ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಅಸಡ್ಡೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ
Last Updated 29 ಅಕ್ಟೋಬರ್ 2018, 14:14 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಅಸಡ್ಡೆ ಭಾವನೆ ಇದೆ. ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗ ಯಾವ ಅಭಿವೃದ್ಧಿ ಕೆಲಸವನ್ನೂ ಮಾಡಿಲ್ಲ. ಕೊಡಗಿನ ಅನಾಹುತಕ್ಕೆ ಕೇಂದ್ರದ ನೆರವಿಗಾಗಿ ಕಾಯಲಿಲ್ಲ. ಜನರ ನಿರೀಕ್ಷೆಯಂತೆ ಆಡಳಿತ ನೀಡುತ್ತಿದ್ದೇನೆ. ರೈತರಿಗೆ ನೆಮ್ಮದಿ ಬದುಕು ನೀಡುವ ಆಡಳಿತ ನೀಡಿ ಮಾದರಿ ರಾಜ್ಯವನ್ನಾಗಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಸೋಮವಾರ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಯಾವ ಕಾರಣಕ್ಕೆ ನನ್ನನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು ಎಂಬುದಕ್ಕೆ ಉತ್ತರ ನೀಡಬೇಕು. ರೈತರ ಸಾಲ ಮನ್ನಾ ಮಾಡಲು ತೀರ್ಮಾನಿಸಿರುವುದು ತಪ್ಪೇ? ಮಲೆನಾಡಿನಲ್ಲಿ ತಾಯಿ ಎದುರು ಹಳ್ಳದಲ್ಲಿ ಕೊಚ್ಚಿಹೋದ ಆಶಿಕಾಳಂತೆ ಇತರ ಮಕ್ಕಳು ಮಳೆಗಾಲದಲ್ಲಿ ನೀರು ಪಾಲಾಗಬಾರದು ಎಂಬ ಕಾರಣಕ್ಕೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿನ 400 ಕಾಲು ಸಂಕ ನಿರ್ಮಾಣಕ್ಕೆ ₹ 100 ಕೋಟಿ ಹಣ ಬಿಡುಗಡೆ ಮಾಡಿದ್ದು ತಪ್ಪೇ? ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಕಾಲೇಜಿನ ವರೆಗಿನ ಕಟ್ಟಡ ನಿರ್ಮಾಣಕ್ಕೆ ₹ 1,200 ಕೋಟಿ ಹಣ ಬಿಡುಗಡೆಗೊಳಿಸಿರುವುದು ತಪ್ಪೇ ಎಂದು ಅವರು ಪ್ರಶ್ನಿಸಿದರು.

ರೈತರ ಸಾಲ ಮನ್ನಾದಿಂದ 44 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ ಎಂದರು.

ಮಧು ಬಂಗಾರಪ್ಪ, ಸಚಿವರಾದ ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶೆಂಪೂರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿದರು.

ಶಾಸಕ ರಾಜೂಗೌಡ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿ ಎಂ.ಶ್ರೀಕಾಂತ್, ಮಾಜಿ ಶಾಸಕ ಕಡಿದಾಳ್ ದಿವಾಕರ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಡುಬ ರಾಘವೇಂದ್ರ, ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT