ಶುಕ್ರವಾರ, ಫೆಬ್ರವರಿ 26, 2021
20 °C
ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯ

ದೂರವಾಣಿ ಕದ್ದಾಲಿಕೆ: ಬಿಜೆಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಫೋನ್‌ ಕದ್ದಾಲಿಸುತ್ತಿದ್ದು, ಅವರಿಗೆ ಸ್ವಾಭಿಮಾನವಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಆಗ್ರಹಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಮಕೃಷ್ಣ ಹೆಗಡೆ ಅವರು ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಾಗ ರಾಜೀನಾಮೆ ನೀಡಿ, ತಮ್ಮ ಸ್ವಾಭಿಮಾನವನ್ನು ಪ್ರದರ್ಶಿಸಿದ್ದರು. ಆದರೆ ಕುಮಾರಸ್ವಾಮಿ ಹಲವು ರಾಜಕಾರಣಿಗಳ ಫೋನ್‌ಗಳನ್ನು ಕದ್ದಾಲಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಮಾತಾನಾಡಿದ್ದಾರೆ ಎಂಬ ನಕಲಿ ರೆಕಾರ್ಡ್‌ ಅನ್ನು ಬಿಡುಗಡೆ ಮಾಡಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆರ್. ಅಶೋಕ್ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳು ನಮ್ಮ ಪೋನ್‌ ಕದ್ದಾಲಿಕೆಯಾಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ’ ಎಂದು ದೂರಿದರು.

‘ಸಿದ್ದರಾಮಯ್ಯ ಅವರನ್ನು ನಂಬಿಕೊಂಡು ಚಲುವರಾಯಸ್ವಾಮಿ, ಬಾಲಕೃಷ್ಣ, ರಮೇಶ್‌ ಕಾಂಗ್ರೆಸ್ ಸೇರಿದರು. ಈಗ ಅವರನ್ನು ಮೂಲೆಗುಂಪು ಮಾಡಿದ್ದೀರಿ. ಕುಮಾರಸ್ವಾಮಿ ನಾನು ವಿಷಕಂಠ, ನನಗೆ ನಿದ್ದೆ ಮಾಡಲು ಬಿಡುತ್ತಿಲ್ಲ ಎಂದು ಎಲ್ಲಾ ಸಭೆಗಳಲ್ಲೂ ನಿಮ್ಮ ವಿರುದ್ಧ ಪರೋಕ್ಷವಾಗಿ ದೂರುತ್ತಿದ್ದಾರೆ. ನಿಮಗೆ ಸ್ವಾಭಿಮಾನವಿದ್ದರೆ ಮೈತ್ರಿ ಸರ್ಕಾರದಿಂದ ಹೊರಗೆ ಬನ್ನಿ’ ಎಂದು ಸವಾಲು ಹಾಕಿದರು.

‘ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳ ಹಿಂದೆ 7 ಮಂದಿ ಬಿಜೆಪಿ ಸದಸ್ಯರು ಗೆದ್ದಿದ್ದರು. ಅವರಿಗೆ ಆಮಿಷ ಒಡ್ಡಿ ಜೆಡಿಎಸ್‌ನವರು ಸೆಳೆದುಕೊಂಡರು. ಎಚ್.ಸಿ. ಬಾಲಕೃಷ್ಣ ಮೊದಲು ಬಾರಿಗೆ ಬಿಜೆಪಿಯಿಂದ ಗೆದ್ದು ಶಾಸಕರಾದರು. ಅವರನ್ನು ಜೆಡಿಎಸ್ ತನ್ನತ್ತ ಸೆಳೆಯಿತು’ ಎಂದು ದೂರಿದರು.

‘ಡಿ.ಕೆ. ಸುರೇಶ್ ಅವರನ್ನು ಜನರು ‘ಗೂಂಡಾ ಎಂಪಿ’ ಎಂದೇ ಕರೆಯುತ್ತಾರೆ. ಬಿಜೆಪಿಯಿಂದ ರಾಮನಗರ ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸಿದ್ದ ಎಲ್. ಚಂದ್ರಶೇಖರ್‌ ಅವರನ್ನು ಗೂಂಡಾಗಿರಿಯ ಮೂಲಕ ಹೆದರಿಸಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದ ಅಪಕೀರ್ತಿ ಡಿ.ಕೆ. ಸುರೇಶ್, ಡಿ.ಕೆ. ಶಿವಕುಮಾರ್ ಅವರಿಗೆ ಸಲ್ಲುತ್ತದೆ’ ಎಂದರು.

ಮೂಗಿಗೆ ತುಪ್ಪ: ಈ ಬಜೆಟ್‌ನಲ್ಲಿ ಕುಮಾರಸ್ವಾಮಿ ಜಿಲ್ಲೆಯ ಜನತೆಯ ಮೂಗಿಗೆ ತುಪ್ಪ ಸವರಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಹಲವು ಯೋಜನೆಗಳು ಈಗಲೂ ಅನುಷ್ಠಾನಗೊಂಡಿಲ್ಲ ಎಂದು ರುದ್ರೇಶ್ ತಿಳಿಸಿದರು.
‘ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡುತ್ತೇವೆ ಎಂದು ಕಳೆದ ಬಜೆಟ್‌ನಲ್ಲಿ ಹೇಳಿದ್ದರು, ಮಾಡಿಲ್ಲ. ಹರಿಸಂದ್ರ ಬಳಿ ಕರಕುಶಲ ಕೇಂದ್ರ, ಕಣ್ವ ಬಳಿ ಉದ್ಯಾನ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಿಧಾನಸೌಧ ನಿರ್ಮಿಸಿದ ಕೆಂಗಲ್‌ ಹನುಮಂತಯ್ಯ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಸೋಲೂರು, ಕುದೂರು, ಸಾತನೂರು, ದೊಡ್ಡಾಲಹಳ್ಳಿ ಇವುಗಳನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಘೋಷಿಸಬಹುದಿತ್ತು. ಇವುಗಳನ್ನು ನಿರ್ಲಕ್ಷಿಸಲಾಗಿದೆ’ ಎಂದರು.

‘ಶ್ರೀರಂಗ ಯೋಜನೆಯನ್ನು ಪ್ರಸ್ತಾಪಿಸಿಲ್ಲ. ರಾಮನಗರ–ಚನ್ನಪಟ್ಟಣ ತಾಲ್ಲೂಕುಗಳನ್ನು ಅವಳಿ ನಗರಗಳೆಂದು ಘೋಷಿಸಬೇಕು. ಈ ಭಾಗದ ನಿರುದ್ಯೋಗಿಗಳಿಗೆ ಅನುಕೂಲವಾಗುವಂತೆ ಕೈಗಾರಿಕೆಗಳನ್ನು ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

‘ಅಲ್ಪಸಂಖ್ಯಾತ ಸಮುದಾಯದ ಸಂಸ್ಥೆಗಳಿಗೆ ₨1350 ಕೋಟಿ ಹಣ ನೀಡಿದ್ದೀರಿ, ಹಿಂದೂ ಧರ್ಮದ ಮಠಗಳಿಗೆ ಕೇವಲ ₨200 ಕೋಟಿ ನೀಡಿ ತಾರತಮ್ಯ ಮಾಡಿದ್ದೀರಿ’ ಎಂದು ಆರೋಪಿಸಿದರು.

ನಗರಸಭೆ ಸದಸ್ಯರಾದ ಪಿ. ರವಿಕುಮಾರ್, ಬಿ. ನಾಗೇಶ್, ಬಿಜೆಪಿ ಪದಾಧಿಕಾರಿಗಳಾದ ಮುರುಳೀಧರ್, ಜಿ.ವಿ. ಪದ್ಮನಾಭ, ಎಸ್.ಆರ್. ನಾಗರಾಜ್, ಚಂದನ್‌ಮೋರೆ, ಪಿ. ಶಬರಿ, ಪ್ರವೀಣ್‌ಗೌಡ, ವರದರಾಜ್‌ಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.