ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾನಲ್‌ ದರಪಟ್ಟಿ ಪ್ರಸ್ತಾವಕ್ಕೆ ವಿರೋಧ

ಉದ್ದೇಶಿತ ವ್ಯವಸ್ಥೆ ಕೈಬಿಡಲು ಆಗ್ರಹಿಸಿ ಕೇಬಲ್‌ ಆಪರೇಟರ್‌ಗಳ ಪ್ರತಿಭಟನೆ
Last Updated 19 ಡಿಸೆಂಬರ್ 2018, 13:35 IST
ಅಕ್ಷರ ಗಾತ್ರ

ರಾಮನಗರ: ಕೇಬಲ್‌ ಮೂಲಕ ಟಿ.ವಿ. ಚಾನಲ್‌ಗಳ ಪ್ರಸಾರಕ್ಕೆ ದೂರ ಸಂಪರ್ಕ ನಿಯಂತ್ರಣ ಆಯೋಗವು (ಟ್ರಾಯ್‌) ನಿಗದಿಪಡಿಸಿರುವ ಹೊಸ ದರಪಟ್ಟಿಯನ್ನು ಕೈಬಿಡುವಂತೆ ಆಗ್ರಹಿಸಿ ರಾಮನಗರ ಜಿಲ್ಲಾ ಕೇಬಲ್ ಆಪರೇಟರ್‌ಗಳ ಒಕ್ಕೂಟದ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಮಿನಿ ವಿಧಾನಸೌಧದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡರು. ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಅನಂತಕೃಷ್ಣ ಹೇರ್ಳೆ ‘ಪ್ರಸ್ತುತ ಚಾಲ್ತಿಯಲ್ಲಿರುವ ಕೇಬಲ್‌ ವ್ಯವಸ್ಥೆಯು ಜನರಿಗೆ ಕೈಗೆಟಕುವ ದರದಲ್ಲಿದೆ. ಹಳ್ಳಿಗಳಲ್ಲಿನ ಜನರು ತಿಂಗಳಿಗೆ ₨200 ನೀಡಿ 300ಕ್ಕೂ ಹೆಚ್ಚು ಚಾನೆಲ್‌ಗಳನ್ನು ವೀಕ್ಷಿಸುತ್ತಿದ್ದಾರೆ. ಆದರೆ ಹೊಸ ದರ ಜಾರಿಗೆ ಬಂದಲ್ಲಿ ಒಂದು ಕುಟುಂಬವು ಇಷ್ಟೇ ಚಾನಲ್‌ಗಳನ್ನು ವೀಕ್ಷಿಸಲು ತಿಂಗಳಿಗೆ ₨600–700 ಪಾವತಿಸಬೇಕಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ಹೆಚ್ಚು ಹೊರೆಯಾಗಲಿದೆ’ ಎಂದರು.

‘ಈ ಹಿಂದೆ ಟಿ.ವಿ. ಪ್ರಸಾರವು ಡಿಜಿಟಲೀಕರಣಗೊಂಡ ಸಂದರ್ಭದಲ್ಲಿ ಟ್ರಾಯ್‌ ಸ್ವತಃ ದೇಶದ ನಗರ ಹಾಗೂ ಗ್ರಾಮೀಣ ಪ್ರದೇಶಗಳನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿತ್ತು. ಆದರೆ ಈ ವರ್ಗೀಕರಣಕ್ಕೆ ತಕ್ಕಂತೆ ಈಗ ದರ ನಿಗದಿ ಮಾಡದೇ ತನ್ನ ನಿಯಮವನ್ನು ತಾನೇ ಉಲ್ಲಂಘಿಸಿದೆ’ ಎಂದು ಆರೋಪಿಸಿದರು.

‘ಇದೇ 29ರಿಂದ ಟ್ರಾಯ್‌ ಈ ಹೊಸ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಿದೆ. ಇಲ್ಲಿನ ದರಗಳು ದಿಲ್ಲಿಗೂ, ಹಳ್ಳಿಯೂ ಒಂದೇ ಆಗಿವೆ. ಈ ವ್ಯವಸ್ಥೆಯು ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರವು ಕೂಡಲೇ ಮಧ್ಯ ಪ್ರವೇಶಿಸಿ ಇದಕ್ಕೆ ತಡೆಯಾಜ್ಞೆ ನೀಡಬೇಕು’ ಎಂದು ಕೋರಿದರು.

ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಚನ್ನಪಟ್ಟಣದ ಸಾಧಿಕ್, ಗೋಪಿ, ಮಾಗಡಿಯ ಮಂಜುನಾಥ್, ಕನಕಪುರದ ಆನಂದ್, ಪ್ರಮುಖರಾದ ಉಮಾಶಂಕರ್, ಸುರೇಶ್, ಜಗದೀಶ್, ಪ್ರವೀಣ್, ಚಂದ್ರೇಗೌಡ, ಸೋಮಶೇಖರ್, ಚಂದ್ರಶೇಖರ್, ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT