ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿ ಅಳವಡಿಸಿ: ರೈತರಿಗೆ ಬಿ.ಸಿ.ಪಾಟೀಲ ಸಲಹೆ

Last Updated 23 ಜನವರಿ 2021, 15:53 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಕೃಷಿಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರೈತರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಪ್ರತಿಪಾದಿಸಿದರು.

ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಸ್ರೇಲ್ ಬದಲು ರೈತರು ಕೋಲಾರ ಮಾದರಿ ಅನುಸರಿಸಿದರೆ ಹೆಚ್ಚಿನ ಲಾಭ ಗಳಿಸಬಹುದು. ಜೊತೆಗೆ ಪ್ರಗತಿಪರ ರೈತರು ಮಾಡುವ ಕೃಷಿ ನೀತಿ ತಿಳಿದು ಅದನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡು ವಿವಿಧ ಬಗೆಯ ಮಿಶ್ರ ಬೇಸಾಯ ಮಾಡಬೇಕು. ಹೈನುಗಾರಿಕೆಯಿಂದ ಅಧಿಕ ಆದಾಯವಿದ್ದು, ಕುರಿ, ಕೋಳಿ ಸಾಕಾಣಿಕೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ತಿಳಿಸಿದರು.

‘ಕೃಷಿ ಇಲಾಖೆ ಮುಳ್ಳಿನ ಹಾಸಿಗೆ. ಇದರಲ್ಲಿ ಜೈಕಾರಕ್ಕಿಂತ ಧಿಕ್ಕಾರವೇ ಜಾಸ್ತಿ. ಆದರೂ ಮುಖ್ಯಮಂತ್ರಿಗಳು ನೀಡಿದ್ದ ಅರಣ್ಯ ಖಾತೆ ಬದಲು ಇಷ್ಟಪಟ್ಟು ಕೃಷಿ ಇಲಾಖೆ ಆಯ್ಕೆ ಮಾಡಿಕೊಂಡೆ. ಕೋವಿಡ್ ಲಾಕ್ ಡೌನ್ ವೇಳೆಯಲ್ಲಿ ಎಲ್ಲಾ ಕೆಲಸಗಳು ಸ್ತಬ್ಧವಾಗಿದ್ದರೂ ಯಡಿಯೂರಪ್ಪ ಅವರ ವಿಶೇಷ ಕಾಳಜಿ ಮೇರೆಗೆ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು. ಇದರಿಂದ ರೈತರು ನಿಟ್ಟುಸಿರು ಬಿಡುವಂತಾಯಿತು’ ಎಂದರು.

‘ವಿಧಾನಸೌಧದಲ್ಲಿ ಕುಳಿತರೆ ಸಾಲದು. ಜನರ ಬಳಿಗೆ ಹೋಗಿ ಸಮಸ್ಯೆ ಅರಿಯಬೇಕು ಎಂಬ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲೂ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದರಿಂದ ಸರ್ಕಾರ ಮತ್ತು ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬರುವಂತಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಮಸ್ಯೆ ಆಲಿಸಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ನಮ್ಮ ಉದ್ದೇಶ’ ಎಂದು ಹೇಳಿದರು.

ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರಲು ದಲ್ಲಾಳಿಗ ಕಾರಣ. ಇವರ ಹಾವಳಿಯಿಂದ ರೈತ ಅಭಿವೃದ್ಧಿ ಕಾಣದಂತಾಗಿದ್ದಾನೆ. ಹೀಗಾಗಿ ನೀವೇ ಸಂಸ್ಕರಣೆ ಮಾಡಿ ಅದನ್ನು ಮಾರುಕಟ್ಟೆಗೆ ಕಳುಹಿಸಬೇಕು’ ಎಂದರು.

ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ‘ಗುಂಡ್ಲುಪೇಟೆಯಲ್ಲಿ ಯಾವುದೇ ನೀರಾವರಿ ಸೌಲಭ್ಯ ಇಲ್ಲದಿದ್ದರೂ ಕೃಷಿ ಅವಲಂಬಿತ ಕ್ಷೇತ್ರವಾಗಿದೆ. 500 ಅಡಿ ಕೊರೆದರು ನೀರು ಬರದಂತಹ ಪರಿಸ್ಥಿತಿ ಇದ್ದು, ಸಚಿವರು ತಾಲ್ಲೂಕಿನ ಬಗ್ಗೆ ವಿಶೇಷ ಆದ್ಯತೆ ನೀಡಬೇಕು’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಹತ್ತಕ್ಕೂ ಹೆಚ್ಚು ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.

ಸರ್ಕಾರ ರೈತರ ಪರವಾಗಿದೆ’

ಇದಕ್ಕೂ ಮೊದಲು ರೈತರೊಂದಿಗಿನ ಸಂವಾದದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ ಅವರು, ‘ರಾಜ್ಯ ಸರ್ಕಾರ ರೈತರ ಪರವಾಗಿದೆ. ರೈತರ ಕಲ್ಯಾಣಕ್ಕಾಗಿ ಅಗತ್ಯವಿರುವ ಸೌಲಭ್ಯ, ಸವಲತ್ತುಗಳನ್ನು ಒದಗಿಸಿ ರೈತರನ್ನು ಸ್ವಾವಲಂಬಿಗಳಾಗಿ ಮಾಡಲು ಬದ್ಧವಾಗಿದೆ’ ಎಂದರು.

‘ರಾಜ್ಯದಲ್ಲಿ ಬಾಕಿ ಇರುವ 900 ಗ್ರಾಮಗಳನ್ನು ಪೋಡಿ ಗ್ರಾಮಗಳಾಗಿ ಮಾರ್ಪಡಿಸಲು ಸರ್ಕಾರ ಚಿಂತನೆ ನಡೆಸಿದೆ. ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು. ರೈತರ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ಸಂಬಂಧ ಮಾಹಿತಿ ನೀಡಲು ಎರಡು ಗ್ರಾಮ ಪಂಚಾಯಿತಿಗೆ ಒಬ್ಬರಂತೆ 3266 ರೈತಮಿತ್ರರನ್ನು ನಿಯೋಜಿಸಲು ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ. ಅದನ್ನು ಶೀಘ್ರವೇ ಜಾರಿಗೊಳಿಸಲು ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT