ಶನಿವಾರ, ಜನವರಿ 16, 2021
19 °C
, 3 ಅಡಿ ಆಳ, ಅಗಲದ ಕಂದಕ

ಬಂಡೀಪುರ: ಮಾನವ – ಆನೆ ಸಂಘರ್ಷ ತಡೆಯುವ ಪ್ರಯತ್ನ, 30 ಕಿ.ಮೀ ಆನೆ ಕಂದಕ ನಿರ್ಮಾಣ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಮಾನವ–ಆನೆ ಸಂಘರ್ಷಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರೈಲ್ವೆ ಕಂಬಿ ಬೇಲಿಯ ಕಾಮಗಾರಿ ಆರಂಭವಾಗಿರುವುದರ ಬೆನ್ನಲ್ಲೇ ಆನೆ ಕಂದಕವನ್ನೂ ನಿರ್ಮಿಸಲಾಗುತ್ತಿದೆ. 

‌ಕಾಡಂಚಿನ ಗ್ರಾಮಗಳಿಗೆ ಹೊಂದಿಕೊಂಡಿರುವ ವಲಯಗಳಲ್ಲಿ ಕಂದಕ ನಿರ್ಮಾಣವಾಗುತ್ತಿದೆ. ಓಂಕಾರ, ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದುಕೆರೆ ವಲಯಗಳಲ್ಲಿ 30 ಕಿ.ಮೀಗಳಷ್ಟು ಉದ್ದದ ಆನೆ ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಬೋಳೇಗೌಡನ ಕಟ್ಟೆ ಮೀಸಲು ಅರಣ್ಯ ಪ್ರದೇಶದಂಚಿನಲ್ಲೇ 20 ಕಿ.ಮೀ ಉದ್ದ ಕಂದಕ ನಿರ್ಮಾಣವಾಗಲಿದೆ. 

ಹಿಂದೆ ಇದ್ದ ಕಂದಕಗಳು ಪೂರ್ಣವಾಗಿ ಮುಚ್ಚಿಹೋಗಿದ್ದರಿಂದ ಆನೆಗಳು ಸರಾಗವಾಗಿ ಜಮೀನಿಗೆ ದಾಳಿ ಮಾಡುತ್ತಿದ್ದವು. ಇದರಿಂದ ರೈತರು ಮತ್ತು ಅರಣ್ಯ ಇಲಾಖೆ ನಡುವೆ ಸಂಘರ್ಷ ಏರ್ಪಡುತ್ತಿತ್ತು.

ಹೆಡಿಯಾಲ ಮುಖ್ಯರಸ್ತೆ ಬಲ ಭಾಗದಿಂದ ಆರಂಭಗೊಂಡು ಯಡವನಹಳ್ಳಿ, ಶ್ರೀಕಂಠಪುರ, ಹೊಣಕನಪುರ ಗ್ರಾಮ ವ್ಯಾಪ್ತಿಯಲ್ಲಿ ಕಂದಕ ನಿರ್ಮಿಸಲಾಗುತ್ತಿದೆ.

‘ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ, ಮೇಲುಕಾಮನಹಳ್ಳಿ, ಆಂಜನೇಯ ಸ್ವಾಮಿ ಬೆಟ್ಟ ಬಳಿ, ಕುಂದುಕೆರೆ ವಲಯದಲ್ಲಿ ಬಾಚಹಳ್ಳಿ ಗ್ರಾಮದ ಬಳಿಯ ಮೆಣಸಿನಕಟ್ಟೆ ಬಳಿ 3 ಕಿ.ಮೀ ಕಂದಕ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ 5 ಕಿ.ಮೀ ಅವಶ್ಯಕತೆ ಇದ್ದು, ಇದಕ್ಕೆ ರೈಲ್ವೆ ಕಂಬಿ ತಡೆ ಬೇಲಿ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

ಹಿಂದೆ ಇದ್ದ ಕಂದಕ ಎರಡು ಮೀಟರ್ ಉದ್ದ ಹಾಗೂ ಅಗಲ ಇತ್ತು. ಮಳೆ, ಪ್ರಾಣಿಗಳ ಓಡಾಟ ಸೇರಿದಂತೆ ವಿವಿಧ ಕಾರಣಗಳಿಂದ ಕಂದಕಗಳು ಬಹುತೇಕ ಮುಚ್ಚಿಹೋಗಿದ್ದವು. ಹೊಸ ಕಂದಕ ತಲಾ ಮೂರು ಮೀಟರ್‌ ಅಗಲ ಮತ್ತು ಆಳ ಇದೆ. ಹೀಗಾಗಿ ಸುಲಭವಾಗಿ ವನ್ಯಪ್ರಾಣಿಗಳು ಕಂದಕ ದಾಟಿ ಬರಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

‘ತೊಂದರೆ ತಡೆಯುವ ಪ್ರಯತ್ನ’

ಈ ಬಗ್ಗೆ ‘ಪ‍್ರಜಾವಾಣಿ’ಯೊಂದಿಗೆ ಮಾತನಾಡಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಆನೆ ಸೇರಿದಂತೆ ಇತರೆ ಕಾಡುಪ್ರಾಣಿಗಳು ಗ್ರಾಮಗಳಿಗೆ ಬರಬಾರದು, ರೈತರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡುತ್ತಿದೆ. ಇದೀಗ ನಿರ್ಮಾಣವಾಗುತ್ತಿರುವ ಕಂದಕಗಳು ಹೆಚ್ಚು ಆಳ ಮತ್ತು ಅಗಲ ಇರುವುದರಿಂದ ಆನೆಗಳು ದಾಟಲು ಕಷ್ಟ’ ಎಂದರು. 

ರೈತರಿಗೆ ವರದಾನ: ‘ಅರಣ್ಯದಂಚಿನ ಗ್ರಾಮಗಳಲ್ಲಿ ಕೃಷಿ ಮಾಡುವ ರೈತರು ಕಾಡಾನೆಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಇಲ್ಲಿ ಬಹಳಷ್ಟು ಬಡ ರೈತರೇ ವಾಸವಾಗಿದ್ದು, ಅವರಿಗೆ ಕೃಷಿ ಬಿಟ್ಟರೆ ಬದುಕಲು ಬೇರೆ ಮಾರ್ಗಗಳಿಲ್ಲ. ಹೀಗಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಳೆ ಬೆಳೆಯುತ್ತಿದ್ದು, ಅದು ಕೈಗೆ ಬರಬೇಕೆನ್ನುವಷ್ಟರಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಜಮೀನಿಗೆ ನುಗ್ಗಿ ಫಸಲನ್ನೆಲ್ಲ ತಿಂದು, ತುಳಿದು ನಾಶ ಮಾಡಿ ಬಿಡುತ್ತಿವೆ. ಆನೆ ಕಂದಕಗಳು ನಿರ್ಮಾಣವಾಗುತ್ತಿರುವುದು ಅನೇಕ ಕಾಡಂಚಿನ ರೈತರಿಗೆ ವರದಾನವಾಗಿದೆ’ ಎಂದು ರೈತ ಹಂಗಳ ಮಹದೇವಪ್ಪ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು