ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲೀಗ್ ಜಮಾತ್‌: 80 ಮಂದಿ ಕ್ವಾರಂಟೈನ್‌ಗೆ

ವಿವಿಧ ಕಡೆ ಧಾರ್ಮಿಕ ಸಭೆಗಳಲ್ಲಿ ಭಾಗಿ. 22 ಮಂದಿಯ ಗಂಟಲ ದ್ರವ, ರಕ್ತದ ಮಾದರಿ ಪರೀಕ್ಷೆಗೆ ರವಾನೆ
Last Updated 6 ಏಪ್ರಿಲ್ 2020, 15:14 IST
ಅಕ್ಷರ ಗಾತ್ರ

ಚಾಮರಾಜನಗರ: ತಬ್ಲೀಗ್ ಜಮಾತ್‌ನೊಂದಿಗೆ ಒಡನಾಟ ಹೊಂದಿರುವ, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿರುವ 80 ಜನರನ್ನು ಜಿಲ್ಲೆಯಲ್ಲಿ ಗುರುತಿಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಜಿಲ್ಲಾಡಳಿತ ಕ್ವಾರಂಟೈನ್‌ನಲ್ಲಿ ಇಡಲು ನಿರ್ಧರಿಸಿದೆ.

ಮಾರ್ಚ್‌ 13ರಿಂದ 15ರವರೆಗೆ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಜಿಲ್ಲೆಯಲ್ಲಿ ಒಬ್ಬರೇ ಇದ್ದು, ಅವರನ್ನು ಈಗಾಗಲೇ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಬ್ಲೀಗ್‌ ಜಮಾತ್‌ಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.

‘ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾದವರ ಮಾಹಿತಿಯನ್ನು ಕಲೆ ಹಾಕುವ ಸಂದರ್ಭದಲ್ಲಿ ತಬ್ಲೀಗ್‌ ಜಮಾತ್‌ನೊಂದಿಗೆ ಸಂಬಂಧ ವಿಟ್ಟುಕೊಂಡಿರುವ ಮೂರು ನಾಲ್ಕು ಗುಂಪುಗಳಿರುವುದು ತಿಳಿದು ಬಂತು. ಒಂದು 12 ಮಂದಿ ಗೋಧ್ರಾ, ಆಗ್ರಾ, ಮುಂಬೈಗಳಿಗೆ ಪ್ರವಾಸ ಮಾಡಿ ವಾಪಸ್‌ ಆಗಿದ್ದಾರೆ. ಹನೂರು ತಾಲ್ಲೂಕಿನ ರಾಮಾಪುರದ 10 ಮಂದಿ ಧಾರ್ಮಿಕ ಸಭೆಗಳಲ್ಲಿ ಭಾಗವಹಿಸಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ’ ಎಂದು ಅವರು ಹೇಳಿದರು.

‘ಚಾಮರಾಜನಗರದ ನಾಗವಳ್ಳಿಯ ಮಸೀದಿಯೊಂದರಲ್ಲಿ ಗುಜರಾತ್‌ನ 12 ಮಂದಿ ಧರ್ಮಗುರುಗಳು ಆಶ್ರಯ ಪಡೆದಿದ್ದಾರೆ. ಇವರಲ್ಲದೇ ನಗರದ ಗಾಳಿಪುರದ 46 ಮಂದಿ ಇಂಡೊನೇಷ್ಯಾ ಹಾಗೂ ದೇಶದ ವಿವಿಧ ಕಡೆಗಳಿಗೆ ಭೇಟಿ ನೀಡಿ ಬಂದಿರುವುದು ಗೊತ್ತಾಗಿದೆ’ ಎಂದು ಹೇಳಿದರು.

‘ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ತಬ್ಲೀಗ್‌ ಜಮಾತ್‌ನೊಂದಿಗೆ ಗುರುತಿಸಿಕೊಂಡಿದ್ದಾರೆ. ಮಾರ್ಚ್‌ 15ಕ್ಕಿಂತಲೂ ಮೊದಲು ದೇಶದ ವಿವಿಧ ಕಡೆಗಳಲ್ಲಿ ನಡೆದಿರುವ ಧಾರ್ಮಿಕ ಸಭೆಗಳಲ್ಲಿ ಇವರು ಭಾಗವಹಿಸಿರುವ ಸಾಧ್ಯತೆ ಇದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಗಾಳಿಪುರದ 46 ಮಂದಿಯ ಪೈಕಿ ಎಂಟು ಮಂದಿ ಇಂಡೊನೇಷ್ಯಾಕ್ಕೆ ಹೋಗಿ ಬಂದಿದ್ದಾರೆ. 2019ರ ಸೆಪ್ಟೆಂಬರ್‌ನಲ್ಲಿ ಹೋಗಿ 2020ರ ಫೆಬ್ರುವರಿಯಲ್ಲಿ ಬಂದಿದ್ದಾರೆ. ಉಳಿದವರ ಬಳಿ ಪಾಸ್‌ಪೋರ್ಟ್‌ ಇಲ್ಲ. ಹಾಗಾಗಿ, ಅವರು ವಿದೇಶಕ್ಕೆ ಹೋಗಿಲ್ಲ. ಪೊಲೀಸರು ಇವರ ಪ್ರಯಾಣದ ವಿವರಗಳನ್ನು ಕಲೆ ಹಾಕುತ್ತಿದ್ದಾರೆ’ ಎಂದರು.

‘ಸರ್ಕಾರ ಈ ಮೊದಲು, ಮಾರ್ಚ್‌ 12ರಿಂದ 15ರವರೆಗೆ ನಡೆದಿದ್ದ ಸಮಾವೇಶದಲ್ಲಿ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚಿ, ಕ್ವಾರಂಟೈನ್‌ ಮಾಡುವಂತೆ ಸೂಚಿಸಿತ್ತು. ಭಾನುವಾರ ಹೊಸ ಆದೇಶ ಹೊರಡಿಸಿ, ತಬ್ಲೀಗ್‌ ಜಮಾತ್‌ನೊಂದಿಗೆ ಸಂಬಂಧ ಇರುವವರನ್ನೆಲ್ಲ ಪತ್ತೆ ಹಚ್ಚಿ ಆರೋಗ್ಯದ ಮೇಲೆ ನಿಗಾ ಇಡುವಂತೆ ಸೂಚಿಸಿದೆ. ಅದರಂತೆ ಈ ಎಲ್ಲ 80 ಜನರನ್ನು ಅಂಬೇಡ್ಕರ್‌ ಭವನದಲ್ಲಿರುವ ವಿಶೇಷ ನಿಗಾ ಘಟಕದಲ್ಲಿ ಇರಿಸಲು ನಿರ್ಧರಿಸಲಾಗಿದೆ. ಇವರಲ್ಲಿ ಯಾರೂ ರೋಗ ಲಕ್ಷಣ ಹೊಂದಿಲ್ಲ. ಹಾಗಾಗಿ ಜಿಲ್ಲೆಯ ಜನರು ಆತಂಕ ಪಡಬೇಕಾಗಿಲ್ಲ’ ಎಂದು ಹೇಳಿದರು.

‘ನಾಗವಳ್ಳಿ ಮಸೀದಿಯಲ್ಲಿದ್ದ 12 ಧರ್ಮಗುರುಗಳು ಹಾಗೂ ರಾಮಾಪುರದ 10 ಮಂದಿಯ ಗಂಟಲ ದ್ರವ ಹಾಗೂ ರಕ್ತದ ಮಾದರಿಗಳನ್ನು ಮೈಸೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.

29 ಮಂದಿ ಮನೆಗೆ: ‘ನಂಜನಗೂಡಿನ ಔಷಧ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ 29 ಮಂದಿಯನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ. ಸದ್ಯ, ಅಂಬೇಡ್ಕರ್‌ ಭವನದ ವಿಶೇಷ ನಿಗಾ ಘಟಕದಲ್ಲಿ 30 ಮಂದಿ ಹಾಗೂ ತಬ್ಲೀಗ್‌ ಜಮಾತೆಗೆ ಸಂಬಂಧಿಸಿದ 80 ಮಂದಿ ಸೇರಿ 110 ಜನರು ಇದ್ದಾರೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 479 ನ್ಯಾಯಬೆಲೆ ಅಂಗಡಿಗಳಲ್ಲಿ ಎರಡು ತಿಂಗಳ ಮುಂಗಡ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸದ್ಯ ನ್ಯಾಯಬೆಲೆ ಅಂಗಡಿಯವರು ಎತ್ತುವಳಿ ಮಾಡುತ್ತಿದ್ದಾರೆ. ಬಯೊಮೆಟ್ರಿಕ್‌ ಬದಲಿಗೆ, ಒಟಿಪಿ ಕಡ್ಡಾಯ ಮಾಡಲಾಗಿದೆ. ಒಟಿಪಿಯೂ ಕಡ್ಡಾಯ ಅಲ್ಲ ಎಂದು ಈಗ ಆದೇಶ ಬಂದಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ.ಎಲ್‌.ಆನಂದ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಇದ್ದರು.

ಕೋಮು ಸೌಹಾರ್ದ ಕಾ‍ಪಾಡಿ: ಎಸ್‌ಪಿ ಮನವಿ

‘ದೇಶದಾದ್ಯಂತ ತಬ್ಲೀಗ್‌ ಜಮಾತ್‌ಗೆ ಸಂಬಂಧಿಸಿದವರು ಕೊರೊನಾ ವೈರಸ್‌ಗೆ ತುತ್ತಾಗುತ್ತಿರುವ ವಿಚಾರವಾಗಿ ದೇಶದ ವಿವಿಧ ಕಡೆಗಳಲ್ಲಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಘಟನೆಗಳು ನಡೆಯುತ್ತಿವೆ. ಈ ರೋಗ ಯಾರಿಗೂ ಹೇಳಿ ಕೇಳಿ ಬರುವುದಿಲ್ಲ. ಇದರಲ್ಲಿ ಮುಸ್ಲಿಮರ ತಪ್ಪಿಲ್ಲ. ಅವರಿಗೆ ಅರಿವಿಲ್ಲದಂತೆ ಸೋಂಕು ತಗುಲಿದೆ. ನಮ್ಮ ಜಿಲ್ಲೆ ಕೋಮು ಸೌಹಾರ್ದಕ್ಕೆ ಹೆಸರಾಗಿದ್ದು, ಅದನ್ನು ಹಾಳು ಮಾಡಲು ಯಾರೂ ಕೈಹಾಕಬಾರದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ಮನವಿ ಮಾಡಬಾರದು.

ಮನೆಯಿಂದ ಹೊರ ಬರದಿರಿ: ‘ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಲವು ನಿರ್ಬಂಧಗಳನ್ನು ಹೇರಿದೆ. ಇದನ್ನು ಎಲ್ಲರೂ ಪಾಲಿಸಬೇಕು. ಅನಗತ್ಯವಾಗಿ ಹೊರಗಡೆ ಓಡಾಡಬಾರದು. ಜನರಿಗೆ ತೊಂದರೆ ಕೊಡುವುದು ಬೇಡ ಎಂದು ನಾವು ಮೃದು ಧೋರಣೆ ಹೊಂದಿದ್ದೇವೆ. ಅದನ್ನು ದುರ್ಬಳಕೆ ಮಾಡಬಾರದು’ ಎಂದರು.

‘ಅನಗತ್ಯವಾಗಿ ಸುತ್ತಾಡಿದವರ 530 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕೆಲವರಿಗೆ ಎಚ್ಚರಿಕೆ ನೀಡಿ ವಾಪಸ್‌ ಕಳುಹಿಸಲಾಗಿದೆ. ಹೀಗೆ ಮುಂದುವರಿದರೆ ಜಪ್ತಿ ಮಾಡಿದ ವಾಹನಗಳನ್ನು ದಿಗ್ಬಂಧನ ಮುಗಿಯುವವರೆಗೆ ಕೊಡದೆ ಇರಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT