ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲೀಗ್‌ ಜಮಾತ್‌: 22 ಮಂದಿಗೆ ಸೋಂಕಿಲ್ಲ

ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಿ: ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ಆರೋಗ್ಯ ಸಚಿವ
Last Updated 8 ಏಪ್ರಿಲ್ 2020, 16:29 IST
ಅಕ್ಷರ ಗಾತ್ರ

ಚಾಮರಾಜನಗರ: ‘ತಬ್ಲೀಗ್ ಜಮಾತ್‌ ಜೊತೆ ಒಡನಾಟ ಹೊಂದಿರುವ ಜಿಲ್ಲೆಯ 21 ಮಂದಿಗೆ ಕೊರೊನಾ ವೈರಸ್‌ ಸೋಂಕಿಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಬುಧವಾರ ಹೇಳಿದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ‘ತಬ್ಲೀಗ್‌ ಜಮಾತ್‌ನ ವಿವಿಧ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿದ 81 ಮಂದಿ ಜಿಲ್ಲೆಯಲ್ಲಿದ್ದಾರೆ. ಈ ಪೈಕಿ 22 ಜನರ ಗಂಟಲದ್ರವ ಹಾಗೂ ರಕ್ತದ ಮಾದರಿಗಳನ್ನು ಕಳುಹಿಸಲಾಗಿತ್ತು. ಇದರಲ್ಲಿ ಒಬ್ಬರ ಮಾದರಿ ತಿರಸ್ಕೃತವಾಗಿದ್ದು, ಉಳಿದವರಿಗೆ ಸೋಂಕು ಇಲ್ಲ ಎಂದು ಗೊತ್ತಾಗಿದೆ’ ಎಂದರು.

ರಾಮಾಪುರದ 10 ಮಂದಿ ಮತ್ತು ನಾಗವಳ್ಳಿಯ ಮಸೀದಿಯಲ್ಲಿದ್ದ ಗುಜರಾತ್‌ನ 12 ಮಂದಿ ಧರ್ಮಗುರುಗಳಗಂಟಲದ್ರವ ಹಾಗೂ ರಕ್ತದ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಸೋಮವಾರ ಕಳುಹಿಸಲಾಗಿತ್ತು.

ಮಾಹಿತಿ ನೀಡಿ:‘ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಗ್‌ ಜಮಾತ್‌ನಲ್ಲಿ ನಡೆದ ಧರ್ಮ ಸಭೆಯಲ್ಲಿ ಭಾಗವಹಿಸಿರುವವರು ಸ್ವಯಂ ಪ್ರೇರಿತರಾಗಿ ಬಂದು ಮಾಹಿತಿ ನೀಡಿ. ಕೈಮುಗಿದು ಕೇಳಿಕೊಳ್ಳುತ್ತೇನೆ. ನಿಮ್ಮ ಜೊತೆ ಸರ್ಕಾರ ಇದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

‘ಮಾಹಿತಿ ನೀಡದೆ ಅಡಗಿ ಕುಳಿತರೆ ಕಾಯಿಲೆ ಇನ್ನೊಬ್ಬರಿಗೆ ಹರಡುತ್ತದೆ. ದಯವಿಟ್ಟು ಯಾರೂ ಆ ಕೆಲಸ ಮಾಡಬೇಡಿ. ಈ ರೋಗವನ್ನು ಒಂದು ಜಾತಿಗೆ ಹಣೆಪಟ್ಟಿ ಕಟ್ಟುತ್ತಿಲ್ಲ. ಧರ್ಮಸಭೆಯಲ್ಲಿ ಭಾಗವಹಿಸಿದವರು ಸ್ವಯಂ ಪ್ರೇರಿತರಾಗಿ ಬಂದರೆ ಸರ್ಕಾರಕ್ಕೆ ಅನುಕೂಲವಾಗುತ್ತದೆ. ಜನರ ಪ್ರಾಣವನ್ನು ಉಳಿಸುವ ಕೆಲಸ ಮಾಡಿದಂತಾಗುತ್ತದೆ. ಬಂದವರಿಗೆ ಸ್ವಲ್ಪವೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಿದ ಬಳಿಕ ವಿದೇಶದಿಂದ ಬಂದವರನ್ನು ಪ್ರತ್ಯೇಕವಾಗಿ ಇರಿಸಿದರೆ, ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಬಹುದು ಎಂದು ಯೋಚನೆ ಮಾಡಿದ್ದೆವು. ಆದರೆ, ನಿಜಾಮುದ್ದೀನ್‌ ಧರ್ಮಸಭೆಯ ನಂತರ ಪ್ರಕರಣಗಳು ಹೆಚ್ಚಾದವು’ ಎಂದು ಅವರು ಹೇಳಿದರು.

‘ಇದುವರೆಗೆ ಧರ್ಮ ಸಭೆಯಲ್ಲಿ ಭಾಗವಹಿಸಿದ 391 ಜನರನ್ನು ಗುರುತಿಸಿ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಪೈಕಿ 37 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ’ ಎಂದು ಅವರು ಮಾಹಿತಿ ನೀಡಿದರು.

ನಿಯಂತ್ರಣದಲ್ಲಿದೆ: ‘ರಾಜ್ಯದಲ್ಲಿ ಕೊವಿಡ್‌–19 ನಿಯಂತ್ರಣದಲ್ಲಿದೆ. 181 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದುವರೆಗೆ ಐವರು ಮೃತಪಟ್ಟಿದ್ದಾರೆ. ಗುಣಮುಖರಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದುವರೆಗೆ 28 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಇನ್ನು ಎರಡು ವಾರ ಅತ್ಯಂತ ಮಹತ್ವದ್ದು, ಅದನ್ನು ನಾವು ಚೆನ್ನಾಗಿ ನಿಭಾಯಿಸಿದರೆ ಮತ್ತೆ ದೊಡ್ಡ ಆತಂಕ ಇರುವುದಿಲ್ಲ’ ಎಂದು ಅವರು ಹೇಳಿದರು.

ನಾಳೆ ಸಭೆ: ‘ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. 12.30ಕ್ಕೆ ನನ್ನ ಅಧ್ಯಕ್ಷತೆಯ ಕಾರ್ಯಪಡೆ ಸಮಿತಿ ಸಭೆ ನಡೆಯಲಿದೆ. ಸಂಜೆ ಮುಖ್ಯಮಂತ್ರಿ ಅವರು ತಜ್ಞರ ಸಭೆ ನಡೆಸಲಿದ್ದಾರೆ. ಅಲ್ಲಿ ಕೋವಿಡ್‌–19 ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲಾಗುವುದು. ದಿಗ್ಬಂಧನ ಸಡಿಲಗೊಳಿಸಬೇಕೇ ಬೇಡವೇ ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ’ ಎಂದು ಶ್ರೀರಾಮುಲು ಹೇಳಿದರು.

‘ರಾಜ್ಯದಲ್ಲಿ ರಕ್ತದ ಕೊರತೆ ಇಲ್ಲ. ಹಾಗಾಗಿದ್ದರೂ ರಕ್ತದ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು. ಸರ್ಕಾರಿ ನೌಕರರು ರಕ್ತದಾನ ಮಾಡಲು ಮುಂದಾಗಬೇಕು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಶಾಸಕ ಎನ್‌.ಮಹೇಶ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಕೆ.ಮಹೇಶ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಇದ್ದರು.

‘ಚಾಮರಾಜನಗರ ಕೋವಿಡ್‌–19 ಮುಕ್ತ ಜಿಲ್ಲೆ’
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಚಾಮರಾಜನಗರ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ ಸಚಿವರು, ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿದೇಶದಿಂದ ಬಂದವರು, ತಬ್ಲೀಗ್‌ ಜಮಾತ್‌ನ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿದವರನ್ನೆಲ್ಲ ಪ್ರತ್ಯೇಕವಾಗಿ ಇರಿಸಿ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಹಾಗಾಗಿ, ಚಾಮರಾಜನಗರವನ್ನು ಕೋವಿಡ್‌–19 ಮುಕ್ತ ಜಿಲ್ಲೆ ಎಂದು ಹೇಳಬಹುದು’ ಎಂದರು.

ದೌರ್ಜನ್ಯ ಮಾಡುವವರ ವಿರುದ್ಧ ಕ್ರಮ
ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಯಾರೂ ಇಂತಹ ಕೆಲಸ ಮಾಡಬಾರದು. ಆದರೆ, ಕೆಲವರ ಮನಃಸ್ಥಿತಿಯೇ‌ಆ ರೀತಿಯಲ್ಲಿ ಇರುತ್ತದೆ. ಇಂತಹದೇ ಕೃತ್ಯ ಮಾಡುವುದು ಅವರ ಕೆಲಸ. ಅಂತಹವರನ್ನು ಏನೂ ಮಾಡಲು ಆಗುವುದಿಲ್ಲ. ಕೋವಿಡ್‌–19ರ ನಿಯಂತ್ರಣಕ್ಕೆ ಎಲ್ಲರೂ ಸಹಕಾರ ಕೊಡಬೇಕು. ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಶ್ರೀರಾಮುಲು ಉತ್ತರಿಸಿದರು.

ಖಾಸಗಿ ವೈದ್ಯರಿಗೆ ಎಚ್ಚರಿಕೆ
ಚಾಮರಾಜನಗರ:
‘ದಿಗ್ಬಂಧನದ ಈ ಸಮಯದಲ್ಲಿ, ಖಾಸಗಿ ವೈದ್ಯರು ಕ್ಲಿನಿಕ್‌ ತೆರೆಯದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ದಂಡ ಹಾಕಬೇಕಾಗುತ್ತದೆ. ಪರವಾನಗಿ ರದ್ದುಪಡಿಸುವಂತಹ ಕ್ರಮಕ್ಕೂ ಮುಂದಾಗಬೇಕಾಗುತ್ತದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಬುಧವಾರ ಇಲ್ಲಿ ಎಚ್ಚರಿಸಿದರು.

‘ಖಾಸಗಿ ವೈದ್ಯರು ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಸುರಕ್ಷತಾ ಸಾಧನಗಳ ಕೊರತೆಯ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ವೈದ್ಯರು. ಇಂತಹ ಸಂದರ್ಭದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಬೇಕು. ಇದುವರೆಗೆ ನಾವು ಅವರನ್ನು ಏನೂ ಕೇಳಿಲ್ಲ. ಅವರೇ ವಾಣಿಜ್ಯ ಉದ್ದೇಶದಿಂದ ಕೆಲಸ ಮಾಡುತ್ತಿದ್ದರು. ಈಗ ಕ್ಲಿನಿಕ್‌ಗಳನ್ನು ಮುಚ್ಚಿದರೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೊರೆ ಜಾಸ್ತಿ ಆಗುತ್ತದೆ’ ಎಂದರು.

ಕಲಬುರ್ಗಿಯಲ್ಲಿ ಬುಧವಾರ ವೃದ್ಧರೊಬ್ಬರು ಮೃತಪಟ್ಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಾಜ್ಯದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟ ಮೊದಲ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರು’ ಎಂದು ಹೇಳಿದರು.

62 ಮಂದಿಯ ಮಾದರಿ ರವಾನೆ
ಚಾಮರಾಜನಗರ:
ತಬ್ಲೀಗ್‌ ಜಮಾತ್‌ನ ಧರ್ಮಸಭೆಗಳಲ್ಲಿ ಭಾಗವಹಿಸಿರುವ ಜಿಲ್ಲೆಯ 62 ಜನರ ಗಂಡಲಿನ ದ್ರವ ಹಾಗೂ ರಕ್ತದ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದ್ದಾರೆ.

ತಬ್ಲೀಗ್‌ ಜಮಾತ್‌ನೊಂದಿಗೆ ಒಡನಾಟ ಹೊಂದಿರುವ 85 ಜನರು ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಈ ಪೈಕಿ 23 ಜನರನ್ನುನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಕ್ವಾರೆಂಟೈನ್ ಕೇಂದ್ರ ಹಾಗೂ 62 ಜನರನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ವಾರೆಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT