ಉಗ್ರ ನಿಗ್ರಹ, ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹ

7
ಬಿಜೆಪಿ ಕಾರ್ಯಕರ್ತರಿಂದ ರಾಮನಗರದಲ್ಲಿ ಪ್ರತಿಭಟನೆ: ಸರ್ಕಾರದ ವಿರುದ್ಧ ಆಕ್ರೋಶ

ಉಗ್ರ ನಿಗ್ರಹ, ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:
Deccan Herald

ರಾಮನಗರ: ಉಗ್ರ ಚಟುವಟಿಕೆಗಳ ನಿಗ್ರಹ ಹಾಗೂ ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಸಂಕೀರ್ಣಗಳ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಕಚೇರಿಯಿಂದ ಹೆದ್ದಾರಿ ಮಾರ್ಗವಾಗಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂದೆ ಸಮಾವೇಶಗೊಂಡರು. ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗುತ್ತಾ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿದರು.

‘ಮುಖ್ಯಮಂತ್ರಿಗಳ ತವರು ರಾಮನಗರದಲ್ಲಿ ಉಗ್ರ ಚಟುವಟಿಕೆಗಳು ಬೇರೂರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದು ರಾಜ್ಯ ಗುಪ್ತಚರ ವಿಭಾಗ ಹಾಗೂ ಗೃಹ ಖಾತೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ರಾಜ್ಯದಲ್ಲಿನ ಜೆಡಿಎಸ್‌–ಕಾಂಗ್ರೆಸ್ ಸರ್ಕಾರವು ಏನು ಮಾಡುತ್ತಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ರಾಮನಗರದ ಜೊತೆಗೆ ಚನ್ನಪಟ್ಣಣ, ಕನಕಪುರ, ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳಲ್ಲಿ 500ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ತಳವೂರಿದ್ದಾರೆ. ಇವರನ್ನು ಕೆಲಸಕ್ಕೆ ಸೇರಿಸುವ ಮತ್ತು ಹಣಕಾಸಿನ ಸಹಾಯ ಮಾಡುವ ದೊಡ್ಡ ಜಾಲವೇ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿನ ಮುಸ್ಲಿಂ ಸಂಘಟನೆಗಳಿಗೆ ವಿದೇಶದಿಂದ ಹಣ ಹರಿದುಬರುತ್ತಿದೆ. ಸರ್ಕಾರವು ಇದೆಲ್ಲವನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

‘ಕುಮಾರಸ್ವಾಮಿ ಮತ್ತವರ ಕುಟುಂಬದವರು ರಾಜಕೀಯ ಕಾರಣಕ್ಕೆ ಜಿಲ್ಲೆಯ ಜನರಿಗೆ ಅಭಾರಿಯಾಗಿರಬೇಕು. ಈಗ ಇಲ್ಲಿನ ಜನರು ಭಯಭೀತರಾಗಿದ್ದು, ಅವರಿಗೆ ರಕ್ಷಣೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಮುಖಂಡ ನಾರಾಯಣ ಸ್ವಾಮಿ ಮಾತನಾಡಿ ‘ಕಾಂಗ್ರೆಸ್ ಕಳೆದ ಏಳು ದಶಕಗಳಿಂದ ಮುಸ್ಲಿಂ ಸಮುದಾಯವನ್ನು ಓಲೈಸುತ್ತಲೇ ಬಂದಿದ್ದು, ಅದೇ ಕಾರಣಕ್ಕೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ. ಈಗ ಜೆಡಿಎಸ್ ಸಹ ಅದೇ ಪಾಳಯ ಸೇರಿರುವುದು ವಿಷಾದದ ಸಂಗತಿ. ಎನ್‌ಐಎ ಅಧಿಕಾರಿಗಳು ನಗರದಲ್ಲಿ ಉಗ್ರನನ್ನು ಬಂಧಿಸದೇ ಹೋದಲ್ಲಿ ಗಣೇಶ ಚತುರ್ಥಿ, ದೀಪಾವಳಿ ವೇಳೆಗೆ ರಾಜ್ಯದಲ್ಲಿ ರಕ್ತದ ಹೊಳೆಯೇ ಹರಿಯುತ್ತಿತ್ತು’ ಎಂದು ಹೇಳಿದರು.

‘ರಾಜ್ಯ ಸರ್ಕಾರವು ಹಿಂದುಗಳ ರಕ್ಷಣೆಯ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸುತ್ತಿಲ್ಲ. ಮುಖ್ಯಮಂತ್ರಿಯಾಗಿ ಉಳಿಯಲು ಕುಮಾರಸ್ವಾಮಿಗೆ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಸ್‌.ಆರ್. ನಾಗರಾಜು ಹಾಗೂ ರಾಜ್ಯ ಸಮಿತಿ ಸದಸ್ಯ ಬಿ. ನಾಗರಾಜು ಮಾತನಾಡಿ ‘ರಾಮನಗರವು ರೆಹಮಾನ್‌ ನಗರವಾಗಲು ಸರ್ಕಾರ ಬಿಡಬಾರದು. ಇಲ್ಲಿಗೆ ವಲಸೆ ಬಂದಿರುವ ಎಲ್ಲರ ಬಾಡಿಗೆದಾರರ ಬಗ್ಗೆ ಅಗತ್ಯ ಮಾಹಿತಿ ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದರು.

ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಗನ್ನಾಥ್, ಮುರಳೀಧರ್, ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ, ಮುಖಂಡರಾದ ಮಲವೇಗೌಡ, ನಾಗೇಶ್, ರಮೇಶ್, ಜಿ.ವಿ, ಪದ್ಮನಾಭ, ರುದ್ರದೇವರು, ಚಂದ್ರಕಲಾ, ಶಿವಮಾದು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬೇಡಿಕೆಗಳು
* ಮುಸ್ಲಿಂ ಸಂಘಟನೆಗಳಿಗೆ ವಿದೇಶಿ ನೆರವು ನಿಲ್ಲಿಸಿ
* ನಗರದಲ್ಲಿನ ಬಾಡಿಗೆದಾರರ ಮಾಹಿತಿ ಸಂಗ್ರಹಿಸಿ
* ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಜರುಗಿಸಿ

ಜಿಲ್ಲೆಯ ವಿವಿಧೆಡೆ 500ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಇವರಿಗೆ ಉದ್ಯೋಗ, ಹಣಕಾಸು ನೀಡುವ ಜಾಲವು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ
- ಎಂ. ರುದ್ರೇಶ್, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !