ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮೆಂಟ್ ಪೋಲ್ ನಂಟಿನ ನಬಿಸಾಬ್

ಆರು ಜನರಿಗೆ ಉದ್ಯೋಗ ಕೊಟ್ಟ ಹೆಗ್ಗಳಿಕೆ
Last Updated 14 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ‘ಕಚ್ಚಾ ಸಾಮಗ್ರಿಗಳೊಂದಿಗೆ ಕೈಯಿಂದ ತಯಾರಿಸುತ್ತಿದ್ದ ಸಿಮೆಂಟ್ ಪೋಲ್‌ಗಳನ್ನು ಮಷಿನ್ ಸಹಾಯದಿಂದ ತಯಾರಿಸಲು ಆರಂಭಿಸಿದಾಗ ಅವುಗಳ ಗುಣಮಟ್ಟದಲ್ಲಿ ಸಾಕಷ್ಟು ಪ್ರಗತಿ ಕಾಣುವ ಜತೆಗೆ ಬೆಲೆಯೂ ಹೆಚ್ಚಾಗಿ, ಲಾಭ ಗಳಿಸುವಂತಾಗಿದೆ’ ಎನ್ನುತ್ತಲೇ ತಮ್ಮ ಸಿಮೆಂಟ್ ಪೋಲ್ (ಕಂಬ) ಉದ್ಯಮದ ಕುರಿತು ಉದ್ಯಮಿ ನಬಿಸಾಬ್ ನಾಯ್ಕೋಡಿ ಮಾತು ಆರಂಭಿಸಿದರು.

ಪಟ್ಟಣದ ಬಸವನಬಾಗೇವಾಡಿ ರಸ್ತೆಯ ಹೊಸನಗರದಲ್ಲಿ ಮೂರು ವರ್ಷಗಳಿಂದ ಸಿಮೆಂಟ್ ಪೋಲ್ ತಯಾರಿಕೆಯಲ್ಲಿ ತೊಡಗಿಸಿ
ಕೊಂಡಿರುವ ಇವರು, ಆರು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ.

‘ಬಹುತೇಕ ರೈತರು ತೋಟದಲ್ಲಿ ಶೆಡ್ ನಿರ್ಮಿಸಲು ಮರದ ಕಂಬಗಳನ್ನು ಬಳಸುತ್ತಾರೆ. ಇದಕ್ಕೆ ಪರ್ಯಾಯವಾಗಿ ಏನು ಎಂದು ಯೋಚಿಸಿದಾಗ ಹೊಳೆದಿದ್ದೇ ಸಿಮೆಂಟ್ ಪೋಲ್‌. ಪ್ರಾರಂಭದಲ್ಲಿ ಕೈಯಿಂದ ತಯಾರಿಸಲಾಗುತ್ತಿತ್ತು. ನಂತರ ₹30 ಸಾವಿರ ಬಂಡವಾಳದೊಂದಿಗೆ ಮಷಿನ್ ಖರೀದಿಸಿ ಆರಂಭಿಸಿದ ಉದ್ದಿಮೆ, ಇಂದು 6ಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನ ನೀಡುವಂತಾಗಿದೆ’ ಎಂದು ತಮ್ಮ ಯಶೋಗಾಥೆವಿವರಿಸಿದರು.

‘ಸಿಮೆಂಟ್ ಪೋಲ್‌ಗಳ ತಯಾರಿಕೆಗೆ 4 ಮಿ.ಮೀ ಕಬ್ಬಿಣ, 20 ಮಿ.ಮೀ ಜಲ್ಲಿ, ಮರಳು (ಎಂ-ಸ್ಯಾಂಡ್), ಬಿಳಿ ಕಲ್ಲಿನ ಪುಡಿ ಹಾಗೂ ನೀರು ಬಳಸಲಾಗುತ್ತದೆ. ದಿನವೊಂದಕ್ಕೆ 50–60 ಪೋಲ್‌ಗಳನ್ನು ತಯಾರಿಸಿ, 15–20 ದಿನ ಕ್ಯೂರಿಂಗ್ ಮಾಡಲಾಗುತ್ತದೆ. ಕ್ಯೂರಿಂಗ್ ಮಾಡಲು ಸಹಕಾರಿಯಾಗುವಂತೆ ಕೊಳವೆಬಾವಿ ಕೊರೆಯಲಾಗಿದ್ದು, ಹೊಂಡ ನಿರ್ಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸಿಮೆಂಟ್ ಪೋಲ್‌ಗಳನ್ನು ಕೃಷಿ ಆಧಾರಿತ ಶೆಡ್ ನಿರ್ಮಿಸಲು ಬಳಸಲಾಗುತ್ತಿದ್ದು. ಈಗೀಗ ಡ್ರ್ಯಾಗನ್ ಫ್ರೂಟ್ ಬೆಳೆಗೆ ಆಸರೆಗಾಗಿ ಬಳಕೆಯಾಗುತ್ತಿವೆ. ರೈತರು, ಗ್ರಾಹಕರು ಕೇಳುವಂತೆ 6, 7, 8, 9, 10, 12 ಅಡಿ ಉದ್ದದ ಕಂಬಗಳನ್ನು ತಯಾರಿಸುತ್ತೇವೆ. ನಮ್ಮಲ್ಲಿ ತಯಾರಾಗುವ ಕಂಬಗಳಿಗೆ ಪಟ್ಟಣ, ಸಿಂದಗಿ, ಆಲಮೇಲ, ಗೋಲಗೇರಿ, ಬಸವನ ಬಾಗೇವಾಡಿ ಸೇರಿದಂತೆ ಹಲವು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಬೇಡಿಕೆ ಇದೆ’ ಎಂದು ಹೇಳಿದರು.

‘ವಾರಕ್ಕೆ ಕಡಿಮೆ ಎಂದರೂ ₹25 ಸಾವಿರ ಆದಾಯ ಬರುತ್ತಿದ್ದು, ಇದರಲ್ಲಿ ಕಚ್ಚಾ ಪದಾರ್ಥಗಳು ಹಾಗೂ ಕೆಲಸಗಾರರಿಗೆ ಸಂಬಳ ತೆಗೆದು ಕನಿಷ್ಠ ₹5 ಸಾವಿರ ಉಳಿತಾಯವಾಗುತ್ತದೆ’ ಎನ್ನುತ್ತಾರೆ ನಬಿಸಾಬ್. ಸಂಪರ್ಕ: 99805 33389

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT