ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಸದರ ಕಣ್ಣಲ್ಲಿ ಅಭಿವೃದ್ಧಿ ನೀಲನಕ್ಷೆ:ಭವಿಷ್ಯದ ಕನಸು ಬಿಚ್ಚಿಟ್ಟ ರಾಘವೇಂದ್ರ

ಗೆಲುವಿನ ಲೆಕ್ಕಾಚಾರ
Last Updated 24 ಮೇ 2019, 19:45 IST
ಅಕ್ಷರ ಗಾತ್ರ

ಶಿವಮೊಗ್ಗ:ಸಾರೆಕೊಪ್ಪ ಬಂಗಾರಪ್ಪ ಹೊರತುಪಡಿಸಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಮೂರನೇ ಬಾರಿ ಗೆಲುವು ಸಾಧಿಸಿದವರು ಬಿಜೆಪಿಯ ಬಿ.ವೈ.ರಾಘವೇಂದ್ರ.

1996, 1999, 2004 ಹಾಗೂ 2005 (ಉಪ ಚುನಾವಣೆ)ರಲ್ಲಿ ಲೋಕಸಭೆಗೆ ಆಯ್ಕೆಯಾಗುವ ಮೂಲಕ ಬಂಗಾರಪ್ಪ ಅವರು ಶಿವಮೊಗ್ಗ ಲೋಕಸಭಾ ಇತಿಹಾಸದಲ್ಲಿ ಹೆಚ್ಚುಬಾರಿ ಆಯ್ಕೆಯಾದ ದಾಖಲೆ ಹೊಂದಿದ್ದಾರೆ. ರಾಘವೇಂದ್ರ ಅವರು 2009, 2018 (ಉಪ ಚುನಾವಣೆ) ಹಾಗೂ ಈ ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ತಂದೆ ಯಡಿಯೂರಪ್ಪ ಅವರ ನೆರಳಲ್ಲೇ ರಾಜಕೀಯ ಆರಂಭಿಸಿದ ರಾಘವೇಂದ್ರ ಮೊದಲ ಬಾರಿ 2009ರಲ್ಲಿ ಬಂಗಾರಪ್ಪ ಅವರ ವಿರುದ್ಧ ಕಣಕ್ಕೆ ಇಳಿದಿದ್ದರು. ಮೊದಲ ಪ್ರಯತ್ನದಲ್ಲೇ ಲೋಕಸಭೆಯನ್ನೂ ಪ್ರವೇಶಿಸಿದ್ದರು. 2014ರ ಚುನಾವಣೆಯಲ್ಲಿ ತಂದಗೆ ಕ್ಷೇತ್ರ ಬಿಟ್ಟುಕೊಟ್ಟು ತಂದೆಯಿಂದ ತೆರವಾದ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದರು. ತಂದೆ 2018ರಲ್ಲಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಲ್ಪ ಅವಧಿಗೆ ನಡೆದ ಉಪ ಚುನಾವಣೆಯಲ್ಲೂ ವಿಜಯ ಪಾತಾಕೆ ಹಾರಿಸಿದ್ದರು. ಈಗ ಮತ್ತೆ ಲೋಕಸಭೆ ಪ್ರವೇಶಿಸಿದ್ದಾರೆ.

ಈಗಾಗಲೇ ಐದೂವರೆ ವರ್ಷ ಸಂಸದರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ಅವರು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೇ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಹಲವು ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಈಗ ಮತ್ತೆಗೆಲುವು ಸಾಧಿಸಿರುವ ಅವರು ತಮ್ಮ ಮನದಾಳವನ್ನು ‘ಪ್ರಜಾವಾಣಿ’ ಎದುರು ಬಿಚ್ಚಿಟ್ಟಿದ್ದಾರೆ.

* ಇಷ್ಟೊಂದು ಅಂತರದ ಗೆಲುವಿನ ನಿರೀಕ್ಷೆ ಇತ್ತಾ?

– ಹೌದು, ಎರಡು ಲಕ್ಷ ಮತಗಳ ಲೀಡ್‌ ಸಿಗಬಹುದು ಎಂಬ ನಂಬಿಕೆ ಇತ್ತು. ಅದಕ್ಕಿಂತಲೂ ಅಧಿಕ ಮತಗಳು ಸಿಕ್ಕಿವೆ. ಫಲಿತಾಂಶ ಅತ್ಯಂತ ಖುಷಿ ನೀಡಿದೆ.

* ಉಪ ಚುನಾವಣೆ ನಡೆದು 5 ತಿಂಗಳಿಗೇ2 ಲಕ್ಷ ಮತಗಳ ಹೆಚ್ಚಳ ಹೇಗೆ?

– ಉಪ ಚುನಾವಣೆ ಅನಿರೀಕ್ಷಿತ. ರಾಜಕಾರಣಿಗಳಂತೆ ಮತದಾರರೂ ನಿರಾಸಕ್ತಿ ಹೊಂದಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು. ದೇಶದ ಭದ್ರತೆಗೆ ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಬೇಕು ಎಂಬ ಅಭಿಲಾಷೆ ಪ್ರತಿಯೊಬ್ಬ ಮತದಾರರಲ್ಲೂ ಇತ್ತು. ಜನರು ಸ್ವಯಂ ಇಚ್ಚೆಯಿಂದ ಬಂದು ಮತ ಹಾಕಿದರು. ಇದರಿಂದ ಅಧಿಕ ಮತಗಳಿಕೆ ಸಾಧ್ಯವಾಗಿದೆ. ಉಪ ಚುನಾವಣೆಯಲ್ಲಿ ಗೆದ್ದ ಮೇಲೆ ಅಲ್ಪ ಅವಧಿ ಇದ್ದರೂ ಐದು ವರ್ಷ ಮಾಡುವಷ್ಟು ಕೆಲಸ ಮಾಡಿದೆ. ಜನರ ನಂಬಿಕೆ ಉಳಿಸಿಕೊಂಡೆ. ಅದಕ್ಕಾಗಿ ಮತ್ತೊಮ್ಮೆ ಒಲವು ತೋರಿದ್ದಾರೆ.

* ನೀವು ಗುರುತಿಸಿದ ಮೈತ್ರಿ ದೌರ್ಬಲ್ಯಗಳೇನು?

–2014 ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದವು. ನಂತರ ಎರಡೂ ಪಕ್ಷಗಳು ಅಧಿಕಾರಕ್ಕಾಗಿ ಅಪವಿತ್ರ ಮೈತ್ರಿ ಮಾಡಿಕೊಂಡವು. ಮೈತ್ರಿ ಮಾಡಿಕೊಂಡ ನಂತರವೂ ಮುಖಂಡರ ಮಧ್ಯೆ, ಕಾರ್ಯಕರ್ತರ ಮಧ್ಯೆ ಸಹಮತ ಮೂಡಲಿಲ್ಲ. ಪರಸ್ಪರ ಬೈದುಕೊಂಡೆ ತಿರುಗಾಡಿದರು. ಜನರಿಗೂ ಈ ನಾಟಕ ಸಾಕು ಎನಿಸಿರಬಹುದು.

* ನಿಮ್ಮ ಶ್ರಮಕ್ಕಿಂತ ಮೋದಿ ಅಲೆಯನ್ನೇ ನೆಚ್ಚಿಕೊಂಡಿರಲ್ಲ?

–ಎಲ್ಲ ಅಂಶಗಳೂ ಸೇರಿದ ಫಲವೇ ಇಷ್ಟೊಂದು ಅಂತರದ ಗೆಲುವು. ಒಂದು ಚಕ್ರ ಸುಗಮವಾಗಿ ತಿರುಗಲು ಎಲ್ಲ ಪೋಲ್ಸ್‌ಗಳೂ ಸುಸ್ಥಿತಿಯಲ್ಲಿ ಇರಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮಾಡಿದ ಸಾಧನೆ. ಬಿಜೆಪಿ ಸರ್ಕಾರದ ಯೋಜನೆಗಳು, ಐದು ವರ್ಷ ಕೇಂದ್ರ ಸರ್ಕಾರ ನಡೆಸಿದ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ. ಮೋದಿ ಅವರ ವರ್ಚಸ್ಸು, ರಾಷ್ಟ್ರಪ್ರೇಮ, ದೇಶದ ಭದ್ರತೆ ಎಲ್ಲ ವಿಚಾರಗಳೂ ಸೇರಿಈ ಫಲಿತಾಂಶ.

* 5 ವರ್ಷಗಳಲ್ಲಿ ಎಲ್ಲ ಸ್ಥಳೀಯ ಸಮಸ್ಯೆಗಳ ನಿವಾರಣೆ ಸಾಧ್ಯವೇ?

– ಈಗಾಗಲೇ ನೀರಾವರಿ ಯೋಜನೆಗಳು, ತುಮರಿ ಸೇತುವೆ ನಿರ್ಮಾಣ, ಹೊಸ ರೈಲು ಮಾರ್ಗಗಳು, ಹೊಸ ರೈಲುಗಳು, ಹಲವು ಹೆದ್ದಾರಿಗಳ ವಿಸ್ತರಣೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. 6 ತಿಂಗಳ ಒಳಗೆ ಸಾಕಷ್ಟು ಪ್ರಗತಿ ಸಾಧಿಸಲಾಗುವುದು.

* ಕ್ಷೇತ್ರದ ಅಭಿವೃದ್ಧಿಯ ನಿಮ್ಮ ಕನಸು, ಗುರುಗಳು ಏನು?

– ಶರಾವತಿ ಹಿನ್ನೀರು ಬಳಸಿಕೊಂಡು ಬೋಟಿಂಗ್ ಹೌಸ್‌ಗಳಿಗೆ ಅವಕಾಶ ಕಲ್ಪಿಸಬೇಕಿದೆ. ಜೋಗಜಲಪಾತ ಅಭಿವೃದ್ಧಿ, ಸಿಂಹಧಾಮ, ಆನೆ ಬಿಡಾರ, ಪ್ರಮುಖ ದೇವಾಲಯಗಳು ಎಲ್ಲವನ್ನೂ ಸೇರಿ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಗುರಿ ಇದೆ. ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೂ ಆದ್ಯತೆ ನೀಡಲಾಗುವುದು. ನನೆಗುದಿಗೆ ಬಿದ್ದಿರುವ ವಿಮಾನ ಇಲ್ದಾಣ ಪೂರ್ಣಗೊಳಿಸುವುದು. ವಿಐಎಸ್‌ಎಲ್‌ ಪುನಃಶ್ಚೇತನಕ್ಕೆ ತಕ್ಷಣ ಶ್ರಮ ಹಾಕಲಾಗುವುದು.

* ಕೇಂದ್ರ ಸಚಿವರಾಗುವ ಯೋಗ ಒಲಿಯಲಿದೆಯೇ?

–ಆ ಕುರಿತು ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಭಾರಿ ಬಹುಮತದಿಂದ ಜನರು ಆಸೀರ್ವಾದ ಮಾಡಿರುವುದೇ ಅತ್ಯಂತ ಸಂತಸ ತಂದಿದೆ. ಕೇಂದ್ರದ ವರಿಷ್ಠರು ನೀಡಿದಸೂಚನೆ ಪಾಲಿಸುವುದಷ್ಟೇನನ್ನ ಕೆಲಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT