ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ; ವಿಜಯಪುರ ಪಾಲಿಕೆ ಸದಸ್ಯರ ಆಗ್ರಹ

7
ವಿಜಯಪುರ ಮಹಾನಗರ ಪಾಲಿಕೆ ಆಸ್ತಿ ಲೀಜ್‌ ಠರಾವು ರದ್ದು; ಸಾಮಾನ್ಯ ಸಭೆಯಲ್ಲಿ ‘ಪ್ರಜಾವಾಣಿ’ ವರದಿ ಪ್ರತಿಧ್ವನಿ

ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ; ವಿಜಯಪುರ ಪಾಲಿಕೆ ಸದಸ್ಯರ ಆಗ್ರಹ

Published:
Updated:
Deccan Herald

ವಿಜಯಪುರ: ಮಹಾನಗರ ಪಾಲಿಕೆ ಒಡೆತನದ ಆಸ್ತಿಗಳನ್ನು ಮಾರಾಟ ಮಾಡಬಾರದು. ಬೇಕಾಬಿಟ್ಟಿ ಗುತ್ತಿಗೆ ನೀಡಲೂಬಾರದು. ಹಿಂದಿನ ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ನಿರ್ಧರಿಸಲಾಗಿರುವ ಎಲ್ಲಾ ಲೀಜ್‌ ಆಸ್ತಿಗಳ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಬೇಕು.

ಇಲ್ಲಿನ ಜಲನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯವಿದು.

ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಪಾಲಿಕೆ ಒಡೆತನದ ಆಸ್ತಿಗಳನ್ನು ಹಿಂದಿನ ಸಭೆಯಲ್ಲಿ ಲೀಜ್‌ಗೆ ಕೊಟ್ಟಿರುವುದಕ್ಕೆ ತಕರಾರು ತೆಗೆದರು. ಸಭೆಯಲ್ಲೇ ಹಾಜರಿದ್ದ ಆಗಿನ ಉಪ ಮೇಯರ್‌ ರಾಜೇಶ ದೇವಗಿರಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿ, ಸರ್ಕಾರದ ಸುತ್ತೋಲೆಯನ್ನು ಈ ಸಂದರ್ಭ ಪ್ರಸ್ತಾಪಿಸಿ, ಬಿಸಿ ಮುಟ್ಟಿಸಿದರು.

‘ಈ ಹಿಂದಿನ ಮೇಯರ್‌–ಉಪ ಮೇಯರ್‌ ತಾವೇ ಸೂಚಕ, ಅನುಮೋದಕರಾಗಿ ನಿಯಮಾವಳಿ ಉಲ್ಲಂಘಿಸಿದ್ದಾರೆ. ಇವರಿಬ್ಬರ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿಯ ಪರಶುರಾಮ ರಜಪೂತ, ಕಾಂಗ್ರೆಸ್‌ನ ಮೈನುದ್ದೀನ್‌ ಬೀಳಗಿ, ಸಜ್ಜಾದೆ ಪೀರಾ ಮುಶ್ರೀಫ್‌ ಸಭೆಯಲ್ಲಿ ಆಗ್ರಹಿಸಿದರು.

‘ಬಡವರಿಗೆ, ನಿರುದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ತೆಗೆದುಕೊಂಡಿದ್ದೆವು. ಎರಡು ದಶಕದಿಂದ ನಗರಸಭೆ, ಮಹಾನಗರ ಪಾಲಿಕೆಯ ಚುನಾಯಿತ ಜನಪ್ರತಿನಿಧಿಯಾಗಿರುವೆ. ಇದೂವರೆಗೂ ಸ್ವಂತಕ್ಕೆ ಒಂದಿಷ್ಟನ್ನು ಮಾಡಿಕೊಂಡಿಲ್ಲ. ಬೇಕಿದ್ದರೆ ಈ ಬಗ್ಗೆ ತನಿಖೆ ನಡೆಯಲಿ. ಉಪ ಮೇಯರ್‌ಗೆ ಯಾವ ಅಧಿಕಾರವೂ ಇರಲ್ಲ. ಎಲ್ಲವೂ ಮೇಯರ್‌ ಕೈಯಿಂದಲೇ ಚಲಾಯಿಸಲ್ಪಟ್ಟಿದೆ’ ಎಂದು ರಾಜೇಶ ದೇವಗಿರಿ ಸಮಜಾಯಿಷಿ ನೀಡಿದರು.

ದೇವಗಿರಿ ಉತ್ತರಕ್ಕೆ ಹಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ರವೀಂದ್ರ ಲೋಣಿ ‘ಹಿರಿಯ ಸದಸ್ಯರಾಗಿ ಈ ರೀತಿ ಮಾತನಾಡಬೇಡಿ. ನೀವು ಮಾಡಿರುವ ತಪ್ಪನ್ನು ಸಭೆ ಖಂಡಿಸುತ್ತದೆ. ಬೇನಾಮಿ ಆಸ್ತಿ ಮಾಡಿಕೊಂಡಿದ್ದೀರಿ’ ಎಂದು ಆರೋಪಿಸಿದರೆ; ಮೈನುದ್ದೀನ್‌ ಬೀಳಗಿ ‘ತುಡುಗರು ಯಾರ್ಯಾರು ಎಂಬುದನ್ನು ಹೆಸರು ಸಮೇತ ಮಾಧ್ಯಮಕ್ಕೆ ತಿಳಿಸಿ’ ಎಂದು ಆಯುಕ್ತರನ್ನು ಆಗ್ರಹಿಸಿದರು.

ಇದೇ ಸಂದರ್ಭ ‘ರಾಜೇಶ ಗೋಳಗುಮ್ಮಟವನ್ನು ಬರೆದು ಕೊಡಬೇಕಿತ್ರಪ್ಪಾ ?’ ಎಂದು ಮೈನು ಛೇಡಿಸಿದ್ದಕ್ಕೆ, ದೇವಗಿರಿ ‘ಯಾರ‍್ಯಾರು ಏನೇನು ? ಯಾವ್ಯಾವ ಸದಸ್ಯರ ಹಣೆಬರಹ ಏನು ? ಎಂಬುದು ಎಲ್ಲರಿಗೂ ಗೊತ್ತು ?’ ಎಂದು ತಿರುಗೇಟು ನೀಡಿದರು.

ಯಾರಪ್ಪನ ಆಸ್ತಿಯಲ್ಲ; ಆನಂದ ಗುಡುಗು

ನಗರದ ಹೃದಯಭಾಗ ಗಾಂಧಿಚೌಕ್‌ನಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿ ಪಾಲಿಕೆ ವತಿಯಿಂದ ಮಳಿಗೆ ನಿರ್ಮಿಸಿ, ಬಾಡಿಗೆ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಆನಂದ ಧುಮಾಳೆ, ಕಾಂಗ್ರೆಸ್‌ನ ಸಜ್ಜಾದೆ ಪೀರಾ ಮುಶ್ರೀಫ್‌, ಮೈನುದ್ಧೀನ್‌ ಬೀಳಗಿ ತೀವ್ರ ವಿರೋಧ ವ್ಯಕ್ತಪಡಿಸಿದರು.

111 ಜನರಿಂದ ತಲಾ ₹ 2 ಲಕ್ಷ ತುಂಬಿಸಿಕೊಂಡಿದ್ದಾರೆ. ಆದರೆ ಇಲ್ಲಿ ಕೇವಲ 13 ಮಳಿಗೆ ನಿರ್ಮಿಸಲು ಮಾತ್ರ ಅವಕಾಶವಿದೆ. ₹ 10 ಲಕ್ಷ, ₹ 15 ಲಕ್ಷ ಕೊಟ್ಟವರಿಗೆ ಎಸ್‌ಡಿಎಂಸಿ ಅಧ್ಯಕ್ಷರು ಆಗಿರುವ ಶಾಸಕರು ಹಂಚಿದ್ದಾರೆ ಎಂದು ಸಜ್ಜಾದೆ, ಮೈನು, ಧುಮಾಳೆ ದೂರಿದರು. ಇದಕ್ಕೆ ವಿಜಯಕುಮಾರ ಮಂಗಳವೇಡೆ ಕೂಡ ದನಿಗೂಡಿಸಿದರು. ನಮ್ಮ ಪಾತ್ರ ಏನು ಎಂಬುದನ್ನು ವಿವರಿಸಿ ಎಂದು ಆಯುಕ್ತರನ್ನು ಒತ್ತಾಯಿಸಿದರು.

‘ಶಾಲೆ ನನ್ನ ವಾರ್ಡ್‌ನಲ್ಲಿದೆ. ನಾನೂ ಎಸ್‌ಡಿಎಂಸಿ ಸದಸ್ಯನಿದ್ದೇನೆ. ಆದರೆ ಶಾಸಕರು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮಗೆ ತೋಚಿದಂತೆ ವರ್ತಿಸಿದ್ದಾರೆ. ಇದರಲ್ಲಿ ಅವ್ಯವಹಾರ, ಅಕ್ರಮ ನಡೆದಿದೆ’ ಎಂದು ಮೈನು ದೂರಿದ್ದಕ್ಕೆ ಪರಶುರಾಮ ರಜಪೂತ, ರಾಜೇಶ ದೇವಗಿರಿ, ಉಮೇಶ ವಂದಾಲ, ಲಕ್ಷ್ಮೀ ಕನ್ನೊಳ್ಳಿ, ರಾಹುಲ ಜಾಧವ, ಎಂ.ಎಸ್‌.ಕರಡಿ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭೆ ಗದ್ದಲದ ಗೂಡಾಯಿತು.

‘ಈ ಹಿಂದಿನ ಅವಧಿಯಲ್ಲಿ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಡಾ,ಮಕ್ಬೂಲ್‌ ಬಾಗವಾನ ಶಾಸಕರಿದ್ದ ಸಂದರ್ಭ ಅಂಗಡಿ ಮಳಿಗೆ ಹಂಚಿರುವುದಕ್ಕೆ ಆಗ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಇದೀಗ ಬಸನಗೌಡರು ಅಭಿವೃದ್ಧಿಗೆ ಮುಂದಾಗುತ್ತಿದ್ದಂತೆ ತಕರಾರು ತೆಗೆಯುತ್ತೀರಾ’ ಎಂದು ರಜಪೂತ ಆಕ್ಷೇಪ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲೆ ಆವರಣ ಯಾರಪ್ಪನ ಆಸ್ತಿಯಲ್ಲ. ಸಾರ್ವಜನಿಕರ ಸ್ವತ್ತು. ಶಾಸಕರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದ್ದರಿಂದಲೇ ಇಲ್ಲಿ ನಾವು ಧ್ವನಿ ಎತ್ತುತ್ತಿದ್ದೇವೆ. ಸೂಕ್ತ ಉತ್ತರ ದೊರಕದಿದ್ದರೆ ನ್ಯಾಯಾಲಯದ ಮೆಟ್ಟಿಲೇರುತ್ತೇವೆ’ ಎಂದು ಆನಂದ ಧುಮಾಳೆ ಈ ಸಂದರ್ಭ ಗುಡುಗಿದರು.

ಸದಸ್ಯರ ಆರೋಪ–ಪ್ರತ್ಯಾರೋಪಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಡಾ.ಔದ್ರಾಮ ‘111 ಜನರಿಂದ ತಲಾ ₨ 2 ಲಕ್ಷದಂತೆ ಹಣ ಪಡೆಯಲಾಗಿದೆ. ಬೆರಳೆಣಿಕೆ ಮಂದಿ ಮಾತ್ರ ಕೊಟ್ಟಿಲ್ಲ. ಒಟ್ಟು ₹ 2.11 ಕೋಟಿ ಹಣ ಸಂಗ್ರಹವಾಗಿದೆ. ಇದರಲ್ಲಿ ಸಾಕಷ್ಟು ಹಣ ಖರ್ಚಾಗಿದ್ದು, ಇದೀಗ ಪಾಲಿಕೆ ಖಾತೆಯಲ್ಲಿ ಕೇವಲ ₹ 53 ಲಕ್ಷವಿದೆ. ಪಾಲಿಕೆ ವತಿಯಿಂದ ಎಸ್‌ಡಿಎಂಸಿ ಜತೆ ಮಾಡಿಕೊಂಡಿರುವ ಒಪ್ಪಂದದಂತೆ ನಿಗದಿತ ಸ್ಥಳದಲ್ಲಿ 50 ಅಂಗಡಿ ಕಟ್ಟುವ ಆಲೋಚನೆಯಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘ಶಾಸಕ, ಪಾಲಿಕೆ ಹೊಣೆಗಾರಿಕೆಯಲ್ಲಿ ನಡೆದಿರುವ ಯೋಜನೆಯಿದು. ಇಬ್ಬರದೂ ಸಮಪಾಲಿದೆ. ಈ ಹಿಂದೆ ನಡೆದಂತೆ ಈಗಲೂ ಅಂದಾದುಂಧಿ ನಡೆಸಲು ನಾವು ಅವಕಾಶ ನೀಡಲ್ಲ. ನಮ್ಮ ಪಾತ್ರ ತಿಳಿಸಿ’ ಎಂದು ವಿಜಯಕುಮಾರ ಮಂಗಳವೇಡೆ ಆಗ್ರಹಿಸಿದರು.

ಈ ಸಂದರ್ಭ ಮಂಗಳವೇಡೆ ‘ನಾವು ಗಂಡಸರೋ ? ಹೆಂಗಸರೋ ? ಎಂಬುದನ್ನಾದರೂ ತಿಳಿಸಿ ಎಂದಿದ್ದಕ್ಕೆ; ರಜಪೂತ ಆಕ್ಷೇಪ ವ್ಯಕ್ತಪಡಿಸಿದರು. ಮಾತಿನಲ್ಲಿ ಬಿಗಿಯಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಸ್ಪರ್ಧಿಯೇ ಮುಂದೆ ನಿಂತು ಸನ್ಮಾನಿಸಿದರು..!

ಸಾಮಾನ್ಯ ಸಭೆಯ ಮೊದಲ ವಿಷಯವೇ ಈಚೆಗೆ ನಡೆದ ವಿಧಾನಪರಿಷತ್‌ನ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸುನೀಲಗೌಡ ಬಿ.ಪಾಟೀಲಗೆ ಪೌರ ಸನ್ಮಾನ.

ಚರ್ಚೆ ನಡೆಯುತ್ತಿದ್ದಾಗ ಸುನೀಲಗೌಡ ಸಭೆಗೆ ಬರುತ್ತಿದ್ದಂತೆ; ಸ್ವಾಗತ ಕೋರಿ ಸನ್ಮಾನ ನೀಡಲಾಯಿತು. ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಗೂಳಪ್ಪ ಶಟಗಾರ ಸ್ವತಃ ಮುಂಚೂಣಿಯಲ್ಲಿ ನಿಂತು ಮೇಯರ್‌, ಉಪ ಮೇಯರ್‌ ಅವರಿಂದ ಪಾಟೀಲರಿಗೆ ಸನ್ಮಾನ ಮಾಡಿಸಿದ್ದು ವಿಶೇಷವಾಗಿತ್ತು.

ಸಭೆಯ ಆರಂಭದಲ್ಲೇ ಗೂಳಪ್ಪ ಶಟಗಾರ ಮನೆ, ಕಟ್ಟಡ ಕಟ್ಟುವವರಿಗೆ ಅನುಮತಿ ನೀಡಲು ಕಾಡಿಸಬೇಡಿ. ಸ್ಮಾರಕಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈಚೆಗಷ್ಟೇ ನೂತನ ಕಾನೂನು ಜಾರಿಗೊಳಿಸಿದೆ. ಅದರನ್ವಯ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಇದಕ್ಕೆ ಅಬ್ದುಲ್ ರಜಾಕ್‌ ಹೊರ್ತಿ ಸಹ ದನಿಗೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !