ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆಯಿಂದ ಬೆಟ್ಟದ ಹಿರಿಮೆ ಹೆಚ್ಚಳ: ಬಸವರಾಜ ಬೊಮ್ಮಾಯಿ

Last Updated 19 ಮಾರ್ಚ್ 2023, 7:33 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಮಲೆಮಹದೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿಯ ಅಭಿವೃದ್ಧಿ ಕೆಲಸವನ್ನು ಹಮ್ಮಿಕೊಂಡಿದ್ದೇವೆ. ಜೀವ ಕಳೆಯಿಂದ ಕೂಡಿರುವ, ಅದ್ಭುತವಾಗಿ ಮೂಡಿ ಬಂದಿರುವ 108 ಅಡಿ ಎತ್ತರ ಮಹದೇಶ್ವರ ಸ್ವಾಮಿಯ ಪ್ರತಿಮೆಯು ಈ ಕ್ಷೇತ್ರದ ಹಿರಿಮೆಯನ್ನು ಎತ್ತಿ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದರು.

ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ‘ಬೆಟ್ಟದ ಅಭಿವೃದ್ಧಿಯ ಇತಿಹಾಸದಲ್ಲಿ ಇದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಲಕ್ಷಾಂತರ ಜನರ ಅದರಲ್ಲೂ ವಿಶೇಷವಾಗಿ ರೈತಾಪಿ ಜನರ ಆರಾಧ್ಯ ದೈವ ಮಹದೇಶ್ವರ ಸ್ವಾಮಿಯೇ ಎದುರಿಗೆ ಬಂದು ನಿಂತಿದ್ದಾನೆ ಎನ್ನುವಷ್ಟರ ಮಟ್ಟಿಗೆ ಪ್ರತಿಮೆ ರೂಪುಗೊಂಡಿದೆ. ಬೆಟ್ಟದಲ್ಲಿ ಎಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೂ, ಈ ಪ್ರತಿಮೆ ಮೂಲಕ ಮಾದಪ್ಪನ ದರ್ಶನ ಸಾಧ್ಯವಾಗಲಿದೆ’ ಎಂದರು.

ಸೋಮಣ್ಣಗೆ ಶ್ಲಾಘನೆ: ‘ಹಿಂದೆ ಇಲ್ಲಿ ಬೇರೆ ಬೇರೆ ಕಾರಣಗಳಿಗೆ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬಿದ್ದಿದ್ದವು. ಆದರೆ, ವಿ. ಸೋಮಣ್ಣ ಉಸ್ತುವಾರಿ ಸಚಿವರಾದ ಬಳಿಕ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಕ್ಕಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಕೆಲಸಗಳನ್ನು ಮಾಡಿದ್ದಾರೆ. ಮಾದಪ್ಪನ ಸಂಪೂರ್ಣ ಆಶೀರ್ವಾದ ಅವರಿಗೆ ಸಿಗಲಿದೆ. ಸ್ಥಳೀಯ ಶಾಸಕ ಆರ್‌.ನರೇಂದ್ರ ಅವರು ಕೂಡ ಆಸಕ್ತಿ ವಹಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದೊಂದಿಗೆ ಸಹಕರಿಸಿದ್ದಾರೆ. ಅವರಿಗೂ ಮಹದೇಶ್ವರರ ಆಶೀರ್ವಾದ ಸಿಗುತ್ತದೆ’ ಎಂದರು.

‘ತಿಂಗಳ ಅವಧಿಯಲ್ಲಿ ಎರಡು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿರುವುದು ನನ್ನ ಸೌಭಾಗ್ಯ. ಮಹದೇಶ್ವರಸ್ವಾಮಿಯೇ ನನ್ನನ್ನು ಕರೆಸಿಕೊಂಡಿದ್ದಾನೆ. ಸಮಸ್ತ ಕನ್ನಡ ನಾಡಿಗೆ ಸುಭಿಕ್ಷೆ ಕೊಡಿ, ಸಮಸ್ತ ಕನ್ನಡಿಗರ ಬದುಕು ಬಂಗಾರವಾಗಬೇಕು, ಎಲ್ಲರೂ ಸ್ವಾಲಂಬನೆ ಮತ್ತು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಪ್ರಾರ್ಥನೆಯನ್ನು ಮಾದಪ್ಪನ ಮುಂದೆ ಮಾಡಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ‘ಇದು ಅವಿಸ್ಮರಣೀಯವಾದ ದಿನ. ಈ ಪ್ರತಿಮೆಯು ಸುತ್ತೂರು ಶ್ರೀಗಳ ದೂರದೃಷ್ಟಿ, ಸಾಲೂರು ಮಠದ ಶ್ರೀಗಳ ಸಂಕಲ್ಪದ ಫಲ. ಸರ್ಕಾರ ಮತ್ತು ಪ್ರಾಧಿಕಾರ ಒಟ್ಟಾಗಿ ಕೆಲಸ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಈ ಯೋಜನೆ ಸಾಕ್ಷಿ. ಮಾದಪ್ಪನ ಪ್ರತಿಮೆ ನಿರ್ಮಾಣದಿಂದ ಮಹದೇಶ್ವರರ ಎಲ್ಲ ವಿಚಾರಧಾರೆಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಿದೆ. ಎರಡು ಮೂರು ವರ್ಷಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ 100 ಪಟ್ಟು ಹೆಚ್ಚಳವಾಗಿ ಭಕ್ತರಿಗೆ ನೆಮ್ಮದಿ ಸಿಗಲಿ’ ಎಂದು ಆಶಿಸಿದರು.

ಶಾಸಕ ಆರ್‌.ನರೇಂದ್ರ ಮಾತನಾಡಿ, ‘ಪ್ರತಿಮೆ ನಿರ್ಮಾಣ ಯೋಜನೆ ಸಚಿವರಾಗಿದ್ದ ದಿವಂಗತ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಕನಸಿನ ಕೂಸು. 2016–17ರಲ್ಲಿ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಈ ಪ್ರತಿಮೆಗೆ ಕಾರಣೀಭೂತರಾದವರು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ಇಲ್ಲಿ ಇನ್ನೂ ಕೆಲವು ಕೆಲಸಗಳು ಬಾಕಿ ಇವೆ. ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ’ ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು. ಪ್ರತಿಮೆಯ ಶಿಲ್ಪಿ ಶ್ರೀಧರಮೂರ್ತಿ, ಯೋಜನೆಯ ಮುಖ್ಯ ಎಂಜಿನಿಯರ್‌ ಮಾಲತೇಶ್‌ ಪಾಟೀಲ ಅವರನ್ನು ಮುಖ್ಯಮಂತ್ರಿಯವರು ಸನ್ಮಾನಿಸಿದರು.

ಕ್ರೇನ್‌ ಮೂಲಕ ತೆರಳಿ ಪುಷ್ಪಾರ್ಚನೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬಸವರಾಜ ಬೊಮ್ಮಾಯಿಯವರು ಕ್ರೇನ್‌ ಮೂಲಕ ಪ್ರತಿಮೆ ಬಳಿಗೆ ತೆರಳಿ, ಮಹದೇಶ್ವರಸ್ವಾಮಿಯ ಸಣ್ಣ ಪ್ರತಿಕೃತಿಗೆ ಪುಷ್ಪಾರ್ಚನೆ ಮಾಡಿದರು. ಸುತ್ತೂರು ಶ್ರೀಗಳು, ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕರಾದ ನರೇಂದ್ರ, ಎನ್‌.ಮಹೇಶ್‌ ಮುಖ್ಯಮಂತ್ರಿಯವರ ಜೊತೆಗಿದ್ದರು.

ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ನೆರೆಯ ತಮಿಳುನಾಡಿನ ಮೆಟ್ಟೂರು ಶಾಸಕ ಸದಾಶಿವಂ, ಮುಖಂಡ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಸಚಿವ ಸೋಮಣ್ಣ ಪತ್ನಿ ಶೈಲಜಾ, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಪೂವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗೀತಾ ಹುಡೇದ ಇದ್ದರು.

ಕನಸು ನನಸಾಗಿದೆ: ಸುತ್ತೂರು ಶ್ರೀ

ಆಶೀರ್ವಚನ ನೀಡಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಪ್ರತಿಮೆ ನಿರ್ಮಾಣದ ಮೂಲಕ ಜನರ ಕನಸು ನನಸಾಗಿದೆ. ಬೆಟ್ಟದಲ್ಲಿ ಎಲ್ಲಿ ನಿಂತರೂ ಮಾದಪ್ಪನನ್ನು ನೋಡುವ ಸದಾವಕಾಶ ಸಿಕ್ಕಿರುವುದು ಆ ಮಾದಪ್ಪನ ಕೃಪೆ. ಆನೆ ತಲೆದಿಂಬಕ್ಕೆ ತಲುಪಿದ ತಕ್ಷಣ ಮಾದಪ್ಪನೇ ಸಾಕ್ಷಾತ್‌ ಆಗಿ ನಡೆದುಕೊಂಡು ಬರುವ ರೀತಿ ಭಾಸವಾಗುತ್ತದೆ’ ಎಂದರು.

‘ಮಹದೇಶ್ವರರು ಜನಮಾನಸದಲ್ಲಿ ಅಚ್ಚಳಿಯದೆ ಪ್ರಭಾವ ಬೀರಿದ ಮಹಾ ತಪಸ್ವಿಗಳು. ಪ್ರತಿಮೆಯಿಂದಾಗಿ ಸಾಂಕೇತಿಕವಾಗಿ ಬೆಟ್ಟದಲ್ಲಿ ಇನ್ನೊಂದು ಬೆಟ್ಟದ ಮೇಲೆ ಮಹದೇಶ್ವರರು ನಿಂತಂತೆ ಆಗಿದೆ. ಇದರ ಕನಸು ಕಂಡಿದ್ದು ಮಹದೇವಪ್ರಸಾದ್‌, ಮೂರ್ತರೂಪಕೊಟ್ಟಿದ್ದು ಸೋಮಣ್ಣ ಅವರು’ ಎಂದರು.

ಬೆಳ್ಳಿ ರಥ ಅರ್ಪಣೆ

ಹೆಲಿಕಾಪ್ಟರ್‌ನಲ್ಲಿ ಬೆಟ್ಟಕ್ಕೆ ಬಂದಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೇರವಾಗಿ ದೇವಾಲಯಕ್ಕೆ ತೆರಳಿ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿದರು. ಬಳಿಕ ನೂತನವಾಗಿ ನಿರ್ಮಿಸಿರುವ ಬೆಳ್ಳಿ ರಥವನ್ನು ಸಮರ್ಪಿಸಿದರು. ಇದರ ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಭಕ್ತರು ದಾನ, ಕಾಣಿಕೆ ರೂಪದಲ್ಲಿ ನೀಡಿರುವ ಬೆಳ್ಳಿಯ ಪದಾರ್ಥಗಳನ್ನು ಬಳಸಿಕೊಂಡು 17 ಅಡಿ 11 ಇಂಚು ಎತ್ತರದ ತೇಗದ ಮರದಿಂದ ಮಾಡಿದ ರಥಕ್ಕೆ ಬೆಳ್ಳಿ ಕವಚವನ್ನು ಅಳವಡಿಸಲಾಗಿದೆ. ಬೆಳ್ಳಿಯ ಕೆಲಸದ ಕೂಲಿ ₹20 ಲಕ್ಷ ವಾಗಿದ್ದು, ಭಕ್ತರಾದ ಕೊಯಮತ್ತೂರಿನ ಮೋಹನ್ ರಾಮ್ ಹಾಗೂ ಬೆಂಗಳೂರಿನ ಸೋಮಶೇಖರ್ ಅವರು ಈ ವೆಚ್ಚವನ್ನು ಭರಿಸಿದ್ದಾರೆ.

ಶನಿವಾರ ಬಸವರಾಜ ಬೊಮ್ಮಾಯಿ ಅವರು ದಾನಿಗಳನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮಕ್ಕೆ ಯಡಿಯೂರಪ್ಪ ಗೈರು

ಪ್ರತಿಮೆ ಅನಾವರಣ ಸಮಾರಂಭಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಬರುತ್ತಾರೆ ಎಂದು ಹೇಳಲಾಗಿತ್ತು. ಆಮಂತ್ರಣದಲ್ಲಿ ಅವರ ಹೆಸರೂ ಇತ್ತು. ಆದರೆ, ಅವರು ಗೈರಾಗಿದ್ದರು.

ಈ ಬಗ್ಗೆ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಕ್ಕೆ, ‘ಅವರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವ ಕಾರಣಕ್ಕೆ ಬಂದಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಯೋಗಾಯೋಗ: ತಮ್ಮ ಭಾಷಣದಲ್ಲಿ ಯಡಿಯೂರಪ್ಪ ಹೆಸರನ್ನೂ ಬೊಮ್ಮಾಯಿ ಪ್ರಸ್ತಾಪಿಸಿದರು.

‘ಶುಕ್ರವಾರ ಶಿವಮೊಗ್ಗದ ಶಿಕಾರಿಪುರ ಕ್ಷೇತ್ರದಲ್ಲಿ 58 ಅಡಿ ಎತ್ತರದ ಅಕ್ಕಮಹಾದೇವಿ ಅವರ ಪ್ರತಿಮೆ ಅನಾವರಣ ಮಾಡಿದ್ದೆ. ಅಲ್ಲಿ ನಮ್ಮ ನಾಯಕರಾದ ಯಡಿಯೂರಪ್ಪ ಇದ್ದರು. ಇಲ್ಲಿ ನನ್ನ ಸಹೋದರ ವಿ.ಸೋಮಣ್ಣ ಇದ್ದಾರೆ. ಇದು ನನ್ನ ಯೋಗಾಯೋಗ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT