟಿ ನಷ್ಟ ಪರಿಹಾರ ಕೊಡಿಸಲು ಮುಂದಾಗಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಬೀಜ ಕಂಪನಿಗಳ ಮೇಲೆ ಒತ್ತಡ ಹಾಕಿದ ಪರಿಣಾಮ ಕಂಪನಿಗಳು ಮೊದಲ ಹಂತದಲ್ಲಿ ಸುಮಾರು ಎರಡು ಸಾವಿರ ರೈತರ ಬ್ಯಾಂಕ್‌ ಖಾತೆಗಳಿಗೆ ₹1.5 ಕೋಟಿ ಪರಿಹಾರ ಜಮಾ ಮಾಡಿವೆ. ಇನ್ನುಳಿದ ರೈತರ ಖಾತೆಗೂ ಒಂದು ವಾರದಲ್ಲಿ ಆರ್‌ಟಿಜಿಎಸ್‌ ಮೂಲಕ ನಷ್ಟ ಪರಿಹಾರ ಜಮಾ ಆಗಲಿದೆ.

ಮಧ್ಯಪ್ರದೇಶದ ಅಮಿತ್‌ ಸೀಡ್ಸ್‌, ಅರುಣೋದಯ ಅಗ್ರೋ ಸೀಡ್ಸ್, ಬನ್ಸಲ್‌ ಸೀಡ್ಸ್, ದಾದಾಜಿ ಸೀಡ್ಸ್, ಎವೆರೆಸ್ಟ್ ಕ್ರಾಸ್‌ ಸೈನ್ಸ್, ಗೌರಿಶಂಕರ ಅಗ್ರೋ ಇನ್‌ಪುಟ್ಸ್‌, ಜೆ.ಎಸ್. ಸೀಡ್ಸ್‌ ಆ್ಯಂಡ್ ಆಗ್ರಿಟೆಕ್, ರಾಜ್ಯ ಬೀಜ ನಿಗಮ, ಲಕ್ಷ್ಮಿ ಅಗ್ರೋ ಸೀಡ್ಸ್, ಎನ್‌.ಎಸ್‌.ಸಿ, ಪರಮ ಅಗ್ರೋ ಸೀಡ್ಸ್, ಪಾರ್ಶ್ವ ಜನೆಟಿಕ್ಸ್, ಸಿದ್ಧಾರ್ಥ ಸೀಡ್ಸ್, ಶ್ರೀಕೃಷ್ಣ ಅಗ್ರಿಟೆಕ್, ವಿ.ಕೇರ್ ಸೀಡ್ಸ್, ವರದಾ ಸೀಡ್ಸ್‌ ಫಾರ್ಮ್, ವರುಣ ಹೈಬ್ರಿಡ್ ಸೀಡ್ಸ್, ಕರ್ನಾಟಕ ಹೈಟೆಕ್ ಕಂಪನಿಗಳು ಜಿಲ್ಲೆಯ ರೈತರಿಗೆ 48,436.34 ಕ್ವಿಂಟಲ್ ಸೋಯಾ ಅವರೆ ಬೀಜ ಮಾರಾಟ ಮಾಡಿದ್ದವು.

3,216 ರೈತರು 1,60,869 ಎಕರೆ ಪ್ರದೇಶದಲ್ಲಿ ಸೋಯಾ ಬಿತ್ತನೆ ಮಾಡಿದ್ದರು. ಇದರಲ್ಲಿ 8,608 ಎಕರೆ ಪ್ರದೇಶ ದಲ್ಲಿ ಬಿತ್ತನೆ ಮಾಡಿದ್ದ ಸೋಯಾ ಬೀಜ ಸರಿಯಾಗಿ ಮೊಳಕೆಯೇ ಒಡೆದಿರಲಿಲ್ಲ. ಹೀಗಾಗಿ ರೈತರು ನಷ್ಟ ಅನುಭವಿಸಿದ್ದರು. ಕೃಷಿ ಇಲಾಖೆ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ದಾಖಲೆಗಳೊಂದಿಗೆ ಬೀಜ ಕಂಪನಿಗಳಿಗೆ ಪರಿಹಾರ ಕೊಡುವಂತೆ ಪತ್ರ ಬರೆದಿದ್ದರು.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಅತಿಹೆಚ್ಚು 762 ರೈತರು ಎವೆರೆಸ್ಟ್‌ ಕ್ರಾಪ್‌ ಸೈನ್ಸ್‌ ಕಂಪನಿಯ 3,334.45 ಕ್ವಿಂಟಲ್‌ ಬೀಜ ಖರೀದಿಸಿ 11,114 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರೆ, 485 ರೈತರು ಬೀದರ್‌ನ ಕರ್ನಾಟಕ ಬೀಜ ನಿಗಮದಿಂದ 3,991.19 ಕ್ವಿಂಟಲ್‌ ಬೀಜ ಖರೀದಿಸಿ 13,305 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ರೈತರು ಒಟ್ಟು 8,608 ಬ್ಯಾಗ್‌ (ತಲಾ 30ಕೆ.ಜಿ. ಒಂದು ಬ್ಯಾಗ್) ಖರೀದಿಸಿದ್ದರು. ಒಂದು ಎಕರೆಗೆ ಒಂದು ಬ್ಯಾಗ್‌ ಬೀಜ ಬಿತ್ತನೆಗೆ ಬಳಸಲಾಗಿತ್ತು.

‘ಬೀಜ ಮೊಳಕೆಯೊಡೆಯದೆ ನಷ್ಟ ಅನುಭವಿಸಿದ ಸುಮಾರು ಎರಡು ಸಾವಿರ ರೈತರ ಬ್ಯಾಂಕ್‌ ಖಾತೆಗೆ ಪರಿಹಾರ ಜಮಾ ಮಾಡಿಸಲಾಗಿದೆ. 21 ಕಂಪನಿಗಳು ಬೀಜ ಸರಬರಾಜು ಮಾಡಿವೆ. ಇನ್ನು ಮೂರು ಕಂಪನಿಗಳು ಪರಿಹಾರ ಕೊಡಬೇಕಿದೆ. ಒಂದು ವಾರದಲ್ಲಿ ಅವು ಸಹ ರೈತರಿಗೆ ನಷ್ಟ ಪರಿಹಾರ ಕೊಡಲಿವೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೀಜ ಮೊಳಕೆಯೊಡೆಯದ ಕಾರಣ ರಾಜ್ಯದಲ್ಲಿ ಬೀದರ್‌ ಜಿಲ್ಲೆಯ ರೈತರು ಅತಿ ಹೆಚ್ಚು ನಷ್ಟ ಅನುಭವಿಸಿದ್ದಾರೆ. ನಂತರದ ಸ್ಥಾನದಲ್ಲಿ ಬೆಳಗಾವಿ ಜಿಲ್ಲೆಯ ರೈತರು ಇದ್ದಾರೆ. ಅಲ್ಲಿನ ರೈತರು ಸಹ ದೂರು ನೀಡಿದ್ದಾರೆ. ಬೀದರ್ ಜಿಲ್ಲೆಯ ರೈತರಿಗೆ ಉಳುಮೆಗೆ ಖರ್ಚಾದ ಹಾಗೂ ಬೀಜ ಖರೀದಿಗೆ ಖರ್ಚಾದ ಹಣ ವಾಪಸ್‌ ಕೊಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT