ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ, ಸಿಇಒ ದಿಢೀರ್ ಭೇಟಿ

7

ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ, ಸಿಇಒ ದಿಢೀರ್ ಭೇಟಿ

Published:
Updated:
Deccan Herald

ಚನ್ನಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮುಲ್ಲೈ ಮುಹಿಲಿನ್ ಬುಧವಾರ ದಿಢೀರ್ ಭೇಟಿ ನೀಡಿ ಪರಿಶಿಲನೆ ನಡೆಸಿದರು.

ಆಸ್ಪತ್ರೆಯ ಪ್ರತಿಯೊಂದು ವಾರ್ಡ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಜತೆ ಮಾತನಾಡಿದರು. ನಂತರ ಆಸ್ಪತ್ರೆ ಲ್ಯಾಬ್ ಹಾಗೂ ಡಯಾಲಿಸಿಸ್ ಸೆಂಟರ್‌ಗೆ ತೆರಳಿದ ಅವರು ಸೆಂಟರ್ ನಲ್ಲಿದ್ದ ಸಿಬ್ಬಂದಿ ಜೊತೆ ಮಾತನಾಡಿ ರೋಗಿಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು. ಸರ್ಕಾರಿ ಆಸ್ಪತ್ರೆ ಬಡವರಿಗಾಗಿಯೇ ಇರುವುದರಿಂದ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು.

ಮಹಿಳೆಯರ ವಾರ್ಡ್‌ಗಳಲ್ಲಿದ್ದ ಬಾಣಂತಿಯರ ಜೊತೆ ಸಂಬಂಧಿಕರ ರೀತಿಯಲ್ಲಿಯೇ ಮಾತನಾಡಿ, ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯ ಸಿಗುತ್ತಿವೆಯೇ ಎಂದು ವಿಚಾರಿಸಿದರು. ನಂತರ ಲ್ಯಾಬ್‌ಗೆ ತೆರಳಿ ಅಲ್ಲಿ ವೀಕ್ಷಣೆ ಮಾಡಿ ಸಿಬ್ಬಂದಿಯಿಂದ ಕೆಲ ಮಾಹಿತಿ ಪಡೆದು ಲ್ಯಾಬ್‌ಗೆ ಅವಶ್ಯ ಇರುವ ಆಧುನಿಕ ಯಂತ್ರಗಳನ್ನು ಕೊಂಡುಕೊಳ್ಳುವಂತೆ ತಿಳಿಸಿ ಸಂಪನ್ಮೂಲ ರಕ್ಷಾ ಸಮಿತಿಯಲ್ಲಿರುವ ಹಣ ಬಳಸಿಕೊಳ್ಳುವಂತೆ ಹಾಗೂ ಹೆಚ್ಚು ಹಣದ ಅವಶ್ಯ ಎದುರಾದರೆ ಗಮನಕ್ಕೆ ತರುವಂತೆ ಸೂಚನೆ ನೀಡಿದರು.

ಆಸ್ಪತ್ರೆ ಔಷಧಿ ಸಂಗ್ರಹ ಕೊಠಡಿಗೆ ಭೇಟಿ ನೀಡಿ ಹಿರಿಯ ಫಾರ್ಮಸಿಸ್ಟ್ ಎಂ.ವೇದಮೂರ್ತಿ ಅವರು ಔಷಧಿಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟಿರುವ ಪರಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಆಸ್ಪತ್ರೆ ಆರೋಗ್ಯಾಧಿಕಾರಿ ಡಾ.ಅಶೋಕ್ ವೆಂಕೋಬರಾವ್ ಅವರಲ್ಲಿ ಚರ್ಚಿಸಿ, ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಸರ್ಕಾರದಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಅದರ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ.ರಾಜು, ಆಸ್ಪತ್ರೆ ಸಹಾಯಕ ಆಡಳಿತಾಧಿಕಾರಿ ಮಂಜೇಶ್, ತಾಲ್ಲೂಕು ಪಂಚಾಯಿತಿ ಇಒ ರಾಮಕೃಷ್ಣಪ್ಪ, ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !