ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಬಸ್‌ ಸಂಚಾರ ಸ್ಥಗಿತ: ‍ಪ್ರಯಾಣಿಕರ ಪರದಾಟ

Last Updated 11 ಡಿಸೆಂಬರ್ 2020, 8:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರು ಶುಕ್ರವಾರ ಹುಬ್ಬಳ್ಳಿಯಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಬೆಳಿಗ್ಗೆ ಎಂದಿನಂತೆ ಬಸ್‌ ಸಂಚಾರ ಆರಂಭಿಸಲಾಗಿತ್ತು. ಜನರು ಕಾರ್ಯ ನಿಮಿತ್ತ ಹೊರಟಿದ್ದರು. ಬೇರೆ ಊರುಗಳಿಂದಲೂ ಜನರು ಹುಬ್ಬಳ್ಳಿಗೆ ಆಗಮಿಸಿದ್ದರು. ದಿಢೀರ್‌ ಎಂದು ಬಸ್‌ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದ ವಿವಿಧೆಡೆ ತೆರಳಬೇಕಿದ್ದ ಪ್ರಯಾಣಿಕರು ಗೊಂದಲಕ್ಕೆ ಒಳಗಾದರು.

ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್‌ಗಳನ್ನು ಡಿಪೊಗಳಿಗೆ ಕಳುಹಿಸಲಾಯಿತು. ಬಸ್‌ ಕಾಯ್ದುಕೊಂಡು ಮಕ್ಕಳ ಸಮೇತ ಹಲವಾರು ಪ್ರಯಾಣಿಕರು ಮಧ್ಯಾಹ್ನದವರೆಗೂ ನಿಲ್ದಾಣದಲ್ಲಿಯೇ ಕುಳಿತಿದ್ದರು.

ಬಾಗಲಕೋಟೆಯಿಂದ ಮುಂಡಗೋಡಕ್ಕೆ ಹೋಗಲು ಹುಬ್ಬಳ್ಳಿಗೆ ಬಂದಿದ್ದ ದಂಪತಿ, ಮುಂಡಗೋಡಕ್ಕೂ, ಮರಳಿ ಬಾಗಲಕೋಟೆಗೂ ಬಸ್‌ ಇಲ್ಲದೆ ಹುಬ್ಬಳ್ಳಿ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದರು. ಇದೇ ರೀತಿ ಹಲವರು ಬೇರೆ ಊರುಗಳಲ್ಲಿ ತೆರಳು ಕಾದು ಕುಳಿತಿದ್ದರು.

ಆರಂಭದಲ್ಲಿ ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಬಿಆರ್‌‌ಟಿಎಸ್‌ ಬಸ್‌ಗಳ ಸಂಚಾರ ಬೆಳಿಗ್ಗೆ ಎಂದಿನಂತೆ ಇತ್ತು. ನಂತರ ಸಂಚಾರ ಸ್ಥಗಿತಗೊಳಿಸಲಾಯಿತು. ಇದರಿಂದ ಅವಳಿ ನಗರಗಳ ನಡುವೆ ಸಂಚರಿಸುವ ಪ್ರಯಾಣಿಕರು ತೊಂದರೆ ಎದುರಿಸಬೇಕಾಯಿತು.

ಸಿಟಿ ಬಸ್‌ಗಳ ಸಂಚಾರ ಕಡಿಮೆ: ಬೇರೆ ಊರುಗಳಿಗೆ ತೆರಳುತ್ತಿದ್ದ ಬಸ್‌ ಸಂಚಾರ ಸ್ಥಗಿತಗೊಂಡಿದ್ದರೂ, ಸಿಟಿ ಬಸ್‌ಗಳ ಸಂಚಾರ ಮಾತ್ರ ಎಂದಿನಂತೆ ಮಧ್ಯಾಹ್ನದವರೆಗೂ ಮುಂದುವರೆದಿತ್ತು. ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್‌ಗಳನ್ನು ಬಿಡಲಾಗುತ್ತಿತ್ತು.

‘ಬೆಳಿಗ್ಗೆ ಹುಬ್ಬಳ್ಳಿಯಿಂದ ಬೇರೆ, ಬೇರೆ ಊರುಗಳಿಗೆ ತೆರಳುವ 120 ವಾಹನಗಳು ಹೊರಟಿವೆ. ನಂತರದಲ್ಲಿ ಬಸ್ ಸಂಚರಿಸುತ್ತಿಲ್ಲ. ಚಾಲಕರು ಹಾಗೂ ನಿವಾರ್ಹಕರು ಕರ್ತವ್ಯಕ್ಕೆ ಬಂದಿಲ್ಲ. ಸರ್ಕಾರ ಮಟ್ಟದಲ್ಲಿ ಮಾತುಕತೆ ನಡೆದಿದೆ’ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT