ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಘೋಷಣೆಗಷ್ಟೇ ಸೀಮಿತವಾದ ‘ಬಜೆಟ್‌’

ಪ್ರಕಟವಾದ ಬಹುತೇಕ ಯೋಜನೆಗಳು ಅನುಷ್ಠಾನವೇ ಆಗಿಲ್ಲ!
Last Updated 6 ಫೆಬ್ರುವರಿ 2019, 14:17 IST
ಅಕ್ಷರ ಗಾತ್ರ

ರಾಮನಗರ: ರಾಜ್ಯ ಸರ್ಕಾರದ ಬಜೆಟ್ ಘೋಷಣೆಗಳು ಜಿಲ್ಲೆಯ ಪಾಲಿಗೆ ಬರಿಯ ಘೋಷಣೆಗಳಾಗಿಯೇ ಉಳಿದಿದ್ದು, ಜನರ ಬೇಸರಕ್ಕೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಗೆ ಹಲವು ಕೊಡುಗೆಗಳನ್ನು ನೀಡಿದ್ದರು. ಘೋಷಣೆಯ ಸಂದರ್ಭ ತೋರಿದ ಉತ್ಸಾಹವನ್ನು ಅವರು ಅದರ ಅನುಷ್ಠಾನದಲ್ಲಿ ತೋರಿಲ್ಲ.

2017ರ ಬಜೆಟ್‌ನಲ್ಲಿ ಸಿದ್ದರಾಮಯ್ಯ ದೊಡ್ಡಮಣ್ಣು ಗುಡ್ಡೆ ಅರಣ್ಯ ಪ್ರದೇಶದಲ್ಲಿ ₹5 ಕೋಟಿ ವೆಚ್ಚದಲ್ಲಿ ಅರಣ್ಯ ಸಂಬಂಧಿ ಸಂಶೋಧನ ಕೇಂದ್ರ ಸ್ಥಾಪನೆ, ಕಣ್ವ ಜಲಾಶಯದ ಬಳಿ ₹2 ಕೋಟಿ ವೆಚ್ಚದಲ್ಲಿ ಮಕ್ಕಳ ಉದ್ಯಾನ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಘೋಷಿಸಿದ್ದರು. 2018ರ ಫೆಬ್ರುವರಿಯಲ್ಲಿ ಮಂಡಿಸಿದ ಕೊನೆಯ ಬಜೆಟ್‌ನಲ್ಲಿ ರಾಮನಗರಕ್ಕೆ ಅಲ್ಪ ಕೊಡುಗೆ ನೀಡಿದ್ದರು. ಕೇಂದ್ರ ರೇಷ್ಮೆ ಮಂಡಳಿಯ ಸಹಯೋಗದಲ್ಲಿ ರೇಷ್ಮೆ ಇಲಾಖೆಯ ವತಿಯಿಂದ ಬೆಂಗಳೂರು–ಮೈಸೂರು ಕಾರಿಡಾರ್‌ನಲ್ಲಿ ರೇಷ್ಮೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು, ಇದರ ಅಂಗವಾಗಿ ಚನ್ನಪಟ್ಟಣದಲ್ಲಿರುವ ರೇಷ್ಮೆ ಫಾರಂನಲ್ಲಿ ‘ಲೈವ್‌ ಮ್ಯೂಸಿಯಂ’ ತೆರೆಯುವುದಾಗಿ ಹೇಳಿದ್ದರು. ಆದರೆ ಸರ್ಕಾರ ಬದಲಾಗುವ ಮೂಲಕ ಯೋಜನೆಯೂ ಬದಲಾಯಿತು.

ಬಿಡದಿ–ಹಾರೋಹಳ್ಳಿ ನಾಲ್ಕು ಪಥದ ರಸ್ತೆಗೆ ₹32 ಕೋಟಿ ಅನುದಾನ ನೀಡುವುದಾಗಿ ಅವರು ಪ್ರಕಟಿಸಿದ್ದು, ಹೆಚ್ಚಿನ ಪ್ರಮಾಣದ ಅನುದಾನ ಬಿಡುಗಡೆ ಆಗಿಲ್ಲ. ರಾಮನಗರ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಹೊಸಹತು ನಿರ್ಮಾಣ ಮಾಡುವ ಅವರ ಘೋಷಣೆಯೂ ಹಾಗೆಯೇ ಉಳಿಯಿತು. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ, ಅನುದಾನ ಮತ್ತು ಕೆಂಪೇಗೌಡರ ಕಾಲದ ಸ್ಮಾರಕಗಳ ರಕ್ಷಣೆಯ ವಿಚಾರದಲ್ಲಿ ಬಜೆಟ್‌ನಲ್ಲಿ ಘೋಷಣೆಯಾದ ಅಂಶಗಳು ಕಾರ್ಯಗತಗೊಂಡಿಲ್ಲ.

ಜಲಾಶಯ ಅಭಿವೃದ್ಧಿ ಆಗಲಿಲ್ಲ: ಮಾಗಡಿ ತಾಲ್ಲೂಕಿನ ಗಡಿಯಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ಅಭಿವೃದ್ಧಿಯ ವಿಷಯವನ್ನು ಸಿದ್ದರಾಮಯ್ಯ ತಮ್ಮ ಕಡೆಯ ಎರಡು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ತಿಪ್ಪಗೊಂಡನಹಳ್ಳಿ ಹಾಗೂ ಹೆಸರುಘಟ್ಟ ಜಲಾಶಯಗಳನ್ನು ₹340 ಕೋಟಿ ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಅಲ್ಲಿಂದ ಮತ್ತೆ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದ್ದರು. ಆದರೆ ಈ ಜಲಾಶಯದ ಚಿತ್ರಣ ಮಾತ್ರ ಇಂದಿಗೂ ಬದಲಾಗಿಲ್ಲ. ಇಂದಿಗೂ ಚರಂಡಿ ನೀರು ಇಲ್ಲಿಗೆ ಸೇರುತ್ತಲೇ ಇದೆ. ಅಲ್ಲಿಂದ ಮುಂದುವರಿದು ಮಂಚನಬೆಲೆ ಜಲಾಶಯಕ್ಕೂ ಕೊಳಕು ನೀರು ಸೇರುತ್ತಿದೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು 2018ರ ಜುಲೈ 5ರಂದು ಮಂಡಿಸಿದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದರು. ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ಚನ್ನಪಟ್ಟಣದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಕಾರ್ಖಾನೆಯ ಪುನಶ್ಚೇತನಕ್ಕೆ ₹5 ಕೋಟಿ ಕೊಡುವುದಾಗಿ ಹೇಳಿದ್ದರು. ರಾಮನಗರ ತಾಲ್ಲೂಕಿನ ಹರಿಸಂದ್ರ ಬಳಿ ಕಲಾ ಮತ್ತು ಕರಕುಶಲ ಗ್ರಾಮ ಸ್ಥಾಪಿಸುವ ಪ್ರಸ್ತಾವ ಮಂಡಿಸಿದ್ದರು. ಕಣ್ವ ಜಲಾಶಯದಲ್ಲಿ ಮಕ್ಕಳ ಉದ್ಯಾನ ನಿರ್ಮಾಣವನ್ನು ಮತ್ತೊಮ್ಮೆ ಘೋಷಿಸಿದ್ದರು. ಜಿಲ್ಲೆಯಲ್ಲಿ ₹30 ಕೋಟಿ ವೆಚ್ಚದ ಮತ್ತೊಂದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತೆರೆಯುವ ನಿರ್ಧಾರ ಪ್ರಕಟಿಸಿದ್ದರು.

ಇವುಗಳ ಪೈಕಿ ಕನಕಪುರದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಯ ವಿಚಾರದಲ್ಲಿ ಕೊಂಚ ಬೆಳವಣಿಗೆಗಳು ಆಗಿವೆ. ಇದಕ್ಕಾಗಿ 25 ಎಕರೆ ಜಾಗ ಗುರುತಿಸಿದ್ದು, ₹600 ಕೋಟಿ ವೆಚ್ಚ ಅಂದಾಜಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಈಚೆಗಷ್ಟೇ ಹೇಳಿದ್ದಾರೆ. ಮಕ್ಕಳ ಉದ್ಯಾನ, ಕರಕುಶಲ ಗ್ರಾಮ ಮೊದಲಾದವುಗಳು ಕಾಗದದ ರೂಪದಲ್ಲಿಯೇ ಉಳಿದುಕೊಂಡಿವೆ.

ಚಿತ್ರನಗರಿಯೋ, ವಿಶ್ವವಿದ್ಯಾಲಯವೋ?
ರಾಮನಗರ ಜಿಲ್ಲೆಯಲ್ಲಿ ₹40 ಕೋಟಿ ವೆಚ್ಚದಲ್ಲಿ ಚಿತ್ರನಗರಿ ಹಾಗೂ ₨30 ಕೋಟಿ ವೆಚ್ಚದಲ್ಲಿ ಚಲನಚಿತ್ರ ವಿ.ವಿ. ನಿರ್ಮಾಣವನ್ನು ಕುಮಾರಸ್ವಾಮಿ ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿ ಜಿಲ್ಲೆಯ ಜನರ ನಿರೀಕ್ಷೆ ಹೆಚ್ಚಿಸಿದ್ದರು.

ರಾಮನಗರವು ಬೆಂಗಳೂರಿಗೆ ತೀರ ಹತ್ತಿರದಲ್ಲಿ ಇರುವ ಕಾರಣ ಇಲ್ಲಿಯೇ ಚಿತ್ರನಗರಿ ಮಾಡಬೇಕು ಎನ್ನುವುದು ಸ್ವತಃ ಚಿತ್ರ ನಿರ್ಮಾಪಕರೂ ಆದ ಕುಮಾರಸ್ವಾಮಿ ಅವರ ಕನಸಾಗಿತ್ತು. ಆದರೆ ಸಿದ್ದರಾಮಯ್ಯರ ಒತ್ತಡಕ್ಕೆ ಮಣಿದು ಮೈಸೂರಿನಲ್ಲಿಯೇ ಚಿತ್ರನಗರಿ ಮಾಡುವುದಾಗಿ ಅವರು ಘೋಷಿಸಿದರು.

ಫಿಲ್ಮ್‌ ಸಿಟಿ ಸಹಯೋಗದಲ್ಲಿ ಸರ್ಕಾರ ಚಲನಚಿತ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಕೋರ್ಸುಗಳ ಕಲಿಕೆಗೆ ವಿದ್ಯಾಲಯ ಆರಂಭಿಸುವ ಸಾಧ್ಯತೆ ಇದೆ. ಆದರೆ ಇದೂ ಇನ್ನು ಅಂತಿಮಗೊಂಡಿಲ್ಲ.

ಮೇಕೆದಾಟು, ಆರೋಗ್ಯ ವಿ.ವಿ.: ಬರೀ ಭರವಸೆ
ಮೇಕೆದಾಟು ವಿಚಾರದಲ್ಲಿ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಆಗಾಗ್ಗೆ ಪ್ರಸ್ತಾಪ ಮಾಡುತ್ತಲೇ ಬಂದಿವೆ. ಆದರೆ ಇನ್ನೂ ಈ ಅಣೆಕಟ್ಟೆಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ಆಗಿಲ್ಲ. ಸರ್ಕಾರವು ಈಚೆಗಷ್ಟೇ ಕೇಂದ್ರ ಸರ್ಕಾರಕ್ಕೆ ₨9 ಸಾವಿರ ಕೋಟಿ ಅಂದಾಜು ವೆಚ್ಚದ ಪರಿಷ್ಕೃತ ಡಿಪಿಆರ್ ಸಲ್ಲಿಸಿದ್ದು, ಅನುಮತಿಗೆ ಕಾದು ಕುಳಿತಿದೆ.

ಕುಮಾರಸ್ವಾಮಿ ದಶಕದ ಹಿಂದೆ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ರಾಮನಗರದಲ್ಲಿ ಆರೋಗ್ಯ ವಿ.ವಿ. ಕ್ಯಾಂಪಸ್ ನಿರ್ಮಾಣದ ಘೋಷಣೆ ಮಾಡಿದ್ದರು. ಈ ಕಾಮಗಾರಿಗೂ ಇನ್ನೂ ಚಾಲನೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT