6
ಕೊಲೆ ಶಂಕೆ ವ್ಯಕ್ತಪಡಿಸಿದ ಯುವಕನ ಸಂಬಂಧಿಕರು

ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆ

Published:
Updated:
ಹೊಳೆಹೊನ್ನೂರು ಸಮೀಪದ ಅರಹತೊಳಲು ಕೈಮರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಅನುಮಾನಾಸ್ಪದವಾಗಿ ಯುವಕನೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಸ್ಥಳವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ ಪರಿಶೀಲಿಸಿದರು

ಹೊಳೆಹೊನ್ನೂರು (ಶಿವಮೊಗ್ಗ ಜಿಲ್ಲೆ): ಅರಹತೊಳಲು ಕೈಮರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ‘ವಿಜಯ ಫಾಸ್ಟ್‌ಫುಡ್‌’ ಬಳಿ ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಹುಡುಗಿ ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬೆಂಗಳೂರಿನ ಪೊಲೀಸರು ಎರಡು ದಿನಗಳ ಹಿಂದೆಯಷ್ಟೇ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.

ಮಂಗಳವಾರ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ವಾಕಿಂಗ್‌ಗೆ ಬಂದ ಸ್ಥಳೀಯರು ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದ ಶವವನ್ನು ಕಂಡು ಹೊಳೆಹೊನ್ನೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಯುವಕನನ್ನು ಶಿವಮೊಗ್ಗ ತಾಲ್ಲೂಕಿನ ಸೂಗೂರು ಗ್ರಾಮದ ಶರತ್‌ (24) ಎಂದು ಗುರುತಿಸಲಾಗಿದೆ.

ಶರತ್ ಅವಿವಾಹಿತನಾಗಿದ್ದು, ಬೆಂಗಳೂರಿನಲ್ಲಿ ಫೋಟೊಗ್ರಾಫರ್‌ ವೃತ್ತಿಯ ಜೊತೆಗೆ ಸಂಜೆ ವೇಳೆ ಪಾನಿಪುರಿ ಅಂಗಡಿಯಲ್ಲೂ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಕೊಲೆ ಶಂಕೆ

ಯುವಕನ ಸಂಬಂಧಿ ಸಂತೋಷ ಮಾತನಾಡಿ, ‘ಭಾನುವಾರ ಮಧ್ಯರಾತ್ರಿ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಮಂಜುನಾಥ ಹಾಗೂ ಇನ್ನೊಬ್ಬ ಕಾನ್‌ಸ್ಟೆಬಲ್‌ (ಹೆಸರು ಗೊತ್ತಿಲ್ಲ) ಜತೆ ಹುಡುಗಿಯ ಅಣ್ಣ ಹಾಗೂ ಆತನ ಸ್ನೇಹಿತ ರಾಯ್‌ ಬಂದಿದ್ದರು. ಹುಡುಗಿ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಲು ಶರತ್‌
ನನ್ನು ಬೆಂಗಳೂರಿಗೆ ಕರೆದುಕೊಂಡು ಹೋದರು. ಸಹೋದರ ಸಂಬಂಧಿ ರವಿ ಶರತ್‌ ಜೊತೆಗೆ ಬರುವುದಾಗಿ ಹೇಳಿದರೂ ಪೊಲೀಸರು ಒಪ್ಪಲಿಲ್ಲ. ಠಾಣೆಗೆ ನೇರವಾಗಿ ಬರುವಂತೆ ಹೇಳಿ ಹೋಗಿದ್ದರು’ ಎಂದು ದೂರಿದ್ದಾರೆ.

ಸೋಮವಾರವೇ ಪ್ರಕರಣ ದಾಖಲು

ದಾವಣಗೆರೆ: ಶಿವಮೊಗ್ಗ ತಾಲ್ಲೂಕು ಸೂಗೂರಿನ ಶರತ್‌ ಎಂಬಾತನನ್ನು ಪ್ರಕರಣವೊಂದರ ತನಿಖೆಗಾಗಿ ಕರೆದೊಯ್ಯುವಾಗ ಬೆಂಗಳೂರಿನ ಮಾರತಹಳ್ಳಿ ಠಾಣೆ ಪೊಲೀಸರಿಂದ ತಪ್ಪಿಸಿಕೊಂಡ ಬಗ್ಗೆ ಚನ್ನಗಿರಿ ಠಾಣೆಯಲ್ಲಿ ಸೋಮವಾರವೇ ದೂರು ದಾಖಲಾಗಿದೆ ಎಂದು ಎಸ್‌ಪಿ ಆರ್‌. ಚೇತನ್‌ ತಿಳಿಸಿದ್ದಾರೆ.

ಚನ್ನಗಿರಿ ಸಮೀಪದ ಹೆಬ್ಬಳಗೆರೆಯಲ್ಲಿ ವಾಹನ ಕೆಟ್ಟುನಿಂತಿತ್ತು. ಹೀಗಾಗಿ ಮೆಕ್ಯಾನಿಕ್‌ ಕರೆತರಲು ಒಂದಿಬ್ಬರು ಸಿಬ್ಬಂದಿ ತೆರಳಿದ್ದು. ಈ ವೇಳೆ ಮೂತ್ರ ವಿಸರ್ಜನೆಗೆ ಹೋಗುವುದಾಗಿ ಹೇಳಿ, ಶರತ್‌ ತಪ್ಪಿಸಿಕೊಂಡಿದ್ದ ಎಂದು ಪ್ರಕರಣ ದಾಖಲಾಗಿದೆ ಎಂದು ಎಸ್‌ಪಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !