ಸೋಮವಾರ, ಜನವರಿ 24, 2022
20 °C

ಚಾಮರಾಜನಗರ: ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧಿಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಮೂರು ವರ್ಷಗಳ ಹಿಂದೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಮೈಸೂರಿನ ಕಾರಾಗೃಹದಿಂದ ನಗರಕ್ಕೆ ಕರೆತಂದಿದ್ದಾಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಬಳ್ಳಾರಿಯಲ್ಲಿ ತಲೆಮರೆಸಿಕೊಂಡಿದ್ದ, ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಯನ್ನು ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನಗರದ ಗಾಳಿಪುರದ ‌ನಿವಾಸಿ ರಫೀಕ್‌ ಅಲಿಯಾಸ್‌ ಚಿಮ್ಟಿ (39) ಬಂಧಿತ ಅಪರಾಧಿ. ವಿಶೇಷ ತನಿಖಾ ತಂಡವು ನವೆಂಬರ್‌ 30ರಂದು ಬಳ್ಳಾರಿಯಲ್ಲಿ ರಫೀಕ್‌ನನ್ನು ಬಂಧಿಸಿದ್ದು, ಡಿ.1ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 

‘ಅಪರಾಧ ಚಟುವಟಿಕೆಗಳ ಹಿನ್ನೆಲೆಯುಳ್ಳ ರಫೀಕ್‌ ವಿರುದ್ಧ ಜಿಲ್ಲೆ ಹಾಗೂ ನಂಜನಗೂಡಿನ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿವೆ. 2009ರಲ್ಲಿ ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕಾರಾಗೃಹದಲ್ಲಿದ್ದ. ನಗರ ಪಟ್ಟಣ ಠಾಣೆಯಲ್ಲಿ 2008ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಫೀಕ್‌ನನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕಾಗಿತ್ತು. 2018ರ ಮೇ 21ರಂದು ಮೈಸೂರಿನ ಕಾರಾಗೃಹದಿಂದ ಪೊಲೀಸರು ಕರೆ ತಂದಿದ್ದಾಗ, ಬೆಂಗಾವಲು ಪೊಲೀಸರ ಕಣ್ತಪ್ಪಿಸಿ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಓಡಿ ಹೋಗಿದ್ದ’ ಎಂದು ಅವರು ಹೇಳಿದರು. 

‘ಮೂರು ವರ್ಷಗಳಿಂದ ಅವನನ್ನು ಪತ್ತೆ ಹಚ್ಚಲು ಪ್ರಯತ್ನ ಪಟ್ಟಿದ್ದರೂ ಸಾಧ್ಯವಾಗಿರಲಿಲ್ಲ. ತಿಂಗಳ ಹಿಂದೆ ರಫೀಕ್‌ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕ್ಷಿಪ್ರವಾಗಿ ತನಿಖೆ ನಡೆಸಿರುವ ತಂಡ ಆತನನ್ನು ಬಳ್ಳಾರಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದೆ’ ಎಂದರು. 

‘ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಬಿ.ಮಹೇಶ್‌, ಪೂರ್ವ ಠಾಣೆ ಇನ್‌ಸ್ಪೆಕ್ಟರ್‌ ಎಸ್‌.ಆನಂದ್‌ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಡಿಎಸ್‌ಬಿ ವಿಭಾಗದ ಇನ್‌ಸ್ಪೆಕ್ಟರ್‌ ಮಹದೇವಶೆಟ್ಟಿ, ಸಂತೇಮರಹಳ್ಳಿ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ತಾಜುದ್ದೀನ್‌, ಹೆಡ್‌ ಕಾನ್‌ಸ್ಟೆಬಲ್‌ಗಳಾದ ಸೈಯದ್‌ ಅಸಾದುಲ್ಲ, ಸುರೇಶ್‌ ಎಚ್‌.ವಿ., ಶಂಕರಾಜು, ಶಿವಕುಮಾರ್‌, ಕಾನ್‌ಸ್ಟೆಬಲ್‌ಗಳಾದ ಜಡೇಸ್ವಾಮಿ, ಪ್ರಸಾದ್‌ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದೆ’ ಎಂದು ಎಸ್‌ಪಿ ಅವರು ಹೇಳಿದರು. 

ಪತ್ನಿ ಮಕ್ಕಳೊಂದಿಗೆ ಬಳ್ಳಾರಿಯಲ್ಲಿ ನೆಲೆಸಿದ್ದ: ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌.ಸುಂದರ್‌ರಾಜ್‌ ಅವರು ಮಾತನಾಡಿ, ‘ರಫೀಕ್‌ನ ಪತ್ತೆಗೆ ಈ ಹಿಂದೆಯೇ ಒಂದು ತಂಡ ರಚಿಸಲಾಗಿತ್ತು. ಆದರೆ, ಪತ್ತೆ ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಪೊಲೀಸ್‌ ಮಹಾನಿರ್ದೇಶಕರು ಪರಿಶೀಲನಾ ಸಭೆ ನಡೆಸಿದ್ದ ಸಂದರ್ಭದಲ್ಲಿ ಅಪರಾಧಿ ಪತ್ತೆಗೆ ಕ್ರಮವಹಿಸಬೇಕು ಎಂದು ಸೂಚಿಸಿದ್ದರು. ಅದರಂತೆ ಹೊಸ ತಂಡವನ್ನು ರಚಿಸಲಾಗಿತ್ತು. ಅಪರಾಧಿಯ ಹಿನ್ನೆಲೆಯನ್ನು ಅಧ್ಯಯನ ಮಾಡಿ ಆತನ ಹಾಗೂ ಕುಟುಂಬದವರ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದಾಗ, ರಫೀಕ್‌ ತನ್ನ ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಬಳ್ಳಾರಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ದೊರೆಯಿತು’ ಎಂದರು. 

‘ಬಳ್ಳಾರಿಯ ಕೊಳೆಗೇರಿಯೊಂದರಲ್ಲಿ ಆತ ಕುಟುಂಬದೊಂದಿಗೆ ನೆಲೆಸಿದ್ದ. ಹೋಟೆಲ್‌ ಒಂದರಲ್ಲಿ ಪರೋಟಾ ತಯಾರಿಸುವ ಕೆಲಸ ಮಾಡುತ್ತಿದ್ದ. ಈಗ ಆತನ ಮುಖಚರ್ಯೆ ಬದಲಾಗಿತ್ತು. ಹಾಗಾಗಿ, ಬಳ್ಳಾರಿಯಲ್ಲಿರುವವನು ಆತನೇ ಎಂಬುದನ್ನು ಖಚಿತಪಡಿಸಿಕೊಂಡ ನಂತರ, ಅಲ್ಲಿನ ಪೊಲೀಸರ ಸಹಾಯವನ್ನೂ ಪಡೆದು ಆತನನ್ನು ಬಂಧಿಸಲಾಯಿತು. ಜಿಲ್ಲೆಯಿಂದ ಸಬ್‌ ಇನ್‌ಸ್ಪೆಕ್ಟರ್‌ ತಾಜುದ್ದೀನ್‌, ಸುರೇಶ್, ಮೋಹನ್‌ ಕುಮಾರ್‌ ಅವರು ಬಳ್ಳಾರಿಗೆ ಹೋಗಿದ್ದರು’ ಎಂದು ಅವರು ವಿವರಿಸಿದರು. 

ತಂಡಕ್ಕೆ ಬಹುಮಾನ: ರಫೀಕ್‌ನನ್ನು ಪತ್ತೆ ಹಚ್ಚಿದ ಪೊಲೀಸ್‌ ತಂಡದ ಸದಸ್ಯರಿಗೆ ದಿವ್ಯಾ ಸಾರಾ ಥಾಮಸ್‌ ಅವರು ಇದೇ ಸಂದರ್ಭದಲ್ಲಿ ಶ್ಲಾಘನೆ ಪತ್ರ ಹಾಗೂ ನಗದು ಬಹುಮಾನ ನೀಡಿದರು. 

ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಇನ್‌ಸ್ಪೆಕ್ಟರ್‌ಗಳಾದ ಬಿ.ಮಹೇಶ್‌, ಆನಂದ್‌, ಸಬ್‌ ಇನ್‌ಸ್ಪೆಕ್ಟರ್‌ ತಾಜುದ್ದೀನ್‌ ಹಾಗೂ ತನಿಖಾ ತಂಡದ ಸದಸ್ಯರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು