ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಯ ಪ್ರಾಯೋಗಿಕ ಅನುಷ್ಠಾನ: ಶಿವಶಂಕರ ರೆಡ್ಡಿ ಭರವಸೆ

ಸಚಿವ ಸಂಪುಟ ಉಪ ಸಮಿತಿಯಿಂದ ಜಿಲ್ಲೆಯ ಬರ ಪರಿಸ್ಥಿತಿ ಪರಿಶೀಲನೆ
Last Updated 10 ಜನವರಿ 2019, 12:46 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಕೆರೆ ತುಂಬಿಸುವ ಯೋಜನೆಗಳು ಚಾಲ್ತಿಯಲ್ಲಿ ಇರುವ ಕಡೆ ಹನಿ ನೀರಾವರಿ, ತುಂತುರು ನೀರಾವರಿಯಂತಹ ಮಿತವ್ಯಯಿ ಯೋಜನೆಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಭರವಸೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಚಿವ ಸಂಪುಟ ಉಪ ಸಮಿತಿಯು ಹಮ್ಮಿಕೊಂಡಿದ್ದ ಬರ ನಿರ್ವಹಣೆ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬರ ನಿರ್ವಹಣೆಗಾಗಿ ಪ್ರತಿ ತಾಲ್ಲೂಕಿಗೆ ₹50 ಲಕ್ಷ ಬಿಡುಗಡೆ ಆಗಿದೆ. ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯ ಮೂರು ತಾಲ್ಲೂಕುಗಳು ಬರ ಪೀಡಿತ ಎಂದು ಘೋಷಣೆ ಆಗಿದ್ದು, ಹಿಂಗಾರು ಬೆಳೆನಷ್ಟದ ಸರ್ವೆ ಕಾರ್ಯವು ಈ ವಾರದಲ್ಲಿ ಪೂರ್ಣಗೊಳ್ಳಲಿದೆ. ಇಲ್ಲಿನ ಬರ ಪರಿಸ್ಥಿತಿಯ ಅಧ್ಯಯನ ಮಾಡಿ ಸರ್ಕಾರಕ್ಕೆ ವಸ್ತುನಿಷ್ಠ ವರದಿ ನೀಡಲಾಗುವುದು. ರೈತರ ಮಾಹಿತಿಯನ್ನು ನೇರ ಭೂಮಿ ತಂತ್ರಾಂಶಕ್ಕೆ ಲಿಂಕ್‌ ಮಾಡಿ, ಅವರ ಬ್ಯಾಂಕ್‌ ಖಾತೆಗೆ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಸದ ಡಿ.ಕೆ. ಸುರೇಶ್‌ ಮಾತನಾಡಿ ‘ಜಿಲ್ಲೆಯು ಕಳೆದ 10 ವರ್ಷದಲ್ಲಿ 7 ವರ್ಷ ಬರಕ್ಕೆ ತುತ್ತಾಗಿದೆ. ಸಾವಿರಾರು ಹೆಕ್ಟೇರ್‌ ಭೂಮಿ ಪಾಳು ಬೀಳುತ್ತಿದೆ. ಕೆಲವು ಕಡೆ ಕೆರೆ ತುಂಬಿಸುವ ಯೋಜನೆಗಳು ಪ್ರಗತಿಯಲ್ಲಿವೆ. ಅದಕ್ಕೆ ಪೂರಕವಾಗಿ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಮನವಿ ಮಾಡಿದರು.

ವಿಮೆ ಪರಿಹಾರ ಶೀಘ್ರ ಪಾವತಿ: ಕಳೆದ ಸಾಲಿನ ಹಿಂಗಾರು ಫಸಲ್‌ ಭಿಮಾ ಯೋಜನೆಯ ಪರಿಹಾರ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೃಷಿ ಸಚಿವರು ಭರವಸೆ ನೀಡಿದರು. ಈ ಸಾಲಿನಿಂದ ವಿಮೆ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಲಾಗಿದ್ದು, ಸ್ಥಳೀಯ ಏಜೆನ್ಸಿಗಳಿಗೂ ಗುತ್ತಿಗೆ ನೀಡಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಒಬ್ಬ ವಿಮೆ ಪ್ರತಿನಿಧಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

‘ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಉಪಟಳ ವಿಪರೀತವಾಗಿದೆ. ಇದರಿಂದ ಆಗುತ್ತಿರುವ ಬೆಳೆ ನಷ್ಟವನ್ನೂ ವಿಮೆ ವ್ಯಾಪ್ತಿಗೆ ತರಬೇಕು. ಪರಿಹಾರಕ್ಕೆ ಇರುವ ನಿಯಮಗಳನ್ನು ಸರಳೀಕರಣ ಗೊಳಿಸಬೇಕು. ಜಿಲ್ಲೆಯಲ್ಲಿ ಕೇವಲ ಶೇ 2–3 ರೈತರು ಮಾತ್ರ ವಿಮೆ ಮಾಡಿಸಿದ್ದು, ಈ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು’ ಎಂದು ಸುರೇಶ್‌ ಕೋರಿದರು.

ಹಸಿರು ಮೇವು ಬೆಳೆಸಿ: ‘ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಕನಿಷ್ಠ 50 ಹೆಕ್ಟೇರ್ ಪ್ರದೇಶದಲ್ಲಿ ಹಸಿರು ಮೇವು ಬೆಳೆಸಬೇಕು. ನೀರಾವರಿ ಸೌಕರ್ಯ ಹೊಂದಿರುವ ರೈತರನ್ನು ಗುರುತಿಸಿ ಅವರಿಗೆ ಬೀಜ ನೀಡಿ, ಮೇವು ವಾಪಸ್ ಕೊಳ್ಳುವುದಾಗಿ ಒಪ್ಪಂದ ಮಾಡಿಕೊಳ್ಳಿ. ಈ ತಿಂಗಳ ಒಳಗೇ ಈ ಕೆಲಸ ಮಾಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನರೇಗಾ: ಬರದ ಸಂದರ್ಭದಲ್ಲಿ ನರೇಗಾ ಯೋಜನೆಯ ಸದ್ಬಳಕೆ ಬಗ್ಗೆ ಮಾಹಿತಿ ನೀಡಲು ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಇದೇ ತಿಂಗಳಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಶಿವಕುಮಾರ್ ಸೂಚಿಸಿದರು. ರಾಮನಗರ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿ ಚುರುಕಾಗಬೇಕು. ಚೆಕ್‌ಡ್ಯಾಮ್‌ಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

‘ಕಳೆದ ಮೂರು ಸಾಲಿನಲ್ಲಿ ಕೊಳವೆಬಾವಿ ಕೊರೆದವರಿಗೆ ಬಿಲ್‌ ಪಾವತಿಸಲು ಜಿ.ಪಂ. ಹಿಂದೇಟು ಹಾಕುತ್ತಿದ್ದು, ಇದರಿಂದ ಹೊಸ ಬೋರ್‌ಬೆಲ್‌ಗಳನ್ನು ಕೊರೆಯಲು ಏಜೆನ್ಸಿಗಳು ಮುಂದೆ ಬರುತ್ತಿಲ್ಲ’ ಎಂದು ಶಾಸಕ ಎ.ಮಂಜುನಾಥ್ ಸಭೆಯ ಗಮನಕ್ಕೆ ತಂದರು.

ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌. ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್. ರವಿ, ಅ. ದೇವೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್. ನಾಗರಾಜು, ಉಪಾಧ್ಯಕ್ಷೆ ಜಿ.ಡಿ. ವೀಣಾಕುಮಾರಿ, ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್‌, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಜಯ್‌ ಸೇಠ್‌, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌, ಎಸ್ಪಿ ಬಿ. ರಮೇಶ್, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡರು.

**
ಜಿಲ್ಲಾ ಕೇಂದ್ರ ಬಿಟ್ಟರೆ ಅಮಾನತು
ಜಿಲ್ಲಾಧಿಕಾರಿ ಸಹಿತ ಪ್ರತಿಯೊಬ್ಬರು ಜಿಲ್ಲಾ ಕೇಂದ್ರದಲ್ಲಿ ವಾಸವಿರಬೇಕು. ಹೊರಗಿನಿಂದ ಬಂದು ಹೋಗುವವರನ್ನು ಅಮಾನತು ಮಾಡಲಾಗುವುದು ಎಂದು ಶಿವಕುಮಾರ್ ಎಚ್ಚರಿಸಿದರು. ‘ಎಲ್ಲ ಅಧಿಕಾರಿಗಳನ್ನು ಒಳಗೊಂಡಂತೆ ಒಂದು ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ, ಅಲ್ಲಿ ಪ್ರತಿ ಅಧಿಕಾರಿಯೂ ತನ್ನ ನಿತ್ಯದ ಕಾರ್ಯಕ್ರಮ, ಪ್ರವಾಸಗಳ ಮಾಹಿತಿ ಹಂಚಿಕೊಳ್ಳಬೇಕು’ಎಂದು ತಾಕೀತು ಮಾಡಿದರು.

**
ಪರಿಹಾರದ ಮೊತ್ತ ಹೆಚ್ಚಿಸಿ
‘ರೈತರಿಗೆ ಪ್ರತಿ ಗುಂಟೆ ಭೂಮಿಗೆ ₹60–70 ರಂತೆ ಪರಿಹಾರ ನೀಡುತ್ತಿದ್ದು, ಈ ಮೊತ್ತವನ್ನು ಹೆಚ್ಚಿಸಿ’ ಎಂದು ರೈತ ಮುಖಂಡ ಸಿ. ಪುಟ್ಟಸ್ವಾಮಿ ಆಗ್ರಹಿಸಿದರು. ‘ಬೀಳು ಭೂಮಿ ಹೆಚ್ಚಿರುವ ಕಡೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ರೈತರ ಪಹಣಿಯೊಂದಿಗೆ ಅವರ ಆಧಾರ್‌, ಮೊಬೈಲ್ ಸಂಖ್ಯೆಯನ್ನು ಜೋಡಿಸಬೇಕು. ಮಾವು ಬೆಳೆಯನ್ನು ಬರ ಪರಿಹಾರದ ವ್ಯಾಪ್ತಿಗೆ ತರಬೇಕು’ ಎಂದು ಕೋರಿದರು.

‘ಎರಡು ವರ್ಷದ ಹಿಂದೆ ಸರ್ಕಾರ ನೀಡಿದ ಬರ ಪರಿಹಾರವು ಜಿಲ್ಲೆಯ ಶೇ 50ರಷ್ಟು ರೈತರಿಗೆ ತಲುಪಿಲ್ಲ. ಈ ವರ್ಷ ಹಾಗಾಗದಂತೆ ನೋಡಿಕೊಳ್ಳಿ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣಸ್ವಾಮಿ ಮನವಿ ಮಾಡಿದರು.

**
ಜಾತ್ರೆಗಳ ಮೇಲೆ ಸರ್ಕಾರದ ಕಣ್ಣು
ಹಬ್ಬ–ಹರಿದಿನ, ಜಾತ್ರೆಗಳಲ್ಲಿ ನಡೆಯುವ ಸಾಮೂಹಿಕ ಭೋಜನ, ಅನ್ನ ಸಂತರ್ಪಣೆಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಬೇಕು. ಶುಚಿತ್ವ ಕಾಪಾಡಿಕೊಳ್ಳುವಂತೆ ಮುಂಚೆಯೇ ನೋಟಿಸ್ ನೀಡಬೇಕು ಎಂದು ಸಚಿವ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

‘ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ. ಗಳಿಗೆ ನೋಟಿಸ್ ಜಾರಿ ಮಾಡಿ ನಿಗಾ ವಹಿಸುವಂತೆ ಸೂಚಿಸಿ. 108 ಆಂಬುಲೆನ್ಸ್‌, ಆಸ್ಪತ್ರೆಗಳಲ್ಲಿನ ವ್ಯವಸ್ಥೆಗಳನ್ನು ಆಗಾಗ್ಗೆ ಪರಿಶೀಲಿಸಿ’ ಎಂದು ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿಗೆ ತಿಳಿಸಿದರು.

**
ಶಾಸಕಿ ಅನಿತಾ ಗೈರು
ತಮ್ಮ ಕ್ಷೇತ್ರದಲ್ಲಿ ನಡೆದ ಬರ ಪರಿಶೀಲನೆ ಮತ್ತು ಪ್ರಗತಿ ಸಭೆಗೆ ಶಾಸಕಿ ಅನಿತಾ ಕುಮಾರಸ್ವಾಮಿ ಗೈರಾಗಿದ್ದರು. ಸಚಿವರ ದಂಡೇ ಜಿಲ್ಲೆಗೆ ಬಂದರೂ ಶಾಸಕಿ ಮಾತ್ರ ಬರಲಿಲ್ಲ.

ಅಂಕಿ–ಅಂಶ

31,506 ಹೆಕ್ಟೇರ್ – ಜಿಲ್ಲೆಯಲ್ಲಿ ಬೆಳೆಹಾನಿಗೀಡಾದ ಪ್ರದೇಶ

₹21.5 ಕೋಟಿ – ಜಿಲ್ಲಾಡಳಿತವು ಸರ್ಕಾರಕ್ಕೆ ಕೋರಿರುವ ಪರಿಹಾರದ ಮೊತ್ತ

**
ಜಿಲ್ಲೆಯ ಜಾನುವಾರುಗಳಿಗೆ ಬೇಕಾದಷ್ಟು ಹಸಿರು ಮೇವನ್ನು ಇಲ್ಲಿಯೇ ಬೆಳೆಯಬೇಕು. ಅಧಿಕಾರಿಗಳು ಹೊರಗಿನಿಂದ ಹುಲ್ಲು ತಂದು ರಾಮ–ಕೃಷ್ಣನ ಲೆಕ್ಕ ಕೊಡಬಾರದು
– ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ

**
ಜನರು ನೀರನ್ನು ತುಪ್ಪದಂತೆ ಬಳಸಬೇಕು. ಕಾಲುವೆಗಳ ಮೂಲಕ ನೀರು ಹರಿಸಿ ಕೃಷಿ ಮಾಡುವ ಪದ್ಧತಿ ಬದಲಾಗಬೇಕು
– ಡಿ.ಸಿ. ತಮ್ಮಣ್ಣ, ಸಾರಿಗೆ ಸಚಿವ

**
ಬರ ನಿರ್ವಹಣೆಗೆ ಪ್ರತಿ ತಾಲ್ಲೂಕಿಗೆ ₹50 ಲಕ್ಷ ಈಗಾಗಲೇ ಬಿಡುಗಡೆ ಆಗಿದೆ. ಅಧಿಕಾರಿಗಳು ನೀರು–ಜಾನುವಾರುಗಳ ಮೇವಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು
– ಶಿವಶಂಕರ ರೆಡ್ಡಿ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT