ನೈತಿಕತೆಯ ಎಚ್ಚರ ಕಳೆದುಕೊಳ್ಳದ ಬರಹ: ಡಾ.ಎಚ್‌.ಎಸ್. ರಾಘವೇಂದ್ರ ರಾವ್

7
ಡಿ.ಎಸ್. ನಾಗಭೂಷಣ್ ಅವರ ‘ಬಹುಮುಖ’ ಪುಸ್ತಕ ಬಿಡುಗಡೆ

ನೈತಿಕತೆಯ ಎಚ್ಚರ ಕಳೆದುಕೊಳ್ಳದ ಬರಹ: ಡಾ.ಎಚ್‌.ಎಸ್. ರಾಘವೇಂದ್ರ ರಾವ್

Published:
Updated:
Deccan Herald

ಶಿವಮೊಗ್ಗ: ಡಿ.ಎಸ್. ನಾಗಭೂಷಣ್ ಅವರ ಬರಹಗಳಲ್ಲಿ ನೈತಿಕತೆಯ ಎಚ್ಚರ ಯಾವತ್ತೂ ಕಳೆದುಹೋಗಿಲ್ಲ. ಅವರೊಬ್ಬ ತಿದ್ದುವ, ಕೆರಳಿಸುವ, ಬದಲಿಸುವ, ಎಚ್ಚರಿಸುವ ಮೇಷ್ಟ್ರು ಎಂದು ಸಾಹಿತ್ಯ ಚಿಂತಕ ಡಾ.ಎಚ್‌.ಎಸ್. ರಾಘವೇಂದ್ರ ರಾವ್ ಬಣ್ಣಿಸಿದರು.

ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರಿನ ರೂಪಾ ಪ್ರಕಾಶನ ಪ್ರಕಟಿಸಿರುವ ನಾಗಭೂಷಣ್ ಅವರ ಲೇಖನಗಳ ಸಂಗ್ರಹ ‘ಬಹುಮುಖ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮಾತು ಹಾಗೂ ಬರವಣಿಗೆ ಮೂಲಕ ತಿದ್ದುವ ಶಕ್ತಿ ಅವರಿಗೆ ಇದೆ. ವಿಚಾರ, ಸೈದ್ಧಾಂತಿಕ ಚಿಂತನೆಯ ಬೆಳಕು ಅಲ್ಲಿದೆ. ನಂಬಿದ ಸಿದ್ಧಾಂತ, ತತ್ವಗಳಲ್ಲೂ ತಪ್ಪು ಕಾಣಿಸಿದರೆ ಅದನ್ನು ಖಂಡಿಸಿದ್ದಾರೆ. ಅದರಾಜೆ ಹೋಗುವ ದಿಟ್ಟತನವನ್ನೂ ತೋರಿದ್ದಾರೆ. ಕೆಲವೊಮ್ಮೆ ಈ ನಡೆ ಬೌದ್ಧಿಕ ಅಹಂಕಾರ ಎನಿಸಿದರೂ ಅಲ್ಲಿ ಬೇರೆಯವರನ್ನು ಚಿಂತನೆಯ ಸಂಘರ್ಷಕ್ಕೆ ಹಚ್ಚಿ ಶುದ್ಧಗೊಳಿಸುವ ನಡೆ ಕಾಣಿಸುತ್ತದೆ ಎಂದು ವಿಶ್ಲೇಷಿಸಿದರು.

ಯಾರನ್ನೋ ಓಲೈಸುವ ಶಿಕ್ಷಕರ ಮನೋಸ್ಥಿತಿ ಅವರಲ್ಲಿ ಇಲ್ಲ. ಅವರದು ಭಿನ್ನ ಹೋರಾಟ. ಒಂದು ವಿಶ್ವವಿದ್ಯಾಲಯ, ಮಾಧ್ಯಮ ಮಾಡುವ ಕೆಲಸ ಅವರು ಮಾಡಿದ್ದಾರೆ. ಬಣ್ಣದ ಕನ್ನಡಕ ತೊಟ್ಟರೆ ಕುರುಡನ್ನೂ ಮರೆಮಾಚಬಹುದು. ಆದರೆ, ಅಂತಹ ಮರೆಮಾಚುವ ಕೆಲಸಕ್ಕೆ ಅವರು ಎಂದೂ ಆಸ್ಪದ ನೀಡಿಲ್ಲ. ಸಂಸ್ಕೃತಿ, ಕಲೆ, ಜೀವನ, ಹೋರಾಟ ಎಲ್ಲದರ ಸಮ್ಮಿಲನ. ಅದರಾಚೆಗೂ ನಿಷ್ಠುರತೆ ಇದೆ ಎಂದು ಅಭಿಪ್ರಾಯಪಟ್ಟರು.

ಸರಿ, ತಪ್ಪು, ನೈತಿಕತೆಯ ಕಲ್ಪನೆ. ನಂಬುವ ತತ್ವಗಳ ಆಚೆಗೂ ಒಂದು ಅನೈತಿಕತೆ ಇದೆ ಎಂದರೆ ಹಿಂದೆಮುಂದೆ ನೋಡದೇ ನಿಷ್ಠುರತೆ ತೋರಿದ್ದಾರೆ. ನೈತಿಕತೆ, ಧರ್ಮ, ಪುಸ್ತಕ, ವಾದಕ್ಕಿಂತ ಎದೆಯ ದನಿಗೆ ಪ್ರಾಶಸ್ತ್ಯ ನೀಡಿದ್ದಾರೆ. ತಾವೇ ಮಾಡಿದ ತಪ್ಪುಗಳನ್ನೂ ತಿದ್ದಿಕೊಂಡಿದ್ದಾರೆ. ಅಷ್ಟೇ ನಿಷ್ಠುರವಾಗಿ ಬೇರೆಯವರ ತಪ್ಪು ಖಂಡಿಸಿದ್ದಾರೆ. ಒರಟ, ಕೋಪಿಷ್ಠ, ಜಗಳಗಂಟ ಎಂದು ಲೋಕ ಟೀಕಿಸಿದರೂ ಎದೆಗುಂದಿದವರಲ್ಲ. ಹಾಗಾಗಿಯೇ, ಅವರ ಬರವಣಿಗೆಯಲ್ಲಿ ನೈತಿಕತೆಯ ಎಚ್ಚರ ಜೀವಂತವಾಗಿರುವುದು ಎಂದರು.

ಅವರದು ಎಳನೀರಿನಂತಹ ಅಂತಃಕರಣ. ಭಾವನೆಗಳ ಬರಹದಲ್ಲೂ ಸರಿ, ತಪ್ಪುಗಳ ತಿಳಿವಳಿಕೆ ಜಾಗೃತವಾಗಿದೆ. ಅಖಿಲೇಶ್ ಯಾದವ್ ಅವರನ್ನು ಸಮಾಜವಾದದ ಕುಡಿ ಎಂದು ಬಣ್ಣಿಸಿದದ್ದ ಅವರು, ಅಧಿಕಾರ ವಿಫಲತೆಯ ನಂತರ ಅವರನ್ನು ಅಷ್ಟೇ ನಿಷ್ಠುರವಾಗಿ ಖಂಡಿಸಿದ್ದರು. ತಾವೂ ಬರೆದು, ಇತರರಿಗೂ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ತನ್ನತನ ಕಳೆದುಕೊಳ್ಳದೇ ಅನ್ಯರ ಒಳಗೊಳ್ಳುವಿಕೆ ಪ್ರೋತ್ಸಾಹಿಸಿದ್ದಾರೆ. ಅವರದು ಇಸಂ, ವಿಚಾರಧಾರೆ, ರಾಜಕೀಯ ಹುನ್ನಾರ ಮೀರಿದ ಖಚಿತ ನಿಲುವು ಎಂದು ವಿಶ್ಲೇಷಿಸಿದರು.

ಪುಸ್ತಕ ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ.ಎಸ್. ಸಿರಾಜ್ ಅಹಮದ್, ನಾಗಭೂಷಣ್ ಅವರದು ಬಹುಮುಖ ಪ್ರತಿಭೆ. ನಿರಂತರವಾಗಿ ಎಲ್ಲರೊಂದಿಗೆ ವಾದ–ವಾಗ್ವಾದ, ಜಗಳಕ್ಕೆ ತೆಗೆದುಕೊಳ್ಳುವ ಕ್ರಮ ಅವರ ಏಕಮುಖಿ ಸ್ವರೂಪ ಎಂದು ಬಣ್ಣಿಸಿದರು.

ಅವರ ವಾಗ್ವಾದವೂ ವಿಭಿನ್ನ. ಎಲ್ಲ ವಯೋಮಾನ, ಎಲ್ಲ ಸಿದ್ದಾಂತ, ತತ್ವ, ವಿಚಾರವಾದಿಗಳನ್ನೂ ಒಳಗೊಳಿಸುವ ಮೂಲಕ ಅಂತಹ ವಾಗ್ವಾದಕ್ಕೂ ಶಿಸ್ತೀಯ ಚೌಕಟ್ಟು ಒದಗಿಸಿದ್ದಾರೆ ಎಂದರು.

ಇಂದು ರಾಶಿರಾಶಿ ಅಭಿಪ‍್ರಾಯಗಳ ಉತ್ಪಾದನೆಯ ಕಾಲಘಟ್ಟ. ಈ ಅಭಿಪ್ರಾಯಗಳ ಕಣಜಗಳಲ್ಲಿ ಮೂಲ ಸ್ವರೂಪವೇ ಕಾಣದಾಗಿದೆ. ಇದರ ಫಲ ಕೇವಲ ವೈಚಾರಿಕ ಆಯಾಸವಷ್ಟೇ. ದೊಡ್ಡ ತಾತ್ವಿಕತೆ, ಚಳವಳಿ ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.

ಬಳ್ಳಾರಿಯ ಪುಸ್ತಕ ಪ್ರಕಾಶಕ ಸಿ. ಚನ್ನಬಸವಣ್ಣ, ಕೃತಿಕಾರ ಡಿ.ಎಸ್. ನಾಗಭೂಷಣ, ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !