42 ಸಾವಿರ ಆರೋಗ್ಯ ಕಾರ್ಡ್‌ ವಿತರಣೆ: ರಾಘವೇಂದ್ರ

7

42 ಸಾವಿರ ಆರೋಗ್ಯ ಕಾರ್ಡ್‌ ವಿತರಣೆ: ರಾಘವೇಂದ್ರ

Published:
Updated:
Prajavani

ಶಿವಮೊಗ್ಗ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಹಾಗೂ ಪ್ರಧಾನ ಮಂತ್ರಿಗಳ ಉಜ್ವಲ್ ಯೋಜನೆ (ಪಿಎಂಯುವೈ) ಪ್ರಯೋಜನ ಜಿಲ್ಲೆಯ ಜನರಿಗೂ ತಲುಪಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದರು.

ಆಯುಷ್ಮಾನ್ ಯೋಜನೆಗೆ ಕೇಂದ್ರ ಶೇ 60ರಷ್ಟು ಹಾಗೂ ರಾಜ್ಯ ಶೇ 40 ಹಣ ನೀಡುತ್ತಿವೆ. ಹಾಗಾಗಿ ಯೋಜನೆಯನ್ನು ಈಗ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಎಂದು ಹೆಸರಿಸಲಾಗಿದೆ. ರಾಜ್ಯ ₨ 286 ಕೋಟಿ ಕೇಂದ್ರ 782 ಕೋಟಿ ಅನುದಾನ ಮೀಸಲಿಟ್ಟಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ 42,600 ಆರೋಗ್ಯ ಕಾರ್ಡ್‌ ವಿತರಿಸಲಾಗಿದೆ. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ ಹೊಂದಿರುವವರು ಇದರ ಪ್ರಯೋಜನ ಪಡೆಯಬಹುದು. ಬಿಪಿಎಲ್ ವ್ಯಾಪ್ತಿಯಲ್ಲಿ ಇರುವವರಿಗೆ ವರ್ಷಕ್ಕೆ ₨ 5 ಲಕ್ಷ, ಎಪಿಎಲ್‌ಗೆ ₨ 1.5 ಲಕ್ಷ ನಿಗದಿ ಮಾಡಲಾಗಿದೆ. ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ವೈದ್ಯರ ಶಿಫಾರಸಿನ ಮೇಲೆ ಖಾಸಗಿ ಆಸ್ಪತ್ರೆ ದಾಖಲಾಗಬಹುದು. ತುರ್ತು ಚಿಕಿತ್ಸೆಗಳಿಗೆ ನೇರವಾಗಿ ಖಾಸಗಿ ಆಸ್ಪತ್ರೆಯ ಪ್ರಯೋಜನ ಪಡೆಯಬಹುದು ಎಂದರು.

ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ ಅಂಚೆ ಮೂಲಕ ಆರೋಗ್ಯ ಕಾರ್ಡ್‌ ತಲುಪಿಸಲಾಗುತ್ತಿದೆ. ತಾಲ್ಲೂಕು ವ್ಯಾಪ್ತಿಯ ಜನರು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ನಗರ ಪ್ರದೇಶದ ನಾಗರಿಕರು ಕರ್ನಾಟಕ (ಶಿವಮೊಗ್ಗ) ಒನ್ ಮೂಲಕ ಆರೋಗ್ಯ ಕಾರ್ಡ್‌ ಪಡೆಯಬಹುದು. ಇದು ಸಾಮಾಜಿಕ, ಆರ್ಥಿಕ, ಜಾತಿ ಗಣತಿ 2011ರ ಪ್ರಕಾರ ಕುಟುಂಬದ ಮುಖ್ಯಸ್ಥರಿಗೆ ತಲುಪುತ್ತದೆ. ತಲುಪದೇ ಇರುವವರು ನೇರವಾಗಿ ಹೋಗಿ ಆರೋಗ್ಯ ಕಾರ್ಡ್‌ ಪಡೆಯಬಹುದು. ಜಿಲ್ಲೆಯಲ್ಲಿ ಸುಮಾರು 1.60 ಲಕ್ಷ ಕಾರ್ಡ್‌ ವಿತರಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಬಯಸಿ 42,533 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವರಲ್ಲಿ 33,027 ಜನರಿಗೆ ಸಂಪರ್ಕ ಕಲ್ಪಿಸಲಾಗಿದೆ. 9 ಸಾವಿರ ಜನರಿಗೆ ಶೀಘ್ರದಲ್ಲೇ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ರುದ್ರೇಗೌಡ್ರು, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌. ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಅರುಣ್, ಮುಖಂಡರಾದ ಎಚ್.ಸಿ. ಬಸವರಾಜಪ್ಪ, ಮಧುಸೂಧನ್, ಸಿ.ಎಚ್. ಮಾಲತೇಶ್, ಅಶೋಕ್ ಪೈ, ರತ್ನಾಕರ ಶೆಣೈ, ಮರಿಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !