ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ₹50 ಸಾವಿರ ಲಂಚ ಪಡೆಯುತ್ತಿದ್ದ ತೋಟಗಾರಿಕಾ ಎಡಿ ಎಸಿಬಿ ಬಲೆಗೆ

Last Updated 5 ಫೆಬ್ರುವರಿ 2021, 14:23 IST
ಅಕ್ಷರ ಗಾತ್ರ

ಚಾಮರಾಜನಗರ: ತುಂತುರು ಹಾಗೂ ಹನಿ ನೀರಾವರಿ ಸಹಾಯಧನ ಯೋಜನೆಗೆ ಸಂಬಂಧಿಸಿದ ‌ಬಿಲ್‌ಗಳನ್ನು ಮಂಜೂರು ಮಾಡಲು ದೂರುದಾರರಿಂದ ₹50 ಸಾವಿರ ಲಂಚ ಪಡೆಯುತ್ತಿದ್ದ ಗುಂಡ್ಲುಪೇಟೆಯ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಶಿವಲಿಂಗಪ್ಪ ಅವರು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

₹50 ಸಾವಿರ ನಗದನ್ನು ವಶಕ್ಕೆ ಪಡೆದುಕೊಂಡಿರುವ ಎಸಿಬಿ ಅಧಿಕಾರಿಗಳು, ಶಿವ‌ಲಿಂಗಪ್ಪ ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಕಡಬೂರು ಗ್ರಾಮದ ನಿವಾಸಿ ಮಂಜುನಾಥ ಕೆ.ಎಸ್‌ ಅವರು ಗುಂಡ್ಲುಪೇಟೆಯಲ್ಲಿ ತುಂತುರು ನೀರಾವರಿ ಹಾಗೂ ಹನಿ ನೀರಾವರಿ ಉಪಕರಣಗಳನ್ನು ಮಾರಾಟ ಮಾಡುವ ಅಂಗಡಿಯನ್ನು (ಮಂಜು ಎಂಟರ್‌ಪ್ರೈಸಸ್‌) ಇಟ್ಟುಕೊಂಡಿದ್ದಾರೆ. ತೋಟಗಾರಿಕೆ ಇಲಾಖೆ ಅನುಷ್ಠಾನಗೊಳಿಸುವ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಅಳವಡಿಸಲು ಸಹಾಯಧನ ಪಡೆದಿದ್ದ ಕೆಲವು ರೈತರು, ಅದಕ್ಕೆ ಬೇಕಾದ ಉಪಕರಣಗಳನ್ನು ಮಂಜುನಾಥ ಅವರ ಅಂಗಡಿಯಿಂದ ಖರೀದಿ ಮಾಡಿ ಜಮೀನಿನಲ್ಲಿ ಅಳವಡಿಸಿಕೊಂಡಿದ್ದರು.

ಅಧಿಕಾರಿಗಳು ರೈತರ ಸಮ್ಮುಖದಲ್ಲಿ ರೈತರ ಜಮೀನುಗಳಿಗೆ ತೆರಳಿ ಯೋಜನೆ ಅನುಷ್ಠಾನದ ಬಗ್ಗೆ ಖಾತ್ರಿ ಪಡಿಸಿದ್ದರು. 2020ನೇ ಸಾಲಿನ ಸಹಾಯಧನದ ಅಕ್ಟೋಬರ್‌, ನವೆಂಬರ್‌ ತಿಂಗಳುಗಳ 20 ಕಡತಗಳ ಬಿಲ್‌ಗಳನ್ನು ಮಂಜೂರು ಮಾಡುವಂತೆ ಮಂಜುನಾಥ ಅವರುಮಂಜುನಾಥ್‌ ಅವರು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಮನವಿ ಸಲ್ಲಿಸಿದ್ದರು.

ಈ ಸಂಬಂಧ ಶಿವಲಿಂಗಪ್ಪ ಅವರನ್ನು ಭೇಟಿ ಮಾಡಿದಾಗ, ಬಿಲ್‌ ಮಂಜೂರು ಮಾಡುವುದಕ್ಕೆ ₹50 ಸಾವಿರ ಹಣ ಕೇಳಿದ್ದರು. ಇದಕ್ಕೆ ಮಂಜುನಾಥ್‌ ಒಪ್ಪಿರಲಿಲ್ಲ. ಹಾಗಾಗಿ, ಕೆಲವು ಬಿಲ್‌ಗಳನ್ನು ಶಿವಲಿಂಗಪ್ಪ ಬಾಕಿ ಇರಿಸಿಕೊಂಡಿದ್ದರು.

ಗುರುವಾರ (ಫೆ.4) ದೂರವಾಣಿ ಮೂಲಕ ಶಿವಲಿಂಗಪ‍್ಪ‍ ಅವರನ್ನು ಸಂಪರ್ಕಿಸಿದಾಗ, ಲಂಚದ ಹಣಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಜುನಾಥ ಅವರು ಶುಕ್ರವಾರ ಬೆಳಿಗ್ಗೆ ಎಸಿಬಿಗೆ ದೂರು ನೀಡಿದ್ದರು.

ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಶಿವಲಿಂಗಪ್ಪ ಅವರು ತಮ್ಮ ಕಚೇರಿಯಲ್ಲಿ ಮಂಜುನಾಥ ಅವರಿಂದ ₹50 ಸಾವಿರ ಲಂಚ ಪಡೆಯುತ್ತಿದ್ದಾಗ ಅವರನ್ನು ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಡಿವೈಎಸ್‌ಪಿ ಸದಾನಂದ ಎ.ತಿಪ‍್ಪಣ್ಣವರ್‌, ಇನ್‌ಸ್ಪೆಕ್ಟರ್‌ಗಳಾದ ಕಿರಣ್‌ಕುಮಾರ್‌, ದೀಪಕ್‌ ಎಲ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT