ಸೋಮವಾರ, ನವೆಂಬರ್ 30, 2020
22 °C
ಜಿಲ್ಲೆಯಲ್ಲಿ ಕರ್ತವ್ಯ ನಿರತ ಮೂವರು ಪೊಲೀಸರು, ಇಬ್ಬರು ನಗರಸಭೆ ಸಿಬ್ಬಂದಿ, ಆಯುಷ್‌ ಅಧಿಕಾರಿ ಸಾವು

350 ಕೊರೊನಾ ಸೇನಾನಿಗಳಿಗೆ ತಗುಲಿದ ಸೋಂಕು

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19 ಹಾವಳಿ ಆರಂಭವಾದಾಗಿನಿಂದ ಇದುವರೆಗೆ ವಿವಿಧ ಇಲಾಖೆಗಳ 350 ಸಿಬ್ಬಂದಿಗೆ ಸೋಂಕು ತಗುಲಿದೆ. ಈ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ. ಉಳಿದವರೆಲ್ಲರೂ ಚೇತರಿಸಿಕೊಂಡಿದ್ದಾರೆ. 

ರಾಜ್ಯದಲ್ಲಿ ಕೋವಿಡ್‌ ಮೊದಲ ಪ್ರಕರಣ ದಾಖಲಾದ ಬಳಿಕ 100 ದಿನಗಳವರೆಗೆ ಜಿಲ್ಲೆಯಲ್ಲಿ ಕೋವಿಡ್‌ ಪತ್ತೆಯಾಗಿರಲಿಲ್ಲ. ಜೂನ್‌ ತಿಂಗಳ ಮೊದಲ ವಾರದಲ್ಲಿ ಮೊದಲ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗಿತ್ತು. 

ಕೋವಿಡ್‌–19 ನಿಯಂತ್ರಣ ಕಾರ್ಯದಲ್ಲಿ ಆರೋಗ್ಯ, ಪೊಲೀಸ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇವರನ್ನು ಸರ್ಕಾರ ಕೊರೊನಾ ಸೈನಿಕರು (ಕೊರೊನಾ ಸೈನಿಕರು) ಎಂದೇ ಗುರುತಿಸಿತ್ತು. ಕೋವಿಡ್‌ ಕರ್ತವ್ಯದಲ್ಲಿದ್ದಾಗ ಸೋಂಕು ತಗುಲಿ ಪ್ರಾಣ ಹಾನಿ ಸಂಭವಿಸಿದರೆ, ಅವರ ಕುಟುಂಬದವರಿಗೆ ₹30 ಲಕ್ಷ ಪರಿಹಾರಧನ ಕೊಡುವ ಘೋಷಣೆಯನ್ನೂ ಸರ್ಕಾರ ಮಾಡಿತ್ತು. 

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಲು ಆರಂಭಗೊಂಡ ನಂತರದ ಐದು ತಿಂಗಳ ಅವಧಿಯಲ್ಲಿ 350 ಮಂದಿ ಕೊರೊನಾ ಸೈನಿಕರು ಕೋವಿಡ್‌ಗೆ ತುತ್ತಾಗಿದ್ದಾರೆ. 

ಆರೋಗ್ಯ, ಪೊಲೀಸ್‌ ಇಲಾಖೆಯಲ್ಲಿ ಹೆಚ್ಚು: ವಿವಿಧ ಇಲಾಖೆಗಳ ಪೈಕಿ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆಯ ಹೆಚ್ಚಿನ ಸಿಬ್ಬಂದಿಗೆ ಸೋಂಕು ತಗುಲಿದೆ. ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಇಲಾಖೆಯ 131 ಸಿಬ್ಬಂದಿಗೆ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿ ಪೊಲೀಸ್‌ ಇಲಾಖೆ ಇದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಸೇರಿದಂತೆ 129 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್‌ನಿಂದ ಬಳಲಿದ್ದಾರೆ.

ಉಳಿದಂತೆ ಶಿಕ್ಷಣ ಇಲಾಖೆಯ 35 ಹಾಗೂ ಇತರ ಇಲಾಖೆಗಳ 55 ಸಿಬ್ಬಂದಿಗೆ ಸೋಂಕು ತಗುಲಿದೆ.

‘ಕೋವಿಡ್‌ ತಡೆ ಕಾರ್ಯದಲ್ಲಿ ಎಲ್ಲ ಇಲಾಖೆಗಳ ನೌಕರರು ಒಂದಲ್ಲ ಒಂದು ಕೆಲಸ ನಿರ್ವಹಿಸಿದ್ದಾರೆ. ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ಥಳೀಯ ಆಡಳಿತದ ನೌಕರರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಸೇನಾನಿಗಳು ಎಂದು ಗುರುತಿಸಿಕೊಂಡಿರುವ ಎಲ್ಲ ಸಿಬ್ಬಂದಿ ಕೋವಿಡ್‌ ರೋಗಿಗಳು ಹಾಗೂ ಜನರೊಂದಿಗೆ ಹೆಚ್ಚು ತೊಡಗಿಕೊಂಡಿರುವುದರಿಂದ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಅಗತ್ಯವಾದ ಎಲ್ಲ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡರೂ ‌ಕೆಲವರಿಗೆ ಸೋಂಕು ತಗುಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜಿಲ್ಲಾ ಆಸ್ಪತ್ರೆಯ ಮುಖ್ಯ  ಸರ್ಜನ್‌, ಸ್ಥಾನಿಕ ವೈದ್ಯಾಧಿಕಾರಿ ಸೇರಿದಂತೆ ಹಲವು ವೈದ್ಯರಲ್ಲಿ ಕೋವಿಡ್‌ ದೃಢಪಟ್ಟಿತ್ತು. ಸೂಕ್ತ ಚಿಕಿತ್ಸೆಯ ಅವರು ಚೇತರಿಸಿಕೊಂಡಿದ್ದರು. 

ಆರು ಮಂದಿ ಸಾವು: ಕೊರೊನಾ ವಾರಿಯರ್ಸ್‌ ಎಂದು ಗುರುತಿಸಿಕೊಂಡಿದ್ದ ಆರು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಮೂವರು ಪೊಲೀಸ್‌ ಇಲಾಖೆಯವರು. ಇಬ್ಬರು ಚಾಮರಾಜನಗರ ನಗರಸಭೆಯವರು. ಒಬ್ಬರು ಆಯುಷ್‌ ಇಲಾಖೆಯವರು. ಜಿಲ್ಲಾ ಆಯುಷ್‌ ಅಧಿಕಾರಿಯಾಗಿದ್ದ ಡಾ.ರಾಚಪ್ಪ ಅವರು ಮೈಸೂರಿನಲ್ಲಿ ಮೃತಪಟ್ಟಿದ್ದರು. 

ಮೃತಪಟ್ಟ ಪೊಲೀಸರಲ್ಲಿ ಒಬ್ಬರು ಚಾಮರಾಜನಗರ ಗ್ರಾಮಾಂತರ ಠಾಣೆಯ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಪರಮೇಶ್ವರಪ್ಪ. ಗುಂಡ್ಲುಪೇಟೆ ಠಾಣೆಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎನ್‌.ಸುರೇಶ್‌ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದ ರವಿಕುಮಾರ್‌ ಅವರು ಸೋಂಕಿಗೆ ಬಲಿಯಾಗಿದ್ದರು.  

ನಗರಸಭೆಯಲ್ಲಿ ಇಬ್ಬರು: ಚಾಮರಾಜನಗರ ನಗರಸಭೆಯ ಪರಿಸರ ಎಂಜಿನಿಯರ್‌ ಸೇರಿದಂತೆ ಆರು ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಇಬ್ಬರಿಗೆ ಕೋವಿಡ್‌ ಗೆಲ್ಲಲು ಸಾಧ್ಯವಾಗಿಲ್ಲ. ಕಿರಿಯ ಎಂಜಿನಿಯರ್‌ ಆಗಿದ್ದ ಸುಬ್ರಹ್ಮಣಿ ಹಾಗೂ ಬಿಲ್‌ ಕಲೆಕ್ಟರ್‌ ಆಗಿದ್ದ ಪುಟ್ಟಸ್ವಾಮಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.  

ಶಿಕ್ಷಣ ಇಲಾಖೆಯಲ್ಲಿ ಒಬ್ಬರು ಶಿಕ್ಷಕರು ಮೃತಪಟ್ಟಿದ್ದರಾದರೂ, ಅವರು ಕರ್ತವ್ಯದಲ್ಲಿರಲಿಲ್ಲ ಎಂದು ಹೇಳುತ್ತಾರೆ ಇಲಾಖೆ ಅಧಿಕಾರಿಗಳು.

ಪೊಲೀಸರ ಕುಟುಂಬಕ್ಕೆ ಸಿಕ್ಕಿದ ಪರಿಹಾರ

ಮೃತಪಟ್ಟವರ ಪೈಕಿ ಮೂವರು ಪೊಲೀಸರ ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ ಸಿಕ್ಕಿದೆ. ನಗರಸಭೆಯ ಸಿಬ್ಬಂದಿಗೆ ಪರಿಹಾರ ಕೊಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

’ಮೃತಪಟ್ಟ ಕೊರೊನಾ ಸೇನಾನಿಗಳ ಕುಟುಂಬಕ್ಕೆ ಸರ್ಕಾರ ₹30 ಲಕ್ಷ ಘೋಷಿಸಿದ್ದು, ಆಯಾ ಇಲಾಖೆಗಳೇ ತಮ್ಮ ಸಿಬ್ಬಂದಿಗೆ ಪರಿಹಾರ ಕೊಡಿಸುವ ಪ್ರಕ್ರಿಯೆ ಕೈಗೊಳ್ಳಬೇಕು’ ಎಂದು ಡಾ.ಎಂ.ಸಿ.ರವಿ ಅವರು ಹೇಳಿದರು.  

‘ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ 129 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ಮೂವರು ಮರಣ ಹೊಂದಿದ್ದು, ಅವರ ಕುಟುಂಬಕ್ಕೆ ಈಗಾಗಲೇ ಇಲಾಖೆಯಿಂದ ಪರಿಹಾರ ಸಿಕ್ಕಿದೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಮ್ಮ ಇಬ್ಬರು ಸಿಬ್ಬಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದು, ಪ‍ರಿಹಾರಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಶೀಘ್ರವಾಗಿ ಅವರ ಕುಟುಂಬದವರಿಗೆ ಪರಿಹಾರ ಮೊತ್ತ ಸಿಗಲಿದೆ’ ಎಂದು ನಗರಸಭೆ ಆಯುಕ್ತ ಎಂ.ರಾಜಣ್ಣ ಅವರು ಹೇಳಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು