‘ರಾಮನಗರಕ್ಕೆ ಗೌಡರ ಕುಟುಂಬದ ಕೊಡುಗೆ ಏನು?”

7
ಬಿಜೆಪಿ ಯುವ ಕಾರ್ಯಕರ್ತರ ಸಭೆ

‘ರಾಮನಗರಕ್ಕೆ ಗೌಡರ ಕುಟುಂಬದ ಕೊಡುಗೆ ಏನು?”

Published:
Updated:
Deccan Herald

ರಾಮನಗರ: ‘ಕಳೆದ ಎರಡು ದಶಕದಿಂದ ಎಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಇಲ್ಲಿನ ಅಭಿವೃದ್ಧಿಗೆ ಅವರ ವೈಯಕ್ತಿಕ ಕೊಡುಗೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಒತ್ತಾಯಿಸಿದರು.

ನಗರದ ರಾಮಘಡ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ನಡೆದ ಬಿಜೆಪಿ ಯುವ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿ ಆದರು. ಆಗಲೇ ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿದರು. ಇಲ್ಲಿಯೇ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣದ ಘೋಷಣೆಯನ್ನೂ ಮಾಡಿದರು. ಆ ಸಮಯದಲ್ಲಿಯೇ ಇಲ್ಲಿ ನಾಲ್ಕಾರು ಕಟ್ಟಡಗಳು ನಿರ್ಮಾಣವಾದವು. ಈ ಎಲ್ಲದರಲ್ಲೂ ಸರ್ಕಾರದ ಭಾಗವಾಗಿದ್ದ ಬಿಜೆಪಿಯ ಪಾಲು ಇದೆ. ಅದನ್ನು ಹೊರತುಪಡಿಸಿ ಎಚ್‌ಡಿಕೆ ಬೇರೆ ಏನು ಕೊಡುಗೆ ನೀಡಿದ್ದಾರೆ’ ಎಂದು ಅವರು ಪ್ರಶ್ನಿಸಿದರು.

‘ಕುಮಾರಸ್ವಾಮಿ ಕಳೆದ ಐದು ವರ್ಷದಲ್ಲಿ ಶಾಸಕರಾಗಿ ಎಷ್ಟು ಕೆಡಿಪಿ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಆಶ್ರಯ ಮನೆ ಯೋಜನೆಗಳ ಸಂಬಂಧ ಎಷ್ಟು ಸಭೆ ನಡೆಸಿದ್ದಾರೆ. ಎಷ್ಟು ದಲಿತರಿಗೆ ನಿವೇಶನ , ಮನೆ ಕೊಡಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ಮುಂಬರುವ ಉಪ ಚುನಾವಣೆ–ಲೋಕಸಭೆ ಚುನಾವಣೆಗೆ ಕಾರ್ಯಕರ್ತರು ತಳಮಟ್ಟದಿಂದ ಸಂಘಟನೆ ಮಾಡಬೇಕು. ಪ್ರತಿ ಬೂತ್‌ ಮಟ್ಟದಲ್ಲಿ ಕನಿಷ್ಠ 10 ಕಾರ್ಯಕರ್ತರ ತಂಡ ರಚಿಸಲಾಗಿದ್ದು, ಅವರು ಸೂಕ್ತ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.

‘2008ರಲ್ಲಿ ಇಲ್ಲಿ ಚುನಾವಣೆಗೆ ನಿಂತ ಸಂದರ್ಭದಲ್ಲಿ ಜನರು ನನ್ನನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದ್ದರು. ಈಗ ಆ ಸಂಖ್ಯೆ ದುಪ್ಪಟ್ಟಾಗಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಸ್.ಆರ್‌. ನಾಗರಾಜು ಮಾತನಾಡಿ ‘ಮೊನ್ನೆ ಮುಖ್ಯಮಂತ್ರಿಗಳ ತೋಟದ ಮನೆಯಲ್ಲಿ ನಡೆದ ಸಭೆಯಲ್ಲಿ ರಾಮನಗರ–ಚನ್ನಪಟ್ಟಣದ ಜೆಡಿಎಸ್‌ ಕಾರ್ಯಕರ್ತರೇ ಅವರ ಆಡಳಿತದ ವಿರುದ್ಧ ಧ್ವನಿ ಎತ್ತಿದ್ದಾರೆ. ಇದರಲ್ಲಿಯೇ ಅವರಿಗೆ ಎಷ್ಟು ಜನ ಬೆಂಬಲವಿದೆ ಎಂಬುದು ಗೊತ್ತಾಗುತ್ತಿದೆ. ಉತ್ತಮವಾಗಿ ಪಕ್ಷ ಸಂಘಟನೆ ಮಾಡಿದರೆ ಉಪ ಚುನಾವಣೆಯಲ್ಲಿ ಬಿಜೆಪಿ ಖಂಡಿತ ಗೆಲ್ಲಲಿದೆ’ ಎಂದರು.

ಪಕ್ಷದ ಲೋಕಸಭಾ ಕ್ಷೇತ್ರದ ವಿಸ್ತಾರಕ ಶಶಿಧರ್‌ ಮಾತನಾಡಿ ‘ದೇಶದ ಪರ ಘೋಷಣೆ ಕೂಗಲು ಆಗದಂತಹ ವಾತಾವರಣ ಕಾಂಗ್ರೆಸ್‌ನಲ್ಲಿ ಇದೆ’ ಎಂದು ಟೀಕಿಸಿದರು. ಪ್ರತಿ ಬೂತ್‌ ಮಟ್ಟದಲ್ಲಿ ಯುವಕರು ತಂಡ ಕಟ್ಟಿಕೊಂಡು ಪ್ರಚಾರ ನಡೆಸುವಂತೆ ಸಲಹೆ ನೀಡಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್‌ ಗೌಡ, ಯುವ ನಗರ ಘಟಕ ಅಧ್ಯಕ್ಷ ಶಬರೀಶ್‌, ನಗರಸಭೆ ಸದಸ್ಯ ನಾಗೇಶ್‌ ಮಾತನಾಡಿದರು. ಯುವ ಘಟಕದ ಜಿಲ್ಲಾ ಅಧ್ಯಕ್ಷ ವರದರಾಜು, ಮುಖಂಡರಾದ ಪದ್ಮನಾಭ, ಮಂಜು, ರಾಜು, ವಿಜಯಕುಮಾರ್, ಕಾಳಪ್ಪ, ರಾಜೇಶ್‌, ರುದ್ರದೇವರು, ರಮೇಶ್‌ ಇದ್ದರು.

**

ಈಗ ಅಸ್ಪೃಶ್ಯತೆ ನೆನಪಾಯಿತೆ?

‘ಮೋದಿ–ಬಿಜೆಪಿಯನ್ನು ಟೀಕಿಸುವ ಮಲ್ಲಿಕಾರ್ಜನ ಖರ್ಗೆ ಅವರಿಗೆ ಈಗ ಇದ್ದಕ್ಕಿದ್ದಂತೆ ಏಕೆ ಅಸ್ಸೃಶ್ಯತೆ ನೆನಪಾಯಿತು ಗೊತ್ತಿಲ್ಲ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಮಾಧಿಗೆ ರಾಜ್‌ಘಾಟ್‌ನಲ್ಲಿ ಜಾಗ ಕೊಡದ ಪಕ್ಷ ಅವರದ್ದು. ಈಗಿನ ಕಾಂಗ್ರೆಸ್ ನಾಯಕರ ವಂಶಸ್ಥರು ಎಷ್ಟು ಜನ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟಿದ್ದಾರೆ’ ಎಂದು ರುದ್ರೇಶ್ ಪ್ರಶ್ನಿಸಿದರು.

**

ಕಾಂಗ್ರೆಸ್‌ಗೆ ಗತಿಯಿಲ್ಲ, ಜೆಡಿಎಸ್‌ಗೆ ಮತಿ ಇಲ್ಲ ಎನ್ನುವಂತಹ ಸನ್ನಿವೇಶದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಅವರ ಕ್ಷೇತ್ರದಲ್ಲಿಯೇ ರೈತರ ಆತ್ಮಹತ್ಯೆ ನಿಂತಿಲ್ಲ
–ಎಂ. ರುದ್ರೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !