ವೆಂಗಳಪ್ಪನ ತಾಂಡಾದ ಕ್ರಷರ್‌ನಲ್ಲಿ ಜೀತ ಪದ್ಧತಿ– ದೂರು

7
ತಹಶೀಲ್ದಾರ್‌ ಕಚೇರಿಯಲ್ಲಿ ಜೀತದಾಳು ಪದ್ಧತಿ ವಿರುದ್ಧ ಜಾಗೃತಿ ಸಭೆಯಲ್ಲಿ ಆರೋಪ

ವೆಂಗಳಪ್ಪನ ತಾಂಡಾದ ಕ್ರಷರ್‌ನಲ್ಲಿ ಜೀತ ಪದ್ಧತಿ– ದೂರು

Published:
Updated:
Deccan Herald

ಮಾಗಡಿ: ವೆಂಗಳಪ್ಪನ ತಾಂಡಾದ ಕ್ರಷರ್‌ನಲ್ಲಿ ಅಸ್ಸಾಂ, ಬಿಹಾರದಿಂದ ಹಿಡಿದು ತಂದಿರುವ ಜೀತಗಾರರಿದ್ದಾರೆ. ಮಾಲೀಕರು ಕಡಿಮೆ ಕೂಲಿಗೆ ಹಗಲಿರುಳು ದುಡಿಸಿಕೊಳ್ಳುತ್ತಿದ್ದಾರೆ. ಸಿಡಿದ ಕಲ್ಲಿನ ನಡುವೆ ಮೃತರಾದವರನ್ನು ಅಲ್ಲಿಯೇ ಗುಂಡಿ ತೆಗೆದು ಮುಚ್ಚಲಾಗುತ್ತಿದೆ. ಕಾರ್ಮಿಕ ಅಧಿಕಾರಿಗಳು ಕ್ರಷರ್‌ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ ಎಂದು ಹೋರಾಟಗಾರ ಜಿ.ಕೃಷ್ಣ ಆರೋಪಿಸಿದರು.

ತಹಶೀಲ್ದಾರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಜೀತದಾಳು ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜೀತಕಾರ್ಮಿಕ ವಿಮುಕ್ತಿ ಸಂಘಟನೆ ಸಂಚಾಲಕ ಗಂಗಹನುಮಯ್ಯ ಮಾತನಾಡಿ, ತಾಲ್ಲೂಕಿನಲ್ಲಿ 31 ಜನ ಜೀತಗಾರಿಕೆಯಿಂದ ಬಿಡುಗಡೆಯಾಗಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸಿಲ್ಲ. ಅಧಿಕಾರಿಗಳು ತನಿಖೆ ಮಾಡಿದರೆ ಇನ್ನೂ ಹೆಚ್ಚಿನ ಜೀತಗಾರರನ್ನು ಗುರುತಿಸಲು ಸಾಧ್ಯವಿದೆ ಎಂದರು.

ಪ್ರಗತಿಪರ ಹೋರಾಟಗಾರ ಕಲ್ಕೆರೆ ಶಿವಣ್ಣ, ಜೀತಗಾರಿಕೆಯಿಂದ ಬಿಡುಗಡೆ ಆಗಿರುವವರಿಗೆ ಭೂಮಿ ನೀಡಬೇಕು. ಬಡವರ ಕಲ್ಯಾಣಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕಿನಲ್ಲಿ ಜಮೀನ್ದಾರಿ ಪದ್ಧತಿ ಇಲ್ಲ. ಎಲ್ಲ ಸಮುದಾಯಗಳು ಸಹೋದರರಂತೆ ಬದುಕುತ್ತಿದ್ದಾರೆ ಎಂದು ಗ್ರಾಮೀಣ ಮೂಲಭೂತ ಸೌಕರ್ಯ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ನಿರ್ದೇಶಕ ಎನ್‌.ಕೃಷ್ಣಪ್ಪ ಕೋಡಿಪಾಳ್ಯ ತಿಳಿಸಿದರು.

ತಾಲ್ಲೂಕಿನಲ್ಲಿ ಇರುವ ಇಟ್ಟಿಗೆಗೂಡು, ರೇಷ್ಮೆ ಹುರಿ ಕಾರ್ಖಾನೆ ಮತ್ತು ಕೋಳಿ ಸಾಕಾಣಿಕೆ ಹಾಗೂ ಕ್ರಷರ್‌ಗಳಲ್ಲಿ ಜೀತಕಾರ್ಮಿಕರು ಇದ್ದರೆ ಗುರುತಿಸಿ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು.
ಜೀತಪದ್ಧತಿ ಸಮಾನ ನಾಗರಿಕತೆ ಸಾರಿರುವ ಸಂವಿಧಾನಕ್ಕೆ ವಿರುದ್ಧವಾದದ್ದು. ಜೀತಗಾರರನ್ನು ಮನೆಯಲ್ಲಿಟ್ಟುಕೊಂಡು ದುಡಿಸಿಕೊಳ್ಳುವುದು ಅಪರಾಧವಾಗಿದೆ. ಶೋಷಿತ ಸಮುದಾಯಕ್ಕೆ ಮೂಲ ಸವಲತ್ತು ನೀಡುವುದರೊಂದಿಗೆ ಜೀತಪದ್ಧತಿ ವಿಮುಕ್ತ ತಾಲ್ಲೂಕನ್ನಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದರು.

ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮೀಣ ಜನರ ಪಾಲಿಗೆ ಸರ್ವೋದಯದ ನಾಯಕರಿದ್ದಂತೆ. ರೈತರ ಉದ್ಧಾರಕ್ಕೆ ರೈತರೇ ಸಂಘಟಿತರಾಗಿ ಶ್ರಮಜೀವನದಲ್ಲಿ ನಂಬಿಕೆ ಇಟ್ಟು, ಹೈನುಗಾರಿಕೆ ಮತ್ತು ರೇಷ್ಮೆ ಹುಳು ಸಾಕುವ ಮೂಲಕ ಆರ್ಥಿಕ ಸಬಲೀಕರಣ ಸಾಧಿಸಲು ಮುಂದಾಗಬೇಕು. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಎನ್‌.ಶಿವಕುಮಾರ್‌, ಗ್ರಾಮೀಣ ಮೂಲ ಸೌಕರ್ಯ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್‌, ತಾಲ್ಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ಚಂದ್ರು, ಪುರಸಭೆ ಮುಖ್ಯಾಧಿಕಾರಿ ಕೊಟ್ಟುಕೊತ್ತಿರ ಮುತ್ತಪ್ಪ, ದಲಿತ ಸಂಘರ್ಷ ಸಮಿತಿ ಕೊಟ್ಟಗಾರಹಳ್ಳಿ ಉಮೇಶ್‌, ಹನುಮಂತಪುರದ ಶಿವರಾಮಯ್ಯ, ತಟವಾಳ್‌ ರಾಜು ಜೀತಪದ್ಧತಿ ನಿರ್ಮೂಲನೆ ಬಗ್ಗೆ ಮಾತನಾಡಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !