ಟಿಕೆಟ್ ಖಚಿತ; ದಾಖಲೆಯ ಗೆಲುವು ನಿರೀಕ್ಷೆ

7
ಲೋಕಸಭಾ ಚುನಾವಣೆಗೆ ಸಿದ್ಧ: ಮಾಜಿ ಶಾಸಕ ಬಿ.ವೈ. ರಾಘವೇಂದ್ರ ಮಾಹಿತಿ

ಟಿಕೆಟ್ ಖಚಿತ; ದಾಖಲೆಯ ಗೆಲುವು ನಿರೀಕ್ಷೆ

Published:
Updated:
Deccan Herald

ಶಿವಮೊಗ್ಗ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಂದ ತಮಗೆ ಟಿಕೆಟ್ ದೊರೆಯುವ ವಿಶ್ವಾಸವಿದೆ. ದಾಖಲೆಯ ಜಯವೂ ಲಭಿಸುತ್ತದೆ ಎಂದು ಮಾಜಿ ಶಾಸಕ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆ ಅಥವಾ ಮುಂದಿನ ಚುನಾವಣೆ ಎರಡಕ್ಕೂ ಸಿದ್ದರಿದ್ದೇವೆ. ಟಿಕೆಟ್ ನೀಡುವಂತೆ ವರಿಷ್ಠರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಟಿಕೆಟ್ ನೀಡುವುದು ವರಿಷ್ಠರ ನಿರ್ಧಾರ. ತಮಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇದೆ. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದೆ. 6 ಶಾಸಕರು ಇದ್ದಾರೆ. ಇದು ಗೆಲುವಿಗೆ ಸಹಕಾರಿಯಾಗುತ್ತದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ಲೇಷಿಸಿದರು.

ಸೋಲಿನಿಂದ ಕಂಗೆಟ್ಟ ಕಾಂಗ್ರೆಸ್: ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜಿಲ್ಲಾ ಕಾಂಗ್ರೆಸ್ ಮುಖಂಡರು ಹತಾಶೆಗೆ ಒಳಗಾಗಿದ್ದಾರೆ. ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ರಾಘವೇಂದ್ರ ದೂರಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ತಮ್ಮ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ. ಬಿಜೆಪಿ ಅಧಿಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಆರೋಪ ನಿರಾಧಾರ ಪ್ರತಿಕ್ರಿಯೆ ನೀಡಿದರು.

ಯಡಿಯೂರಪ್ಪ ಮತ್ತು ತಾವು ಸಂಸತ್‌ ಸದಸ್ಯರಾಗಿದ್ದ ಅವಧಿಯಲ್ಲಿ ಕೇಂದ್ರದ ಹಲವು ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನಗೊಂಡಿವೆ. ರಸ್ತೆ, ಸೇತುವೆ, ರೈಲು, ವಿದ್ಯುತ್ ಸೇರದಿಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿಯಾಗಿದೆ ಎಂದು ವಿವರ ನೀಡಿದರು.

ತುಮರಿ ಸೇತುವೆ ದೊಡ್ಡ ಯೋಜನೆ. ಈ ಯೋಜನೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಹಕಾರ ನೀಡಿಲ್ಲ. ಅನುದಾನ ನೀಡಲಿಲ್ಲ. ₨ 603 ಕೋಟಿ ಯೋಜನೆಯನ್ನು ಈಗ ₨ 436 ಕೋಟಿಗೆ ಇಳಿಸಲಾಗಿದೆ. 16 ಅಡಿ ಅಗಲದ ಬದಲು 12 ಅಡಿಗೆ ಸಮೀತಗೊಳಿಸಲಾಗಿದೆ. ತಮರಿ ಸೇತುವೆವರೆಗೂ ರಾಷ್ಟ್ರೀಯ ಹೆದ್ದಾರಿ ವಿಸ್ತರಿಸಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಜಿಲ್ಲೆಗೆ ಯಾವುದೇ ಹೊಸ ರೈಲ್ವೆ ಯೋಜನೆಗಳು ದೊರೆತಿಲ್ಲ ಎಂಬ ಕಾಂಗ್ರೆಸ್ ಹೇಳಿಕೆಯೂ ಸುಳ್ಳು. ಹತ್ತು ಹಲವು ರೈಲ್ವೆ ಯೋಜನೆಗಳು ಸಾಕಾರಗೊಂಡಿವೆ. ಹಲವು ಯೋಜನೆಗಳು ಸರ್ವೆ, ಭೂಸ್ವಾಧೀನ ಹಂತದಲ್ಲಿವೆ. ವಿಐಎಸ್ಎಲ್ ಪುನಶ್ಚೇನತಕ್ಕಾಗಿ ಶ್ರಮಿಸಲಾಗಿದೆ. ₨ 6 ಸಾವಿರ ಕೋಟಿ ವೆಚ್ಚದಲ್ಲಿ ವಿಐಎಸ್ಎಲ್ ಹೊಸತನ ಪಡೆಯಲಿದೆ. ಮತ್ತೆ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಅಡಿಕೆ ಬೆಳೆಗೆ ಮರಣ ಶಾಸನ ರೂಪಿಸಿದ್ದೇ ಕಾಂಗ್ರೆಸ್ಸಿಗರು. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದೇ ಯುಪಿಎ ಸರ್ಕಾರ. ಈಗ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಜಿಲ್ಲಾ ಘಟಕದ ಅಧ್ಯಕ್ಷರ ಬದಲಾವಣೆಗೆ ಕೂಗಿದೆ ತಮ್ಮ ಪಕ್ಷದೊಳಗೆ ಬೆಟ್ಟದಷ್ಟು ಸಮಸ್ಯೆ ಇಟ್ಟುಕೊಂಡು ಹತಾಶರಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು, ಪಾಲಿಕೆ ಸದಸ್ಯರಾದ ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ಅನಿತಾ ರವಿಶಂಕರ್, ಮುಖಂಡರಾದ ಬಿಳಕಿ ಕೃಷ್ಣಮೂರ್ತಿ, ಎನ್.ಜೆ. ರಾಜಶೇಖರ್, ಎಚ್.ಸಿ. ಬಸವರಾಜಪ್ಪ, ಮಧುಸೂದನ್, ರತ್ನಾಕರ ಶೆಣೈ, , ಮಾಲತೇಶ್, ಕೆ.ವಿ. ಅಣ್ಣಪ್ಪ, ಅಶೋಕ್ ಪೈ, ಮಹೇಂದ್ರನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !