ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆಸ್ತಿ ತೆರಿಗೆ ₹1.47 ಕೋಟಿ ಸಂಗ್ರಹ

₹4.5 ಕೋಟಿ ಸಂಗ್ರಹ ಗುರಿ, ಜೂನ್‌ ತಿಂಗಳವರೆಗೂ ಶೇ 5ರಷ್ಟು ವಿನಾಯಿತಿ
Last Updated 6 ಜೂನ್ 2020, 20:13 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದ ನಗರಸಭೆಯು 2020–21ನೇ ಸಾಲಿನ ಆಸ್ತಿ ತೆರಿಗೆಯನ್ನು (ಮನೆ, ನೀರು ಮತ್ತು ಕಂದಾಯ ಆಸ್ತಿಗಳ ಸಂಗ್ರಹಿಸುವ ಪ್ರಕ್ರಿಯೆಗೆ ಎರಡು ತಿಂಗಳ ಹಿಂದೆ ಚಾಲನೆ ನೀಡಿದ್ದು, ಇದುವರೆಗೆ ₹1.47 ಕೋಟಿ ಸಂಗ್ರಹವಾಗಿದೆ.

ಈ ವರ್ಷ ಒಟ್ಟು ₹4.50 ಕೋಟಿ ಸಂಗ್ರಹಿಸುವ ಗುರಿಯನ್ನು ನಗರಸಭೆ ಆಡಳಿತ ಹೊಂದಿದ್ದು, ಇನ್ನೂ ₹3 ಕೋಟಿಯಷ್ಟು ತೆರಿಗೆ ಸಂಗ್ರಹವಾಗಬೇಕಿದೆ.

ಏಪ್ರಿಲ್‌ ತಿಂಗಳ 16ರಂದು ಹೊಸ ವರ್ಷದ ತೆರಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಗಿತ್ತು. ಆಸ್ತಿಯ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸುವಂತೆ ನಗರಸಭೆ ಕೇಳಿಕೊಂಡಿತ್ತು. ಆ ತಿಂಗಳ ಅಂತ್ಯದ ಒಳಗಾಗಿ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ನೀಡುವ ಘೋಷಣೆಯನ್ನು ಮಾಡಲಾಗಿತ್ತು. ಏಪ್ರಿಲ್‌ ತಿಂಗಳಲ್ಲಿ ₹52.43 ಲಕ್ಷ ತೆರಿಗೆ ಸಂಗ್ರಹವಾಗಿದೆ.

ಮೇ ತಿಂಗಳಲ್ಲೂ ಇದೇ ಯೋಜನೆಯನ್ನು ನಗರಸಭೆ ವಿಸ್ತರಿಸಿತ್ತು. ಕಳೆದ ತಿಂಗಳು, ನಗರದ ಆಸ್ತಿ ಮಾಲೀಕರು ₹94.9 ಲಕ್ಷ ಪಾವತಿಸಿದ್ದಾರೆ. ಸ್ವಯಂ ಪ್ರೇರಿತರಾಗಿ ತೆರಿಗೆ ಪಾವತಿಸಿದರೆ ಶೇ 5ರಷ್ಟು ರಿಯಾಯಿತಿ ನೀಡುವ ಯೋಜನೆಯನ್ನು ಈ ತಿಂಗಳ ಅಂತ್ಯದವರೆಗೂ ವಿಸ್ತರಿಸಲಾಗಿದೆ. ಹಾಗಾಗಿ, ಜನರು ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಪಾವತಿಸಬಹುದು ಎಂಬ ಲೆಕ್ಕಾಚಾರದಲ್ಲಿ ಅಧಿಕಾರಿಗಳು ಇದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 20,844 ಆಸ್ತಿಗಳಿವೆ. ಇದರಲ್ಲಿ 11,934 ಮನೆಗಳು, 2,035 ವಾಣಿಜ್ಯ ಕಟ್ಟಡಗಳು ಹಾಗೂ 6,876 ಖಾಲಿ ನಿವೇಶನಗಳು. ಪ್ರತಿ ವರ್ಷ ಶೇ 100ರಷ್ಟು ತೆರಿಗೆ ಸಂಗ್ರಹ ಆಗುತ್ತಿಲ್ಲ. ಆದರೆ, ಈ ವರ್ಷ ಕೋವಿಡ್‌–19 ಹಾವಳಿಯಿಂದಾಗಿ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ, ಹಲವು ಆಸ್ತಿ ಮಾಲೀಕರು ತೆರಿಗೆ ಪಾವತಿಸಿದ್ದಾರೆ. ಹಾಗಾಗಿ, ಇನ್ನಷ್ಟು ತೆರಿಗೆದಾರರು ಹಣ ಪಾವತಿಸಬಹುದು ಎಂಬ ನಿರೀಕ್ಷೆ ಅಧಿಕಾರಿಗಳಲ್ಲಿದೆ.

ಕಳೆದ ವರ್ಷ ₹2.85 ಕೋಟಿ:2019–20ನೇ ಸಾಲಿನಲ್ಲಿ ₹4.25 ಕೋಟಿ ಸಂಗ್ರಹಿಸುವ ಗುರಿಯನ್ನು ನಗರಸಭೆ ಹೊಂದಿತ್ತು. ಈ ಪೈಕಿ ₹2.85 ಕೋಟಿ ಮಾತ್ರ ಸಂಗ್ರಹವಾಗಿದೆ. ಇನ್ನೂ ₹2.4 ಕೋಟಿಯಷ್ಟು ಬಾಕಿ ಇದೆ.

ಈ ವರ್ಷದ ₹4.5 ಕೋಟಿ ಗುರಿಯೊಂದಿಗೆ ಬಾಕಿ ಇರುವ ಮೊತ್ತವನ್ನೂ ನಗರಸಭೆ ಸಂಗ್ರಹಿಸಬೇಕಿದೆ.

ಗುರಿ ತಲುಪುವ ವಿಶ್ವಾಸ

‘ಈ ವರ್ಷ ಆಸ್ತಿ ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದು ತೆರಿಗೆ ಪಾವತಿಸುತ್ತಿದ್ದಾರೆ. ಲಾಕ್‌ಡೌನ್‌ ನಡುವೆಯೇ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ₹1.5 ಕೋಟಿಯಷ್ಟು ತೆರಿಗೆ ಸಂಗ್ರಹವಾಗಿದೆ. ಈ ತಿಂಗಳ ಅಂತ್ಯದವರೆಗೆ ಶೇ 5ರಷ್ಟು ರಿಯಾಯಿತಿ ನೀಡುತ್ತಿದ್ದೇವೆ.ಇನ್ನೂ ₹3 ಕೋಟಿಯಷ್ಟು ಬರಬೇಕಿದೆ. ಜೂನ್‌ ತಿಂಗಳ ಮೊದಲ ವಾರದಲ್ಲಿ ₹15 ಲಕ್ಷ ಸಂಗ್ರಹವಾಗಿದೆ’ ಎಂದುಆಯುಕ್ತ ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಕಿ ತೆರಿಗೆಯೂ ಸೇರಿದಂತೆ ಈ ವರ್ಷ ₹5 ಕೋಟಿ ಸಂಗ್ರಹ ಮಾಡಬೇಕು ಎಂಬ ಗುರಿಯನ್ನು ಹಾಕಿಕೊಂಡಿದ್ದೇವೆ.ನವೆಂಬರ್‌ ತಿಂಗಳವರೆಗೂ ದಂಡ ಪಾವತಿಸದೇ ತೆರಿಗೆ ಪಾವತಿಸಬಹುದು. ನಂತರ ನಿ‍ಯಮಗಳ ಅನುಸಾರ ದಂಡ ವಿಧಿಸಲಾಗುತ್ತದೆ. ತೆರಿಗೆಯನ್ನು ಪಾವತಿಸದೇ ಇದ್ದವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಕಾನೂನಿನಲ್ಲಿ ಅವಕಾಶ ಇದೆ’ ಎಂದು ಅವರು ಹೇಳಿದರು.

ಅಂಕಿ ಅಂಶಗಳು

20,844 - ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿಗಳು

11,934 - ಮನೆಗಳ ಸಂಖ್ಯೆ

2,035 - ವಾಣಿಜ್ಯ ಕಟ್ಟಡಗಳು

6,876 - ಖಾಲಿ ನಿವೇಶನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT