ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆಯ ಬರಗಿಯಲ್ಲಿ ರೈತರೊಂದಿಗೆ ಒಂದು ದಿನ: ಕೃಷಿ ಸಚಿವ ಭಾಗಿ

ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ, ರೈತರೊಂದಿಗೆ ಸಂವಾದ
Last Updated 22 ಜನವರಿ 2021, 16:27 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನಬರಗಿಯಲ್ಲಿ ಶನಿವಾರ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ನಡೆಯಲಿದ್ದು, ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 8.30ಕ್ಕೆಮಾಡ್ರಹಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

9 ಗಂಟೆಗೆ ಮುಂಟೀಪುರ ಗ್ರಾಮದಲ್ಲಿ ಕ್ಷೇತ್ರ ಚಟುವಟಿಕೆಗಳ ಕಾರ್ಯಕ್ರಮ ಆರಂಭವಾಗಲಿದ್ದು, ರೈತರಾದ ರಾಜಶೇಖರ್ ಅವರ ಜಮೀನಿನಲ್ಲಿ ನಾನಾ ಸಮಗ್ರ ಕೃಷಿ ಚಟುವಟಿಕೆಗಳು ನಡೆಯಲಿವೆ.

ಜಮೀನಿನಲ್ಲಿ ರಾಶಿ ಪೂಜೆ, ಮಜ್ಜಿಗೆ ಕಡೆಯುವುದು, ಕೃಷಿ ಹೊಂಡಕ್ಕೆ ಮೀನುಮರಿ ಬಿಡುವುದು, ರೈತ ಮಹಿಳೆಯರಿಂದ ಹಸಿಮೆಣಸಿನಕಾಯಿ ಕೀಳುವ ಸ್ಪರ್ಧೆ, ಬೀಟ್‌ರೂಟ್‌ ಫಸಲಿಗೆ ನೀರು ಹಾಯಿಸುವುದು, ಬಾಳೆ ಗಿಡಕ್ಕೆ ಲಘು ಪೋಷಕಾಂಶ ಮಿಶ್ರಣ ಸಿಂಪಡಣೆ, ಟೊಮೆಟೊ, ಬೀನ್ಸ್ ಕೊಯ್ಲು, ಫಸಲಿಗೆ ರಸಗೊಬ್ಬರ ನೀಡುವಿಕೆ, ಬಾಳೆ, ಕಲ್ಲಂಗಡಿ, ಮೆಣಸಿನಕಾಯಿಯಂತಹ ಮಿಶ್ರ ಬೆಳೆ ಬೇಸಾಯ ವೀಕ್ಷಣೆ, ಮೇವಿನ ಬೆಳೆ ನಾಟಿ, ಕೂರಿಗೆ ಯಂತ್ರದಲ್ಲಿ ಬಿತ್ತನೆ ಕಾರ್ಯ, ಅರಣ್ಯ ಸಸಿ ನೆಡುವಿಕೆ, ಮೇವು ಜೋಳ ಕತ್ತರಿಸುವ ಕಾರ್ಯ, ಹಸು ಮೇಕೆಗಳಿಗೆ ಮೇವು ಹಾಕುವ ಕಾರ್ಯ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳು ನಡೆಯಲಿವೆ.

ಮುಂಟೀಪುರ ಗ್ರಾಮದಲ್ಲಿ ಸಚಿವರು ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ವಿವಿಧ ಕಲಾ ತಂಡಗಳೊಂದಿಗೆ ಎತ್ತಿನ ಗಾಡಿಗಳ ಮೆರವಣಿಗೆಯೂ ಬರಗಿ ಗ್ರಾಮದಿಂದ ವೇದಿಕೆ ಕಾರ್ಯಕ್ರಮದ ಸ್ಥಳದವರೆಗೆ ನಡೆಯಲಿದೆ.

ಬರಗಿಯ ಜೆಎಸ್ಎಸ್. ಪ್ರೌಢಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದ್ದು, ಇಲಾಖೆಗೆ ಸಂಬಂಧಿಸಿದ ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ಬಿ.ಸಿ.ಪಾಟೀಲ ಅವರು ಮಾಡಲಿದ್ದಾರೆ. ಸವಲತ್ತುಗಳ ವಿತರಣೆಯೂ ನಡೆಯಲಿದೆ.

ಸನ್ಮಾನ: ಕಾರ್ಯಕ್ರಮದಲ್ಲಿಸಾಧಕ ರೈತರಾದ ಜಿಲ್ಲೆಯ ಹರದನಹಳ್ಳಿ ಹೋಬಳಿಯ ಬೇವಿನತಾಳಪುರದ ಮಹದೇವಯ್ಯ, ಪರ್ವತಯ್ಯ, ಚಂದಕವಾಡಿ ಹೋಬಳಿಯ ಬಸವಣ್ಣ, ಸಂತೇಮರಹಳ್ಳಿ ಹೋಬಳಿಯ ಜನ್ನೂರಿನ ದಯಚಂದ್ರಕುಮಾರ್, ಸಿಂಗನಪುರದ ಚಿನ್ನಸ್ವಾಮಿ, ಬೇಗೂರು ಹೋಬಳಿಯ ಸಾವಕನಹಳ್ಳಿಯ ಚಿಕ್ಕತಾಯಮ್ಮ, ಕುರುಬರಹುಂಡಿಯ ಕೆ.ಪಿ. ಶಿವರಾಜು, ಬ್ಯಾಡಮೂಡ್ಲುವಿನ ಚೆನ್ನಿಗಶೆಟ್ಟಿ, ಶಿವಪುರದ ಸಿದ್ದರಾಜಪ್ಪ, ಲಕ್ಕೂರಿನ ಬಸವರಾಜಪ್ಪ ಅವರನ್ನು ಸಚಿವರು ಸನ್ಮಾನಿಸಲಿದ್ದಾರೆ.

ಹೋಬಳಿ ಕೇಂದ್ರಗಳಿಂದಲೂ ರೈತರೊಂದಿಗೆ ಗೂಗಲ್ ಮೀಟ್ ಮೂಲಕ ಸಂವಾದ ಕಾರ್ಯಕ್ರಮ ಸಹ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ.

ಭಾನುವಾರ ಕೃಷಿ ಕಾಲೇಜಿಗೆ ಭೇಟಿ

ಶನಿವಾರದ ಕಾರ್ಯಕ್ರಮ ಮುಗಿಸಿ ಗುಂಡ್ಲುಪೇಟೆಯಲ್ಲೇ ವಾಸ್ತವ್ಯ ಹೂಡುವ ಬಿ.ಸಿ.ಪಾಟೀಲ ಅವರು ಭಾನುವಾರ (ಜ.24) ಬೆಳಿಗ್ಗೆ 9 ಗಂಟೆಗೆ ತೆರಕಣಾಂಬಿ, ಕೊತ್ತಲವಾಡಿ, ಅರಕಲವಾಡಿ, ಅಮಚವಾಡಿ ಗ್ರಾಮಗಳಿಗೆ ಭೇಟಿ ನೀಡುವರು.

ಮಧ್ಯಾಹ್ನ 12.30ಕ್ಕೆ ಹರದನಹಳ್ಳಿಯ ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT