ಭಾನುವಾರ, ಜನವರಿ 26, 2020
28 °C

ಸಮಾಜಮುಖಿ ಕಾರ್ಯ ಕೈಗೊಳ್ಳಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೀರ್ಥಹಳ್ಳಿ: ಪರಸ್ಪರ ನಂಬಿಕೆ, ವಿಶ್ವಾಸವನ್ನು ಹೆಚ್ಚಿಸಿ ಸಮಾಜದ ಪರಿವರ್ತನೆಗೆ ಪೂರಕವಾಗಬಲ್ಲ ಕಾರ್ಯಕ್ರಮಗಳು ಹೆಚ್ಚಾಗಬೇಕು. ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮದ ಸಂಸ್ಕೃತಿಯಿಂದಾಗಿ ಸಮಾಜವೊಂದು ಸರಿದಿಕ್ಕಿನಲ್ಲಿ ಸಾಗಲು ಪ್ರೇರಣೆ ನೀಡುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಬೇಗುವಳ್ಳಿ ರುಕ್ಮಿಣಿ ಮತ್ತು ಎಚ್.ಕೆ.ರಮಾನಂದ ಅವರ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುರಸ್ಕೃತರು ಸಮಾಜದ ಏಳಿಗೆಯಲ್ಲಿ ಪಾಲ್ಗೊಂಡಾಗ ಪುರಸ್ಕಾರದ ಉದ್ಧೇಶ ಸಾರ್ಥಕವಾಗುತ್ತದೆ. ಸಾಮಾಜಿಕ ಏಳಿಗೆಗೆ ನೀಡುವ ಸಹಕಾರವನ್ನು ಸ್ಮರಿಸುವ ಜವಾಬ್ದಾರಿ ಸಮಾಜದ ಮೇಲಿದೆ. ಬೇಗುವಳ್ಳಿ ಸತೀಶ್ ಕುಟುಂಬ ಹಲವು ವರ್ಷಗಳಿಂದ ತಮ್ಮ ತಂದೆ, ತಾಯಿ ಹೆಸರಿನಲ್ಲಿ ಪುರಸ್ಕಾರ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ, ‘ಪರಿಶ್ರಮ ಇಲ್ಲದೇ ಸಾಧನೆ ಸಾಧ್ಯವಿಲ್ಲ. ಯಶಸ್ಸು ಪಡೆಯಲು ಅಡ್ಡದಾರಿಗಳಿಲ್ಲ. ಶಿಕ್ಷಣದ ಮೂಲಕ ಗುರಿ ತಲುಪಲು ಪರಿಶ್ರಮವೇ ಮಾನದಂಡವಾಗಬೇಕು. ಯುವ ಸಮುದಾಯಕ್ಕೆ ಇಂದು ಉಜ್ವಲ ಭವಿಷ್ಯವಿದೆ. ಕೇವಲ ಸರ್ಕಾರಿ ಉದ್ಯೋಗಕ್ಕೆ ಅಂಟಿಕೊಳ್ಳದೇ ಕೌಶಲವನ್ನು ವೃದ್ಧಿಸಿಕೊಂಡು ಉತ್ತಮ ಸಾಧನೆ ತೋರಲು ಯುವಜನರು ಮುಂದಾಗಬೇಕು. ಜೀವನ ಶಿಕ್ಷಣದ ಮೂಲಕ ಸ್ವಾವಲಂಬನೆ ಪಡೆಯುವಂತಾಗಬೇಕು’ ಎಂದರು.

ಶಾಸಕ ಆರಗ ಜ್ಞಾನೇಂದ್ರ, ‘ಶಿಕ್ಷಣ ಇಂದು ಯುವ ಸಮುದಾಯವನ್ನು ಯಾವ ದಿಕ್ಕಿನ ಕಡೆಗೆ ತೆಗೆದುಕೊಂಡು ಹೋಗುತ್ತಿದೆ ಎಂಬುದರ ಸೂಕ್ಷ್ಮ ಅರಿವಿರಬೇಕು. ಶಿಕ್ಷಣ ಇಂದು ಸಜ್ಜನಿಕೆ, ವಿಶಾಲ ಮನೋಭಾವ ನಿರ್ಮಾಣಮಾಡುವಲ್ಲಿ ಎಲ್ಲೋ ಸೋಲಿತ್ತಿದೆ ಎಂದು ಅನಿಸುತ್ತಿದೆ. ನೌಕರಿ ಪಡೆದವರು ಬ್ರಿಟಿಷರ ದೌಲತ್ತು ತೋರಿಸುವಂತಾಗಿದೆ. ಶಿಕ್ಷಣ ಪಡೆದವರು ಊರು ತೊರೆಯುತ್ತಿರುವುದು ಇಂದಿನ ದುರಂತವಾಗಿದೆ. ಮಕ್ಕಳಿಗೆ ಶಿಕ್ಷಣ ಏನು ಕಲಿಸುತ್ತಿದೆ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ’ ಎಂದರು.

ಉಡುಪಿ ಜಿಲ್ಲಾಧಿಕಾರಿ ಟಿ. ಜಗದೀಶ್, ‘ವಿದ್ಯಾರ್ಥಿ ವೇತನ ಪಡೆದವರು ಸಮಾಜಕ್ಕೆ ವಾಪಸ್‌ ನೀಡುವಂತಾಗಬೇಕು. ಪುಸ್ತಕ ಓದುವ ಹವ್ಯಾಸ ಜ್ಞಾನವನ್ನು ವೃದ್ಧಿಸುತ್ತದೆ. ಮೊಬೈಲ್ ಬಳಕೆ ಓದಿಗೆ ಅಡ್ಡಿಯಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರ ಬಂದು ಆತ್ಮವಿಸ್ವಾಸದಿಂದ ಗಮನ ಕೇಂದ್ರೀಕರಿಸಿದರೆ ಉತ್ತಮ ಸಾಧನೆ ತೋರಲು ಸಾಧ್ಯ’ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಈಡಿಗ ಹಾಗೂ ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಕೃತಿ ವಿಕೋಪದಿಂದ ಹಾನಿಗೆ ಒಳಗಾದ ಸಂತ್ರಸ್ತ ಕುಟುಂಬಗಳಿಗೆ, ವಿಶೇಷ ಚೇತನರಿಗೆ ಆರ್ಥಿಕ ಸಹಾಯ ನೀಡಲಾಯಿತು.

ಅಮೃತ ಹುಂಚದಕಟ್ಟೆ ಶ್ರೀನಾರಾಯಣಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಕವಲೇದುರ್ಗ ಭುವನಗಿರಿ ಮಹಾ ಸಂಸ್ಥಾನದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್, ಬೇಗುವಳ್ಳಿ ಸತೀಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು