ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಮುಂದುವರೆದ ಸಾವಿನ ಸರಣಿ

ಗುಂಡ್ಲುಪೇಟೆಯ 64 ವರ್ಷದ ವ್ಯಕ್ತಿ ಸಾವು, ಹೊಸದಾಗಿ ಒಂದು ಪ್ರಕರಣ ದಾಖಲು, 18 ಮಂದಿ ಗುಣಮುಖ
Last Updated 14 ಜುಲೈ 2020, 14:34 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19 ಕಾರಣದಿಂದ ಜಿಲ್ಲೆಯಲ್ಲಿ ಮತ್ತೊಂದು ಸಾವಾಗಿದೆ.

ನಗರದ ಕೋವಿಡ್‌ ಆಸ್ಪ‍ತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಗುಂಡ್ಲುಪೇಟೆಯ 64 ವರ್ಷದ ವ್ಯಕ್ತಿಯೊಬ್ಬರು (ರೋಗಿ ಸಂಖ್ಯೆ 25,133) ಸೋಮವಾರ ರಾತ್ರಿ 10.41ಕ್ಕೆ ಮೃತಪ‍ಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿದೆ.

ಜುಲೈ 6ರಂದು ಇವರಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ತಕ್ಷಣ ಅವರನ್ನು ಕೋವಿಡ್‌–19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ಇದ್ದುದರಿಂದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ವೃತ್ತಿಯಿಂದ ಮರದ ವ್ಯಾಪಾರಿಯಾಗಿರುವ ವ್ಯಕ್ತಿಯು ಈ ಹಿಂದೆ ಗುಂಡ್ಲುಪೇಟೆಯ ಎಪಿಎಂಸಿಯ ನಿರ್ದೇಶಕರೂ ಆಗಿದ್ದರು. ಅವರ ಪತ್ನಿ, ಮಗ, ಮಗಳು ಮತ್ತು ಅಳಿಯ ಕೂಡ ಕೋವಿಡ್‌–19ಗೆ ತುತ್ತಾಗಿದ್ದಾರೆ.

ಅಂತ್ಯಕ್ರಿಯೆ: ಸರ್ಕಾರದ ಶಿಷ್ಟಾಚಾರದಂತೆ ಮೃತರ ಅಂತ್ಯಸಂಸ್ಕಾರ ನಡೆಸಲಾಯಿತು. ನಗರದಲ್ಲಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಸ್ಮಶಾನದಲ್ಲಿಪಿಎಫ್‌ಐ ಸ್ವಯಂ ಸೇವಕರು, ಪ್ರಾರ್ಥನೆ ಸೇರಿದಂತೆ ಮುಸ್ಲಿಂ ವಿಧಿವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿದರು.

18ಮಂದಿ‌ ಗುಣಮುಖ: ಈ ಮಧ್ಯೆ, ಆರು ವರ್ಷದ ಬಾಲಕ ಸೇರಿದಂತೆ 18 ಮಂದಿ ಮಂಗಳವಾರ ಕೋವಿಡ್‌–19ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಹೊಸದಾಗಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 29,079ರ ಸಂಪರ್ಕಿತರಾಗಿರುವ ಕೊಳ್ಳೇಗಾಲದ 62 ವರ್ಷದ ಮಹಿಳೆ ಕೋವಿಡ್‌–19ಗೆ ತುತ್ತಾದವರು. ಇವರು ಮೈಸೂರಿನಲ್ಲಿ ಗಂಟಲು ದ್ರವದ ಪರೀಕ್ಷೆ ನಡೆಸಿದ್ದರು.

ಮಂಗಳವಾರದ ಅಂಕಿ ಅಂಶಗಳೂ ಸೇರಿದಂತೆಜಿಲ್ಲೆಯಲ್ಲಿ ಇದುವರೆಗೆ 188 ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. 111 ಮಂದಿ ಗುಣಮುಖರಾಗಿದ್ದಾರೆ. ಸದ್ಯ 74 ಸಕ್ರಿಯ ಪ್ರಕರಣಗಳಿವೆ.

ಮಂಗಳವಾರ ತೀವ್ರ ನಿಗಾ ಘಟಕಕ್ಕೆ ಮತ್ತಿಬ್ಬರು ದಾಖಲಾಗಿದ್ದು, ಒಟ್ಟು ನಾಲ್ವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಂಡ್ಲುಪೇಟೆಯವರು ಹೆಚ್ಚು ಜನ: ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದ 18 ಮಂದಿಯಲ್ಲಿ ಗುಂಡ್ಲುಪೇಟೆಯವರೇ ಹೆಚ್ಚಿದ್ದಾರೆ. 14 ಮಂದಿ ಗುಂಡ್ಲುಪೇಟೆ ಪಟ್ಟಣ ಹಾಗೂ ತಾಲ್ಲೂಕಿನವರಿದ್ದಾರೆ. ಕೊಳ್ಳೇಗಾಲ ತಾಲ್ಲೂಕಿನವರು ಮೂವರು ಹಾಗೂ ಚಾಮರಾಜನಗರದ ಒಬ್ಬರು ಇದ್ದಾರೆ.

ಗುಂಡ್ಲುಪೇಟೆಯ ಕಾರ್ಖಾನೆ ಬೀದಿಯ ಆರು ವರ್ಷದ ಗಂಡು ಮಗು ಸೋಂಕು ಮುಕ್ತನಾದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದರೆ, ಗುಂಡ್ಲುಪೇಟೆಯ ಕೋಟೆಬೀಡುವಿನ 65 ವರ್ಷ ಪುರುಷ ಅತ್ಯಂತ ಹಿರಿಯ ವ್ಯಕ್ತಿ.

ವರದಿ ವಿಳಂಬ, ಜನರ ಒದ್ದಾಟ

ಜಿಲ್ಲೆಯಲ್ಲಿ ಗಂಟಲು ದ್ರವ ಸಂಗ್ರಹ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಅದಕ್ಕೆ ತಕ್ಕಂತೆ ಪ್ರಯೋಗಾಲಯದಲ್ಲಿ ಕೋವಿಡ್‌–19 ಪರೀಕ್ಷೆಗಳು ನಡೆಯುತ್ತಿಲ್ಲ. ಇದರಿಂದಾಗಿ ಪರೀಕ್ಷಾ ವರದಿಗಾಗಿ ಕಾಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

‘ಗಂಟಲು ದ್ರವ ಮಾದರಿಯನ್ನು ಕೊಟ್ಟು ನಾಲ್ಕು ದಿನಗಳಾದರೂ ವರದಿ ಬಂದಿಲ್ಲ. ಇದರಿಂದಾಗಿ ಆತಂಕ ಹೆಚ್ಚಾಗುತ್ತಿದೆ. ಶೀಘ್ರವಾಗಿ ವರದಿ ಬರುವಂತೆ ಮಾಡಲು ಕ್ರಮ ವಹಿಸಬೇಕು’ ಎಂದು ಸಾರ್ವಜನಿಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಯೋಗಾಲಯಕ್ಕೆ ಒಂದು ಬಾರಿ 312 ಮಾದರಿಗಳನ್ನು ಪರೀಕ್ಷೆ ನಡೆಸುವ ಸಾಮರ್ಥ್ಯ ಇದೆ. ಸಿಬ್ಬಂದಿಯ ಕೊರತೆ ಇದ್ದರೂ, ಪ್ರಯೋಗಾಲಯದ ತಂತ್ರಜ್ಞರು ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸಲು ಶ್ರಮಿಸುತ್ತಿದ್ದಾರೆ. ಹಾಗಿದ್ದರೂ, ಪ್ರತಿ ದಿನ ಸಂಗ್ರಹ ಮಾಡುವ ಗಂಟಲ ದ್ರವ ಮಾದರಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷೆ ನಡೆಯುತ್ತಿಲ್ಲ. ಇದರಿಂದಾಗಿ ಜನರು ಹೆಚ್ಚು ದಿನ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ಒಟ್ಟು 613 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ. ಇನ್ನೂ 1,914 ಮಾದರಿಗಳ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 12,251 ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು, 12,264 ವರದಿಗಳು ನೆಗೆಟಿವ್‌ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT