ಬಂದ್‌ ಕಾಂಗ್ರೆಸ್‌ನ ರಾಜಕೀಯ ನಾಟಕ: ಬಿಜೆಪಿ ಟೀಕೆ

7

ಬಂದ್‌ ಕಾಂಗ್ರೆಸ್‌ನ ರಾಜಕೀಯ ನಾಟಕ: ಬಿಜೆಪಿ ಟೀಕೆ

Published:
Updated:
Deccan Herald

ಶಿವಮೊಗ್ಗ: ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಬಂದ್‌ಗೆ ಕರೆಕೊಟ್ಟಿದೆ. ಮುಳುಗುತ್ತಿರುವ ಆ ಪಕ್ಷ ಮೇಲೆತ್ತಲು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ರುದ್ರೇಗೌಡ ದೂರಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಇಂತಹ ನಾಟಕವಾಡುತ್ತಿದೆ. ಇಂಧನ ಬೆಲೆ ಏರಿಕೆಯನ್ನೇ ನೆಪವಾಗಿಟ್ಟುಕೊಂಡು ಜನರಿಗೆ ಅರ್ಧ ಸತ್ಯ ಹೇಳುತ್ತಿದೆ. ಪೆಟ್ರೋಲ್, ಡೀಸೆಲ್‌ ಬೆಲೆಗಳ ಇಂದಿನ ಸ್ಥಿತಿಗೆ ಹಿಂದೆ ಆಡಳಿತ ನಡೆಸಿದ್ದ ಯುಪಿಎ ಸರ್ಕಾರವೇ ಕಾರಣ. ಪ್ರಧಾನಿ ಮನಮೋಹನ್‌ ಸಿಂಗ್ ನಿರ್ಗಮಿಸುವ ಮೊದಲು ₨ 2 ಲಕ್ಷ ಕೋಟಿ ತೈಲಕ್ಕಾಗಿ ಸಾಲ ಮಾಡಿದ್ದರು ಎಂದು ಸೋಮವಾರ ಪತ್ರಿಕಾಗೊಷ್ಠಿಯಲ್ಲಿ ಆರೋಪಿಸಿದರು.

ಜಾಗತಿಕ ಮಟ್ಟದಲ್ಲಿ 14 ತಿಂಗಳಿಂದ ತೈಲಬೆಲೆ ಶೇ 74ರಷ್ಟು ಏರಿಕೆ ಕಂಡರೂ ಭಾರತದಲ್ಲಿ ತೈಲದ ಬೆಲೆ ಕೇವಲ ₨ 29.58ರಷ್ಟು ಏರಿಕೆಯಾಗಿದೆ. ಇದಕ್ಕೆ ರಾಜ್ಯ ಸರ್ಕಾರಗಳೂ ಹೊಣೆ ಹೊರಬೇಕು. ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮೊತ್ತ ಭರಿಸಲು ಪೆಟ್ರೋಲ್, ಡೀಸೆಲ್‌ ಬೆಲೆ ಹೆಚ್ಚಳ ಮಾಡಿರುವುದನ್ನು ಮರೆತಿದೆಯೇ ಎಂದು ಪ್ರಶ್ನಿಸಿದರು.

ಬೆಲೆ ಏರಿಕೆ ಜನರಿಗೆ ಸಂಕಷ್ಟ ತಂದಿರುವುದು ನಿಜ. ವ್ಯವಸ್ಥೆಯ ಪರ್ಯಾಯ ಕುರಿತು ಯೋಚಿಸಬೇಕಿದೆ. ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಕ್ಷೇತ್ರ ಒಳಪಡಿಸಲು ಬಿಜೆಪಿ ಆಲೋಚಿಸುತ್ತಿದೆ. ವಿರೋಧ ಪಕ್ಷಗಳು ಇದಕ್ಕೆ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಭಾರತ್ ಬಂದ್ ಕಾಂಗ್ರೆಸ್‌ ರಾಜಕಾರಣ ಕುತಂತ್ರ. ರಾಜ್ಯದಲ್ಲಿ ಸರ್ಕಾರಿ ಕೃಪಾಪೋಷಿತ ಬಂದ್ ಮಾಡಲಾಗಿದೆ. ಸರ್ಕಾರವೇ ಬಂದ್ ಆಚರಿಸಲು ಹೊರಟಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್. ಅರುಣ್, ಮಧುಸೂದನ್, ಬಿಳಕಿ ಕೃಷ್ಣಮೂರ್ತಿ, ಹಿರಣ್ಣಯ್ಯ, ಕೆ.ವಿ. ಅಣ್ಣಪ್ಪ, ರತ್ನಾಕರ ಶೆಣೈ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !