ಸಿಂದಗಿ: ಬಿಜೆಪಿ ಆತ್ಮಾವಲೋಕನ ಸಭೆ

7
ರಮೇಶ ಭೂಸನೂರ ಸೋಲಿನ ಚರ್ಚೆ; ಮುಂದಿನ ಚುನಾವಣೆಗೆ ಸಜ್ಜಾಗಲು ಮನವಿ

ಸಿಂದಗಿ: ಬಿಜೆಪಿ ಆತ್ಮಾವಲೋಕನ ಸಭೆ

Published:
Updated:

ಸಿಂದಗಿ: ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಸೋಲಿಗೆ ಕಾರಣ ಚರ್ಚಿಸಲು ಬಿಜೆಪಿ ಮಂಡಲ ನಗರದ ಜ್ಯೋತಿ ಕಲ್ಯಾಣಮಂಟಪದಲ್ಲಿ ಮಂಗಳವಾರ ಸಮಾಲೋಚನೆ ಸಭೆ ನಡೆಸಿತು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿಂದಗಿ ಮತಕ್ಷೇತ್ರದ ಉಸ್ತುವಾರಿ ವಿವೇಕ ಡಬ್ಬಿ ಮಾತನಾಡಿ, ‘ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಒಳ ಒಪ್ಪಂದ ರಾಜಕಾರಣ ಮಾಡಿದ್ದರಿಂದ ಬಿಜೆಪಿಯ ಭೂಸನೂರ ಸೋತರು. ಇನ್ನೇನು ವರ್ಷದಲ್ಲೇ ವಿಧಾನಸಭೆಗೆ ಚುನಾವಣೆ ಬರುತ್ತದೆ. ಲೋಕಸಭೆ ಚುನಾವಣೆ ಜೊತೆ ವಿಧಾನಸಭೆಗೂ ಚುನಾವಣೆ ಬಂದೇ ಬರುತ್ತೆ. ಹೀಗಾಗಿ ಕಾರ್ಯಕರ್ತರು ಹಿಂದಿನ ಚುನಾವಣೆಗಿಂತ ಹತ್ತು ಪಟ್ಟು ಶ್ರಮ ಪಡಬೇಕು’ ಎಂದು ಮನವಿ ಮಾಡಿಕೊಂಡರು.

ರಮೇಶ ಭೂಸನೂರ ಆತ್ಮಾವಲೋಕನ ಮಾತುಗಳನ್ನಾಡಿ ‘ಹಿಂದಿನ ಕಹಿ ನೆನಪು ಮರೆತು ಮತ್ತೆ ಹೋರಾಟಕ್ಕೆ ಸನ್ನದ್ಧರಾಗೋಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 38 ಸಾವಿರ ಮತಗಳನ್ನು ಪಡೆದು ಗೆದ್ದೆ. ಈ ಸಲ 61 ಸಾವಿರ ಮತಗಳನ್ನು ಪಡೆದು ಪರಾಭವಗೊಂಡೆ. ಸಿಂದಗಿ–ಆಲಮೇಲ ಎರಡೂ ಪಟ್ಟಣಗಳಿಂದ ನನ್ನ ಸೋಲಾಯಿತು. ಆದರೂ ಸಿಂದಗಿ ನಗರದಲ್ಲಿ ಈ ಸಲ ಐದು ಸಾವಿರ ಮತಗಳು ನನಗೆ ಬಂದಿವೆ. ಹೀಗಾಗಿ ಮುಂಬರುವ ಸಿಂದಗಿ ಪುರಸಭೆ ಚುನಾವಣೆಯಲ್ಲಿ ಹಕ್ಕು ಸ್ಥಾಪಿಸಲಾಗುವುದು. ನಿಷ್ಠಾವಂತ ಕಾರ್ಯಕರ್ತರ ಪಡೆಯೊಂದು ರಚನೆ ಮಾಡಿ ಅವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸುವ ಮೂಲಕ ಗೆಲುವು ಸಾಧಿಸಲಾಗುತ್ತದೆ’ ಎಂದು ಆಶಯ ವ್ಯಕ್ತಪಡಿಸಿದರು.

‘ಸಿಂದಗಿ ನಗರಕ್ಕೆ ಮುಂಬರುವ 50 ವರ್ಷಗಳ ಗುರಿಯನ್ನಿಟ್ಟುಕೊಂಡು 24x7 ಕುಡಿಯುವ ನೀರು ಪೂರೈಸುವ ಯೋಜನೆ ಬಬಲೇಶ್ವರ ಕೆರೆ ಯೋಜನೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿ ಕೆರೆಯನ್ನು ಪುರಸಭೆಗೆ ಹಸ್ತಾಂತರಿಸಲಾಗಿದೆ. ಈ ಯೋಜನೆ ಕೈ ಬಿಟ್ಟು ಬಳಗಾನೂರ ಕೆರೆ ಯೋಜನೆಗೆ ಸಚಿವರಾದ ಎಂ.ಸಿ.ಮನಗೂಳಿ ಮುಂದಾಗಿರುವುದು ಸರಿಯಲ್ಲ. ಬಬಲೇಶ್ವರ ಕೆರೆ ಯೋಜನೆ ಅನುಷ್ಠಾನಕ್ಕೆ ಬಂದರೆ ಅದರ ಶ್ರೇಯಸ್ಸು ಭೂಸನೂರ ಗೆ ಹೋಗುತ್ತೆ ಎಂಬ ಕೆಟ್ಟ ವಿಚಾರದಿಂದಾಗಿ ಅಭಿವೃದ್ಧಿಯಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ’ ಎಂದು ಮನಗೂಳಿ ವಿರುದ್ಧ ಹರಿಹಾಯ್ದರು.

‘ಮರುಳು ಸಾಗಾಣಿಕೆ ಭೂಸನೂರ ಬಂದ್ ಮಾಡಿಸಿದ್ದಾನೆ ಎಂದು ಮನಗೂಳಿ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು. ಈ ಮೂಲಕ ಜನರಿಗೆ ತಪ್ಪು ಸಂದೇಶ ರವಾನೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮನಗೂಳಿ ಸಚಿವರಾಗಿದ್ದಾರೆ. ಬೇಕಿದ್ದರೆ ಆಲಮೇಲ ಪಟ್ಟಣವನ್ನು ತಾಲ್ಲೂಕು ರಚನೆ ಮಾಡಿ ಹಾಗೇ ತಮ್ಮ ಅಧಿಕಾರ ಅವಧಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿದ ಸಿಂದಗಿ ನಗರ ಸಮಗ್ರ ಒಳಚರಂಡಿ ಯೋಜನೆ, ಆಹೇರಿ 220 ಕೆ.ವಿ ವಿದ್ಯುತ್ ಸ್ಟೇಷನ್ ಸ್ಥಾಪನೆ ಮುಂದುವರಿಸಿಕೊಂಡು ಹೋಗಬೇಕು’ ಎಂದು ಭೂಸನೂರ ಕೇಳಿಕೊಂಡರು.

‘ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಚಟ್ಟರಕಿ ಗ್ರಾಮದಲ್ಲಿ ಬಿಜೆಪಿಯ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ನ ಮೇಲೆ ಜೆಡಿಎಸ್ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ. ಇಂಥ ದ್ವೇಷ ರಾಜಕೀಯ ಮಾಡಬಾರದು. ಮುಂಬರುವ ದಿನಗಳಲ್ಲಿ ಇದು ಮುಂದುವರಿದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಮಾವೇಶಗೊಂಡಿದ್ದರು. ಆದರೆ ಕಾರ್ಯಕರ್ತರಿಂದ ಸೋಲಿಗೆ ನಿಜ ಕಾರಣ ಹೊರ ಬರಲಿಲ್ಲ. ಬದಲಿಗೆ ಭೂಸನೂರ ಮುಖಸ್ತುತಿಯೇ ಕೇಳಿ ಬಂದಿತು. ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು.

ಮನಗೂಳಿ ಅವರಿಗೆ ವಯಸ್ಸಾಗಿದೆ ಎಂಬ ಅನುಕಂಪ. ಜೊತೆಗೆ ಪ್ರಬಲ ಸಮುದಾಯ ಜೆಡಿಎಸ್ ಪರ ನಿಂತುಕೊಂಡಿದ್ದು ನನ್ನ ಸೋಲಿಗೆ ಪ್ರಮುಖ ಕಾರಣ
– ರಮೇಶ ಭೂಸನೂರ, ಮಾಜಿ ಶಾಸಕ 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !