ಸವಾಲು ಮೆಟ್ಟಿ ಸಾಧನೆಯ ಪಥದಲ್ಲಿ..!

7
ಗ್ರಾಮೀಣ ಅಭಿವೃದ್ಧಿಗಾಗಿ ಹರ ಸಾಹಸ; ಜನರೊಟ್ಟಿಗೆ ಮಂದಹಾಸ

ಸವಾಲು ಮೆಟ್ಟಿ ಸಾಧನೆಯ ಪಥದಲ್ಲಿ..!

Published:
Updated:
Deccan Herald

ವಿಜಯಪುರ: ಒತ್ತಡದಲ್ಲೂ ಗ್ರಾಮೀಣಾಭಿವೃದ್ಧಿಯ ತುಡಿತ. ಜನರೊಟ್ಟಿಗೆ ಆತ್ಮೀಯ ಒಡನಾಟ. ನೂರೆಂಟು ರಗಳೆಗಳ ನಡುವೆಯೂ ಮಂದಸ್ಮಿತೆ... ಹಲ ಅಡ್ಡಿಗಳ ಮಧ್ಯೆಯೂ ತಮ್ಮ ವ್ಯಾಪ್ತಿಯಲ್ಲಿನ ಗ್ರಾಮಗಳ ಅಭಿವೃದ್ಧಿಗೆ ಪಣ ತೊಟ್ಟಾಕೆ... ವಿಜಯಪುರ ತಾಲ್ಲೂಕಿನ ತಿಡಗುಂದಿ ಗ್ರಾಮ ಪಂಚಾಯ್ತಿಯ ಪಿಡಿಒ ಪದ್ಮಿನಿ ಬಿರಾದಾರ.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ–ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿಯ ತಂಡದೊಂದಿಗೆ, ಜನರ ಸಹಕಾರ ಪಡೆದು ತಮ್ಮ ವ್ಯಾಪ್ತಿಯಲ್ಲಿ ಹಲವರು ಹುಬ್ಬೇರಿಸುವಂಥ ಕೆಲಸ ಮಾಡಿದವರು ಪದ್ಮಿನಿ.

ಸ್ಚಚ್ಛತಾ ಆಂದೋಲನದಲ್ಲಿ ಪರಿಚಾರಕಿ. ಶಾಲೆಯಲ್ಲಿ ಶಿಕ್ಷಕಿ. ಅಂಗನವಾಡಿಯಲ್ಲಿ ಶುಶ್ರೂಷಕಿ. ಗುಳೆ ಹೋದವರ ಮಕ್ಕಳ ಪಾಲಿಗೆ ಆಯಾ... ಬಿಡುವಿನಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಬೋಧನೆ... ರಜೆ ದಿನಗಳಲ್ಲಿ ಪಿಡಿಒ ಆಗಬೇಕು ಎಂಬ ಕನಸಿನಿಂದ ಕೋಚಿಂಗ್‌ ಕ್ಲಾಸ್‌ಗಳಲ್ಲಿ ತರಬೇತಿ ಪಡೆಯುವ ಪರೀಕ್ಷಾರ್ಥಿಗಳಿಗೆ ಉಚಿತವಾಗಿ ತರಬೇತಿ. ಪರೀಕ್ಷೆಗೆ ಯಾವ ರೀತಿ ಸಜ್ಜಾಗಬೇಕು ಎಂಬುದರ ಮಾಹಿತಿ ನೀಡುವುದು ಇವರ ಹವ್ಯಾಸ.

ಒತ್ತಡದ ಕೆಲಸದ ನಡುವೆಯೂ ಸದ್ದಿಲ್ಲದೆ ಇಂಥ ಅನೇಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರಿಂದ ಹಲವರ ಪಾಲಿನ ಮಾರ್ಗದರ್ಶಕಿಯಾಗಿಯೂ ಪದ್ಮಿನಿ ರೂಪುಗೊಂಡಿದ್ದಾರೆ.

ವೈಯಕ್ತಿಕ ಶೌಚಾಲಯ ಬಳಕೆಗಾಗಿ ಜಾಗೃತಿ ಮೂಡಿಸಲು ಗ್ರಾಮ ವಾಸ್ತವ್ಯ. ಡೊಮನಾಳ ಗ್ರಾಮದಲ್ಲಿ ನಸುಕಿನಲ್ಲೇ ಬಯಲಿಗೆ ಹೋಗುತ್ತಿದ್ದವರನ್ನು ತಡೆದು, ಸ್ವಚ್ಛತೆಯ ಅರಿವು ಮೂಡಿಸಿ, ಅವರಿಂದ ವಚನ ಪಡೆದು, ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಘೋಷಿಸಿದ ಹಿರಿಮೆ ಪದ್ಮಿನಿ ಅವರದ್ದು.

ಜಲ ದಾಹ ಇಂಗಿಸಿದಾಕೆ:

ತಿಡಗುಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬವಣೆ ಹಲ ವರ್ಷಗಳಿಂದ ಬಾಧಿಸುತ್ತಿತ್ತು. ಶಾಶ್ವತ ಪರಿಹಾರವೇ ಸಿಕ್ಕಿರಲಿಲ್ಲ. ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಈ ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಿದ್ದ ಸಂದರ್ಭ, ಗ್ರಾಮದ ಕೆರೆ ತುಂಬಿದರು.

ಇದನ್ನೇ ಕಾದಿದ್ದ ಪದ್ಮಿನಿ ಎಲ್ಲರ ಮನವೊಲಿಸಿ, ಕೃಷ್ಣೆಯ ನೀರು ಕೆರೆ ಸೇರುವ ಮುನ್ನವೇ ಹಿಡಿದಿಡುವ ಯೋಜನೆ ರೂಪಿಸಿದರು. ಇದರಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ₹ 14 ಲಕ್ಷ ವೆಚ್ಚದಲ್ಲಿ ಎರಡು ಚೆಕ್‌ ಡ್ಯಾಂ ನಿರ್ಮಿಸಿದರು. ಇದರ ಫಲವಾಗಿ ಅಂತರ್ಜಲ ಹೆಚ್ಚಿತು. ಕುಡಿಯುವ ನೀರಿನ ಬವಣೆ ಸಂಪೂರ್ಣ ನಿವಾರಣೆಯಾಗದಿದ್ದರೂ; ಮೊದಲಿನಷ್ಟು ಹಾಹಾಕಾರವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಫೇಸ್‌ಬುಕ್‌ನಲ್ಲೇ ಎಚ್ಚರಿಕೆ ನೀಡಿದಾಕೆ..!

‘ಚೆಕ್‌ ಡ್ಯಾಂ ಕಟ್ಟಿರುವುದರಿಂದಲೇ ಕೆರೆಗೆ ನೀರು ಬರುತ್ತಿಲ್ಲ. ಆಲಮಟ್ಟಿಯಿಂದಲೂ ಈ ಬಾರಿ ಹೆಚ್ಚಿನ ದಿನ ನೀರು ಹರಿಸಲ್ಲ. ಇದರಿಂದ ಕೆರೆ ತುಂಬಲ್ಲ. ಇದನ್ನು ತೆರವುಗೊಳಿಸದಿದ್ದರೆ ನಮಗೆ ಉಳಿಗಾಲವಿಲ್ಲ’ ಎಂಬ ನಿರ್ಧಾರ ಕೈಗೊಂಡಿದ್ದ ಕೆಲವರು ರಾತ್ರೋರಾತ್ರಿ ದುಸ್ಸಾಹಸಕ್ಕೆ ಮುಂದಾಗಿದ್ದರು.

ಇದು ತಿಳಿಯುತ್ತಿದ್ದಂತೆ ಪದ್ಮಿನಿ, ಸಾಮಾಜಿಕ ಜಾಲತಾಣದ ಮೂಲಕವೇ ಪ್ರಕಟಣೆ ಹೊರಡಿಸಿ, ದುಷ್ಕೃತ್ಯ ನಡೆಸಲು ಮುಂದಾಗಿದ್ದವರನ್ನು ನಡುಗಿಸಿದ್ದರು.

‘ಚೆಕ್‌ ಡ್ಯಾಂ ತುಂಬಿರುವುದರಿಂದ ಕೆರೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಪ್ಪು ತಿಳಿದಿದ್ದೀರಿ. ತಿಡಗುಂದಿ, ಬೊಮ್ಮನಹಳ್ಳಿ, ಮಿಂಚನಾಳ ರೈತರಿಗೆ ಈ ಮೂಲಕ ತಿಳಿಸುವುದೇನೆಂದರೇ... ನಿಮಗೆ ಚೆಕ್‌ ಡ್ಯಾಂ ಒಡೆಯಿರಿ ಎಂದು ಯಾವ ಮಹಾಶಯ ಎಂಜಿನಿಯರ್ ಸಲಹೆ ನೀಡಿದ್ದಾರೆ ನನಗೆ ಗೊತ್ತಿಲ್ಲ.

ಸರ್ಕಾರಿ ಆಸ್ತಿ ನಾಶಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕುವುದು ಯಾರಿಗೂ ತರವಲ್ಲ. ಇಷ್ಟಾದರೂ ಮುಂದುವರೆದರೆ ಯಾರಿಗೂ ಚೆನ್ನಾಗಿರಲ್ಲ. ಧನ್ಯವಾದಗಳು... ತಿಡಗುಂದಿ ಗ್ರಾಮ ಪಂಚಾಯ್ತಿ ಪ್ರಕಟಣೆ’ ಎಂಬ ಒಕ್ಕಣೆಯುಳ್ಳ ಸಂದೇಶವನ್ನು ಪದ್ಮಿನಿ ಬಿರಾದಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳ ಮೂಲಕ ಹರಿಯಬಿಟ್ಟು, ಚೆಕ್‌ ಡ್ಯಾಂ ಧ್ವಂಸಗೊಳಿಸಲು ಕೆಲವರು ರೂಪಿಸಿದ್ದ ಯೋಜನೆಯನ್ನು ಬುಡಮೇಲು ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !